ಬೆಂಗಳೂರು: ಸ್ಯಾಂಡಲ್ವುಡ್ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ, ಇದೀಗ ಟಾಲಿವುಡ್ ಹಾಗೂ ಬಾಲಿವುಡ್ನಲ್ಲೂ ಮಿಂಚುತ್ತಿರುವ ನಟಿ ಶ್ರೀಲೀಲಾ (Sreeleela) ಸೋಶಿಯಲ್ ಮೀಡಿಯಾದಲ್ಲಿ ಹೊಸ ಚರಿತ್ರೆ ಸೃಷ್ಟಿಸಿದ್ದಾರೆ. ಸಸರಣಿ ಸಿನಿಮಾಗಳಲ್ಲಿ ಅಭಿನಯಿಸುತ್ತಾ ಬ್ಯುಸಿಯಾಗಿರುವ ಅವರು, ಸಾಮಾಜಿಕ ಜಾಲತಾಣದಲ್ಲೂ ಭಾರಿ ಸಂಚಲನ ಮೂಡಿಸುವ ಮೂಲಕ ಡಿಜಿಟಲ್ ಜಗತ್ತಿನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
11.1 ಮಿಲಿಯನ್ಸ್ ಲೈಕ್ಸ್ ಪಡೆದ ವಿಡಿಯೋ
ಇತ್ತೀಚೆಗೆ ನಟಿ ಶ್ರೀಲೀಲಾ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದ ವಿಡಿಯೋ ಒಂದಕ್ಕೆ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನೂತನ ವಿಡಿಯೋ ಬರೋಬ್ಬರಿ 25.8 ಕೋಟಿಗೂ ಅಧಿಕ ವೀವ್ಸ್ ಪಡೆಯುವುದರ ಜೊತೆಗೆ 1.11 ಕೋಟಿಗೂ (11.1 ಮಿಲಿಯನ್) ಹೆಚ್ಚು ಲೈಕ್ಸ್ಗಳನ್ನು ಬಾಚಿಕೊಂಡಿದೆ. ಈ ಮೂಲಕ ಭಾರತೀಯ ಚಿತ್ರರಂಗದ ಪ್ರಮುಖ ತಾರೆಯರ ಡಿಜಿಟಲ್ ದಾಖಲೆಗಳನ್ನು ಇವರು ಸುಲಭವಾಗಿ ಧೂಳೀಪಟ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಲೈಕ್ಸ್ ಗಿಟ್ಟಿಸಿಕೊಂಡ ಭಾರತೀಯ ನಟ-ನಟಿಯರ ಸಾಲಿನಲ್ಲಿ ಶ್ರೀಲೀಲಾ ಅವರ ಈ ಪೋಸ್ಟ್ ಮುಂಚೂಣಿಯಲ್ಲಿ ನಿಂತಿದೆ. ತಮಿಳಿನ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರ ಪೋಸ್ಟ್ ಪಡೆದಿದ್ದ 97 ಲಕ್ಷ ಲೈಕ್ಸ್ ದಾಖಲೆಯನ್ನು ಶ್ರೀಲೀಲಾ ಮೀರಿಸಿದ್ದಾರೆ. ಅಷ್ಟೇ ಅಲ್ಲದೆ, ತೆಲುಗಿನ ಎನರ್ಜಿಟಿಕ್ ಸ್ಟಾರ್ ರಾಮ್ ಪೋತಿನೇನಿ ಹಾಗೂ ಬಾಲಿವುಡ್ನ ಸುಲ್ತಾನ್ ಸಲ್ಮಾನ್ ಖಾನ್ ಅವರ ಪೋಸ್ಟ್ಗಳ ಲೈಕ್ಸ್ ಸಂಖ್ಯೆಯನ್ನೂ ಸಹ ಇವರು ಸುಲಭವಾಗಿ ಹಿಂದಿಕ್ಕಿದ್ದಾರೆ.
ಕ್ರೇಜ್ ಹುಟ್ಟಿಸಿರುವ ನಟಿ ಶ್ರೀಲೀಲಾ
ಇನ್ಸ್ಟಾಗ್ರಾಮ್ನಲ್ಲಿ ಸುಮಾರು 1.65 ಕೋಟಿಗೂ ಅಧಿಕ ಹಿಂಬಾಲಕರನ್ನು ಹೊಂದಿರುವ ಶ್ರೀಲೀಲಾ, ತಮ್ಮ ಬಾಲ್ಯದ ಭರತನಾಟ್ಯದ ವಿಡಿಯೋಗಳು ಹಾಗೂ ಆಕರ್ಷಕ ಫೋಟೋಶೂಟ್ಗಳ ಮೂಲಕ ಸದಾ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಮುಖ್ಯವಾಗಿ ಅವರ ನೃತ್ಯ ಶೈಲಿ ಮತ್ತು ಕೌಶಲ್ಯವೇ ಸೋಶಿಯಲ್ ಮೀಡಿಯಾದಲ್ಲಿ ಪ್ರತ್ಯೇಕ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಸಿನಿಮಾರಂಗದಲ್ಲಿ ತಮ್ಮ ಅದ್ಭುತ ಡ್ಯಾನ್ಸ್ ಹಾಗೂ ಅಭಿನಯದ ಮೂಲಕ ಅಪಾರ ಪ್ರಮಾಣದ ಯುವಕರ ನೆಚ್ಚಿನ ನಟಿಯಾಗಿರುವ ಶ್ರೀಲೀಲಾ ಅವರಿಗೆ ಈ ಸೋಶಿಯಲ್ ಮೀಡಿಯಾ ಕ್ರೇಜ್, ಅವರ ಮುಂದಿನ ಬಾಲಿವುಡ್ ಹಾಗೂ ಟಾಲಿವುಡ್ ಸಿನಿಮಾಗಳ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸಲು ದಾರಿಯಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಬಾಂಬ್ ಸಿಡಿಸಿದ ವೈಷ್ಣವಿ: ಸ್ಪರ್ಧಿಗಳ ವರ್ತನೆಗೆ ತೀವ್ರ ಬೇಸರ!
