ಮೈಸೂರು: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಧ್ವಜಾರೋಹಣ ನೆರವೇರಿಸಲು ಸರ್ಕಾರ 30 ಸಚಿವರಿಗೆ ಜವಾಬ್ದಾರಿ ನೀಡಿ ಅಧಿಕೃತ ಪಟ್ಟಿ ಬಿಡುಗಡೆ ಮಾಡಿದೆ. ಇದೇ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನು ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರಿಗೆ ನೀಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ವಿಧಾನಪರಿಷತ್ ಮಾಜಿ ಸದಸ್ಯ ಎ.ಎಚ್. ವಿಶ್ವನಾಥ್ (H Vishwanath) ಸರ್ಕಾರದ ಈ ನಿರ್ಧಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಸಿದ್ದರಾಮಯ್ಯ ಅವರ ಹಸ್ತಕ್ಷೇಪ ಮಿತಿಮೀರಿದೆ
ಸುದ್ದಿಗಾರರೊಂದಿಗೆ ಮಾತನಾಡಿದ ಎಚ್. ವಿಶ್ವನಾಥ್, ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ನಂತರವೂ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರ ಹಸ್ತಕ್ಷೇಪ ಮಿತಿಮೀರಿದೆ ಎಂದು ಗಂಭೀರ ಆರೋಪ ಮಾಡಿದರು. ಸಿದ್ದರಾಮಯ್ಯ ಅವರು ಆಡಳಿತದಲ್ಲಿ ತಲೆಹಾಕುವುದನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಹೊಸ ಮುಖ್ಯಮಂತ್ರಿಗಳಿಗೆ ಮುಕ್ತವಾಗಿ ಕೆಲಸ ಮಾಡಲು ಹಾಗೂ ತಮಗೆ ಇಷ್ಟಬಂದಂತೆ ಸಚಿವ ಸಂಪುಟ ರಚಿಸಿಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದು ಒತ್ತಾಯಿಸಿದರು.
ಪುತ್ರ ವ್ಯಾಮೋಹ ಅತಿಯಾಗಿದೆ
ಇದೇ ವೇಳೆ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮೈಸೂರು ಜಿಲ್ಲೆಯ ಜವಾಬ್ದಾರಿ ನೀಡಿರುವುದನ್ನು ಕಟುವಾಗಿ ಟೀಕಿಸಿದ ವಿಶ್ವನಾಥ್, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪುತ್ರ ವ್ಯಾಮೋಹ ಅತಿಯಾಗಿದೆ ಎಂದು ಲೇವಡಿ ಮಾಡಿದರು. ಯಾವುದೇ ಆಡಳಿತಾತ್ಮಕ ಅನುಭವವಿಲ್ಲದ ಮಂಗ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮೈಸೂರಿನಂತಹ ಮಹತ್ವದ ಜಿಲ್ಲೆಯ ಉಸ್ತುವಾರಿ ನೀಡಿರುವುದು ಸರಿಯಲ್ಲ. ಮೈಸೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಾಂಸ್ಕೃತಿಕ ನಗರಿಯಾಗಿದ್ದು, ಇಲ್ಲಿಗೆ ದೇಶ-ವಿದೇಶಗಳ ಗಣ್ಯರು ಭೇಟಿ ನೀಡುತ್ತಾರೆ. ಅಂತಹ ಪ್ರಮುಖರ ಜೊತೆ ವ್ಯವಹರಿಸಲು ಮತ್ತು ಜಿಲ್ಲೆಯನ್ನು ಮುನ್ನಡೆಸಲು ಯತೀಂದ್ರ ಅವರಿಗೆ ಸೂಕ್ತ ರಾಜಕೀಯ ಅನುಭವವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಯತೀಂದ್ರ ಮೆರಿಟ್ ಮೇಲಲ್ಲ, ಅಪ್ಪನ ಕೋಟಾದಲ್ಲಿ ಮಂತ್ರಿಯಾಗಿದ್ದಾರೆ”: ಸಿದ್ದರಾಮಯ್ಯ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ಗಂಭೀರ ಆರೋಪ!
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಭಾಗದಲ್ಲಿ ತಮ್ಮ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರನ್ನು ದೊಡ್ಡ ರಾಜಕಾರಣಿಯನ್ನಾಗಿ ಬೆಳೆಸುವ ಹಠಕ್ಕೆ ಬಿದ್ದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಲ್ಲಿನ ಇತರ ಪ್ರಭಾವಿ ಕಾಂಗ್ರೆಸ್ ನಾಯಕರ ರಾಜಕೀಯ ಬದುಕನ್ನೇ ಸರ್ವನಾಶ ಮಾಡಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದ್ದಾರೆ.
“ಭಾರತ ದೇಶವು ಯಾವುದೇ ಕಾರಣಕ್ಕೂ ಹಿಂದೂ ರಾಷ್ಟ್ರವಾಗಬಾರದು” ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಇತ್ತೀಚಿನ ಹೇಳಿಕೆಗೆ ಮೈಸೂರಿನಲ್ಲಿ ಕಟುವಾಗಿ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, “ಭಾರತವನ್ನು ಹೊಸದಾಗಿ ಯಾರೂ ಹಿಂದೂ ರಾಷ್ಟ್ರ ಮಾಡಲು ಹೊರಟಿಲ್ಲ. ಈ ದೇಶ ಸ್ವಾಭಾವಿಕವಾಗಿಯೇ ಹಿಂದೂ ರಾಷ್ಟ್ರವಾಗಿದೆ. ಇವತ್ತು ಯತೀಂದ್ರ ಅವರಿಗೆ ಸಚಿವ ಸ್ಥಾನ ಸಿಕ್ಕಿರುವುದೇ ಇದೇ ಹಿಂದೂ ಧರ್ಮದ ಜಾತಿ ವ್ಯವಸ್ಥೆಯ ಲೆಕ್ಕಾಚಾರದಿಂದ ಎಂಬುದನ್ನು ಅವರು ಮರೆಯಬಾರದು” ಎಂದು ತಿರುಗೇಟು ನೀಡಿದರು.
ಪುತ್ರನಿಗಾಗಿ ಆಪ್ತರನ್ನೇ ಮೂಲೆಗುಂಪು ಮಾಡಿದ ಸಿದ್ದರಾಮಯ್ಯ: ತಮ್ಮ ಮಗನಿಗೆ ಮಂತ್ರಿ ಸ್ಥಾನ ಕೊಡಿಸುವ ಏಕೈಕ ಉದ್ದೇಶದಿಂದ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಮೈಸೂರು ಭಾಗದ ಹಿರಿಯ ಕಾಂಗ್ರೆಸ್ ನಾಯಕರನ್ನು ರಾಜಕೀಯವಾಗಿ ಮುಗಿಸಿದ್ದಾರೆ ಎಂದು ಪ್ರತಾಪ್ ಸಿಂಹ ಆರೋಪಿಸಿದರು. ಹಿರಿಯ ನಾಯಕರಾದ ಡಾ. ಎಚ್.ಸಿ. ಮಹದೇವಪ್ಪ ಮತ್ತು ಕೆ. ವೆಂಕಟೇಶ್ ಸೇರಿದಂತೆ ಎಲ್ಲರನ್ನೂ ಆಡಳಿತದಲ್ಲಿ ಮೂಲೆಗುಂಪು ಮಾಡಲಾಗಿದೆ. ಅಷ್ಟೇ ಅಲ್ಲದೆ, ಪ್ರಭಾವಿ ನಾಯಕ ತನ್ವೀರ್ ಸೇಠ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಂತೆ ತಡೆದಿದ್ದೇ ಸಿದ್ದರಾಮಯ್ಯ ಎಂದು ಅವರು ನೇರ ವಾಗ್ದಾಳಿ ನಡೆಸಿದರು.
ದಲಿತರ ಧ್ವನಿಯಾಗಿದ್ದ ತಮ್ಮ ಪರಮಾಪ್ತ ಸ್ನೇಹಿತ ಮಹದೇವಪ್ಪ ಅವರ ಸ್ನೇಹವನ್ನೂ ಬದಿಗಿಟ್ಟು, ಕೇವಲ ಸ್ವಂತ ಮಗನ ತಲೆಯ ಮೇಲಷ್ಟೇ ಅಧಿಕಾರದ ಕಿರೀಟ ಇರಬೇಕೆಂದು ಸಿದ್ದರಾಮಯ್ಯ ಬಯಸಿದ್ದಾರೆ. ಇದಕ್ಕಾಗಿ ಸುತ್ತಲಿನ ಎಲ್ಲ ನಾಯಕರನ್ನು ಬಳಸಿಕೊಂಡು ಕೊನೆಗೆ ರಾಜಕೀಯವಾಗಿ ಬಲಿ ಕೊಟ್ಟಿದ್ದಾರೆ. ಯತೀಂದ್ರ ಅವರು ತಮ್ಮ ಸ್ವಂತ ಅರ್ಹತೆ (ಮೆರಿಟ್) ಅಥವಾ ಸಾಧನೆಯಿಂದ ಮಂತ್ರಿಯಾಗಿಲ್ಲ, ಕೇವಲ ತಂದೆಯ ಕೋಟಾದ ಅಡಿಯಲ್ಲಿ ಮಂತ್ರಿಗಿರಿ ಗಿಟ್ಟಿಸಿಕೊಂಡಿದ್ದಾರೆ ಎಂದು ಸಿಂಹ ಕಿಡಿಕಾರಿದರು.
ಇದೇ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಹಿಳಾ ವಿರೋಧಿ ಧೋರಣೆಯ ಆರೋಪ ಮಾಡಿದ ಪ್ರತಾಪ್ ಸಿಂಹ, ರಾಜ್ಯ ಸಚಿವ ಸಂಪುಟದಲ್ಲಿ ಈ ಬಾರಿ ಯಾವುದೇ ಮಹಿಳೆಗೆ ಸ್ಥಾನ ನೀಡದಿರುವುದು ಇದಕ್ಕೆ ಸಾಕ್ಷಿಯಾಗಿದೆ. ಹಿರಿಯ ನಾಯಕಿಯರಾದ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಗಾಯತ್ರಿ ಶಾಂತೇಗೌಡ ಅವರಿಗೆ ಸಚಿವ ಸ್ಥಾನ ಸಿಗದಂತೆ ಒಳಸಂಚು ಮಾಡಿದ್ದೇ ಸಿದ್ದರಾಮಯ್ಯ ಎಂದು ಗಂಭೀರ ಆರೋಪ ಮಾಡಿದರು.
ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ ಎಫೆಕ್ಟ್: ಆಗಸ್ಟ್ 15 ರಂದು ವಿಧಾನಸೌಧ ಮೆಟ್ರೋ ನಿಲ್ದಾಣ ಸಾರ್ವಜನಿಕರಿಗೆ ತಾತ್ಕಾಲಿಕ ಬಂದ್!
