ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ನಡುವಿನ ರಾಜಕೀಯ ಜಿದ್ದಾಜಿದ್ದು ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಬೆಂಗಳೂರಿನಲ್ಲಿ (Big News) ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ನೈಸ್ (NICE) ಯೋಜನೆಯ ಅಕ್ರಮಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರು ಕೇವಲ ದಾಖಲೆಗಳನ್ನು ಮಾತ್ರವಲ್ಲದೆ, ಅಲ್ಲೋಲ-ಕಲ್ಲೋಲ ಸೃಷ್ಟಿಸುವಂತಹ ಎರಡು ಪ್ರತ್ಯೇಕ ಆಡಿಯೋ ಕ್ಲಿಪ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ಡಿಕೆ ಶಿವಕುಮಾರ್ ಹಾಗೂ ನೈಸ್ ಸಂಸ್ಥೆಯ ಅಶೋಕ್ ಖೇಣಿ ಮಾತನಾಡಿದ್ದಾರೆ ಎನ್ನಲಾದ ಸಂಭಾಷಣೆಯ ತುಣುಕುಗಳನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿ ಭಾರಿ ಅಕ್ರಮದ ಆರೋಪ ಮಾಡಿದ್ದಾರೆ.
‘ಅಪ್ಪನ ಬಟ್ಟೆ ಮಗನಿಗೆ ಟೇಲರ್ ಮಾಡಿದಂತೆ ಅಕ್ರಮ’ ನೈಸ್ ಯೋಜನೆಯಲ್ಲಿ ಮೂಲ ‘ಫ್ರೇಮ್ ವರ್ಕ್ ಅಗ್ರಿಮೆಂಟ್’ ಅನ್ನು ತಮಗೆ ಬೇಕಾದಂತೆ ತಿದ್ದುಪಡಿ ಮಾಡಿ ಬೃಹತ್ ಮಟ್ಟದ ಹಗರಣ ನಡೆಸಲಾಗಿದೆ ಎಂದು ಹೆಚ್‌ಡಿಕೆ ವೀರೋಧ ವ್ಯಕ್ತಪಡಿಸಿದ್ದಾರೆ. “ಈ ಸಂಬಂಧ 2026ರ ಜುಲೈ 29ರಂದು ಸುಪ್ರೀಂಕೋರ್ಟ್ ನೀಡಿದ ತೀರ್ಪಿನಲ್ಲೂ ಈ ಅಕ್ರಮದ ಉಲ್ಲೇಖವಿದೆ. ತಂದೆಯ ಅಳತೆಯ ಬಟ್ಟೆಯನ್ನು ಮಗನಿಗೆ ಸರಿಹೊಂದುವಂತೆ ಹೊಲಿದುಕೊಡುವ ಟೇಲರ್‌ನಂತೆ, ನೈಸ್ ಸಂಸ್ಥೆಗೆ ಅನುಕೂಲ ಮಾಡಿಕೊಡಲು ಅಂದಿನ ನಗರಾಭಿವೃದ್ಧಿ ಸಚಿವರಾಗಿದ್ದ ಡಿಕೆ ಶಿವಕುಮಾರ್ ಟೇಲರಿಂಗ್ ಕೆಲಸ ಮಾಡಿದ್ದಾರೆ. 2003ರಲ್ಲಿ ಕೇವಲ 4 ಕೋಟಿ ರೂಪಾಯಿ ಮೌಲ್ಯ ಹೊಂದಿದ್ದ ಅವರ ಆಸ್ತಿ, ಇವತ್ತು 1,413 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದೇನಾ ಇವರು ಮಾಡಿದ ಸಾಧನೆ?” ಎಂದು ಕುಮಾರಸ್ವಾಮಿ ಕಟುವಾಗಿ ಪ್ರಶ್ನಿಸಿದ್ದಾರೆ.
ಖೇಣಿ ಆಡಿಯೋದಲ್ಲಿ ‘ವಿಧಾನಸೌಧ ಬರೆದುಕೊಡಬೇಕು’ ಎನ್ನುವ ಮಾತು! ಕುಮಾರಸ್ವಾಮಿ ಬಿಡುಗಡೆ ಮಾಡಿದ ಮೊದಲ ಆಡಿಯೋದಲ್ಲಿ ಅಶೋಕ್ ಖೇಣಿ ಮಾತನಾಡಿದ್ದಾರೆ ಎನ್ನಲಾಗಿದ್ದು, ಅದರಲ್ಲಿ ಅವರು “ಸರ್ಕಾರ ನನಗೆ ಕೊಡಬೇಕಾಗಿರುವ ನಷ್ಟ ಪರಿಹಾರ ಮತ್ತು ಬಾಕಿ ಮೊತ್ತದ ಲೆಕ್ಕ ನೋಡಿದರೆ ಸುಮಾರು 2 ಲಕ್ಷ ಕೋಟಿ ರೂಪಾಯಿ ತಲುಪುತ್ತದೆ. ರಾಜ್ಯ ಸರ್ಕಾರ ಈಗಾಗಲೇ ಗ್ಯಾರಂಟಿ ಯೋಜನೆಗಳಿಗೆ ಹಣ ನೀಡಿ ಆರ್ಥಿಕವಾಗಿ ಹೈರಾಣಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನನ್ನ ಬಾಕಿ ಹಣ ಕೊಡುವುದು ಸರ್ಕಾರಕ್ಕೆ ಸಾಧ್ಯವಿಲ್ಲ. ಒಂದು ವೇಳೆ ನಾನು ಈ ವ್ಯಾಜ್ಯವನ್ನು ತೆಗೆದುಕೊಂಡು ಕೋರ್ಟ್‌ಗೆ ಹೋದರೆ, ಸರ್ಕಾರ ವಿಧಾನ ಸೌಧ ಅಥವಾ ವಿಕಾಸ ಸೌಧವನ್ನೇ ನನಗೆ ಬರೆದುಕೊಡಬೇಕಾಗುತ್ತದೆ” ಎಂದು ಹೇಳಿರುವುದು ದಾಖಲಾಗಿದೆ.
‘ನಿಮ್ಮ ಕುಟುಂಬವನ್ನು ಉಳಿಸಲೆಂದೇ ನಾನು ಬ್ಲ್ಯಾಕ್‌ಮೇಲ್ ಮಾಡುತ್ತಿರುವುದು’ ಇನ್ನು ಡಿಕೆ ಶಿವಕುಮಾರ್ ಮಾತನಾಡಿದ್ದಾರೆ ಎನ್ನಲಾದ ಮತ್ತೊಂದು ಆಡಿಯೋದಲ್ಲಿ, “ಕುಮಾರಸ್ವಾಮಿ ತಮ್ಮ ಸ್ವಂತ ಜಮೀನು ಉಳಿಸಿಕೊಳ್ಳಲು ನೈಸ್ ಸಂಸ್ಥೆಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ” ಎಂಬ ಮಾತುಗಳಿದ್ದವು. ಇದಕ್ಕೆ ನೇರವಾಗಿಯೇ ಸವಾಲು ಹಾಕಿದ ಕುಮಾರಸ್ವಾಮಿ, “ಶಿವಕುಮಾರ್ ಅವರೇ, ನಾನು ನಿಮ್ಮ ವಿರುದ್ಧ ಹಾಗೂ ಖೇಣಿ ವಿರುದ್ಧ ಬ್ಲ್ಯಾಕ್‌ಮೇಲ್ ಮಾಡುತ್ತಿರುವುದು ನಿಜ. ಆದರೆ ಅದು ನನ್ನ ಸ್ವಂತಕ್ಕಲ್ಲ, ನಿಮಗಾಗಿ! 1997-98ರಲ್ಲಿ ಸರ್ಕಾರದಿಂದ ನೋಟಿಫೈ ಆದ ಜಮೀನನ್ನು 2003ರಲ್ಲಿ ನಿಮ್ಮ ಸಹೋದರ ಡಿಕೆ ಸುರೇಶ್ 10 ಎಕರೆ ಖರೀದಿ ಮಾಡಿದ್ದಾರೆ. ನಾನು ಖೇಣಿಯವರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿರುವುದು ನಿಮ್ಮ ಸಹೋದರ ಡಿಕೆ ಸುರೇಶ್, ನಿಮ್ಮ ತಾಯಿ, ಗೌರಮ್ಮ, ಆಭರಣ ಗೌಡ ಮತ್ತು ನಿಂಗಮ್ಮ ಅವರ ಹೆಸರಿನಲ್ಲಿದ್ದ ಜಮೀನುಗಳನ್ನು ಅಕ್ರಮದಿಂದ ಉಳಿಸುವುದಕ್ಕಾಗಿಯೇ ಹೊರತು ನನ್ನ ಸ್ವಂತಕ್ಕಲ್ಲ” ಎಂದು ತಿರುಗೇಟು ನೀಡಿದ್ದಾರೆ.
ಗೋಮಾಳ ಮತ್ತು ಕೆಐಎಡಿಬಿ ಜಮೀನು ಅಕ್ರಮ ಹಸ್ತಾಂತರ ಆರೋಪ: ಸುಮಾರು 300 ಎಕರೆಗೂ ಅಧಿಕ ಸರ್ಕಾರಿ ಹಾಗೂ ಗೋಮಾಳದ ಜಮೀನನ್ನು ನಿಯಮಬಾಹಿರವಾಗಿ ಪ್ರಭಾವಿ ವ್ಯಕ್ತಿಗಳ ಹೆಸರಿಗೆ ಬರೆಸಿಕೊಳ್ಳಲಾಗಿದೆ ಎಂದು ಹೆಚ್‌ಡಿಕೆ ಗಂಭೀರ ಆರೋಪ ಮಾಡಿದ್ದಾರೆ. “ಕೆಐಎಡಿಬಿ (KIADB) ಈಗಾಗಲೇ ಭೂಸ್ವಾಧೀನ ಮಾಡಿಕೊಂಡಿದ್ದ ಜಾಗವನ್ನು ಡಿಕೆ ಸಹೋದರರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಭೂ ಪರಿವರ್ತನೆಗೆ ಡಿಕೆ ಸುರೇಶ್ ಅರ್ಜಿ ಸಲ್ಲಿಸಿದರೆ, ಅದರ ಅಧಿಕೃತ ಪ್ರತಿಯನ್ನು ಡಿಕೆ ಶಿವಕುಮಾರ್ ಹೆಸರಿಗೆ ನೀಡಲಾಗುತ್ತದೆ. ಆ ಬಳಿಕ 2011ರಲ್ಲಿ ಶೋಭಾ ಡೆವಲಪರ್ಸ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. 2015ರಲ್ಲಿ ನೈಸ್ ಸಂಸ್ಥೆಯು ಶೋಭಾ ಡೆವಲಪರ್ಸ್‌ಗೆ ಆ 10 ಎಕರೆ ಜಮೀನಿಗೆ ನಿರಾಕ್ಷೇಪಣಾ ಪತ್ರ (NoC) ನೀಡುತ್ತದೆ. ಈ ಜಮೀನು ಸುರೇಶ್ ಮತ್ತು ಗೌರಮ್ಮ ಹೆಸರಲ್ಲಿದ್ದರೂ, ಹಿಂಬಾಗಿಲ ಮೂಲಕ ಕಾನೂನುಬಾಹಿರವಾಗಿ ವ್ಯವಹಾರ ನಡೆಸಲಾಗಿದೆ” ಎಂದು ದಾಖಲೆ ಸಮೇತ ವಿವರಿಸಿದ್ದಾರೆ.
ಇದನ್ನೂ ಓದಿ: ಬಿಪಿ, ಹಾರ್ಟ್ ಅಟ್ಯಾಕ್ ತಡೆಗೆ ಆರೋಗ್ಯ ಇಲಾಖೆ ಬಿಗ್ ಅಲರ್ಟ್: ಉಪ್ಪು ಬಳಕೆಗೆ ಕಟ್ಟುನಿಟ್ಟಿನ ಗೈಡ್‌ಲೈನ್ಸ್ ಪ್ರಕಟ!
