TOP NEWS

Renukaswamy Case: ವೀಡಿಯೋ ಕಾನ್ಫರೆನ್ಸ್‌ನಲ್ಲೇ ಸಿಕ್ಕಿಬಿದ್ದ ಪವಿತ್ರಾಗೌಡ ಸುಳ್ಳು

Court Raps Jail Authorities As Co Accused Pavithra Gowda Caught Wearing Headphones in Virtual Hearing

ಬೆಂಗಳೂರು: ನಟ ದರ್ಶನ್ ಹಾಗೂ ಇತರೆ ಆರೋಪಿಗಳು ಭಾಗಿಯಾಗಿರುವ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ ಕಾನೂನು ಹೋರಾಟ ಹೈಕೋರ್ಟ್ ಮೆಟ್ಟಿಲೇರಿದ್ದು, ಇಂದು ನಡೆದ ಮಹತ್ವದ ವಿಚಾರಣೆಯ ವೇಳೆ ಜೈಲು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 59ನೇ ಸಿಸಿಹೆಚ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ದರ್ಶನ್ ಪರ ವಕೀಲರು ಸಲ್ಲಿಸಿರುವ ಮೇಲ್ಮನವಿಯ ಸುದೀರ್ಘ ವಿಚಾರಣೆ ಇಂದು ನಡೆಯಿತು. ಈ ಸಂದರ್ಭದಲ್ಲಿ ವಿವಿಧ ಕಾರಾಗೃಹಗಳಲ್ಲಿರುವ ದರ್ಶನ್ ಸೇರಿದಂತೆ ಪ್ರಕರಣದ ಎಲ್ಲಾ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ (ವಿಸಿ) ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.

ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾದ ಪವಿತ್ರಾಗೌಡ ವರ್ತನೆ

ಆದರೆ, ವಿಚಾರಣೆ ಆರಂಭವಾದ ಕೆಲ ಹೊತ್ತಿನ ನಂತರ ಎಂಟ್ರಿ ಕೊಟ್ಟ ಎ1 ಆರೋಪಿ ಪವಿತ್ರಾಗೌಡ ಅವರ ವರ್ತನೆ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದೆ. ವೀಡಿಯೋ ಕಾನ್ಫರೆನ್ಸ್ ಲಿಂಕ್‌ಗೆ ತಡವಾಗಿ ಜಾಯಿನ್ ಆದದ್ದಲ್ಲದೆ, ಅವರು ಕಿವಿಗೆ ಹೆಡ್‌ಫೋನ್ ಧರಿಸಿ ಕುಳಿತಿರುವುದು ನೇರವಾಗಿ ನ್ಯಾಯಾಧೀಶರ ಗಮನಕ್ಕೆ ಬಂದಿದೆ. ಇದನ್ನು ತಕ್ಷಣವೇ ಗುರುತಿಸಿದ ಜಡ್ಜ್, “ವಿಚಾರಣೆಗೆ ಹಾಜರಾಗಲು ಇಷ್ಟೊಂದು ತಡವಾಗಿದ್ದಕ್ಕೆ ಕಾರಣವೇನು? ಜೈಲಿನಲ್ಲಿ ಹೆಡ್‌ಫೋನ್ ಬಳಸಲು ಇವರಿಗೆ ಯಾರು ಅನುಮತಿ ನೀಡಿದ್ದು? ಅದರಲ್ಲೂ ಮಹಿಳಾ ಸೆಲ್‌ನಲ್ಲಿರುವ ಕೈದಿಗಳಿಗೆ ಇಂತಹ ಹೆಡ್‌ಫೋನ್‌ಗಳನ್ನು ಪೂರೈಸಲಾಗುತ್ತದೆಯೇ?” ಎಂದು ಜೈಲು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ತಬ್ಬಿಬ್ಬಾದ ಪವಿತ್ರಾಗೌಡ

ಈ ವೇಳೆ ತಬ್ಬಿಬ್ಬಾದ ಪವಿತ್ರಾಗೌಡ, ತಾವು ಯಾವುದೇ ಹೆಡ್‌ಫೋನ್ ಬಳಸುತ್ತಿಲ್ಲ ಎಂದು ಜಡ್ಜ್ ಮುಂದೆಯೇ ಸಮರ್ಥಿಸಿಕೊಳ್ಳಲು ಯತ್ನಿಸಿದರು. ಆದರೆ, ತಕ್ಷಣವೇ ಮಧ್ಯಪ್ರವೇಶಿಸಿದ ನ್ಯಾಯಾಧೀಶರು, “ನೀವು ಹೆಡ್‌ಫೋನ್ ಬಳಸುತ್ತಿರುವುದನ್ನು ನಾನು ಖುದ್ದಾಗಿ ಗಮನಿಸಿದ್ದೇನೆ” ಎಂದು ಖಡಕ್ ಆಗಿ ಹೇಳುವ ಮೂಲಕ ಅವರ ವಾದವನ್ನು ತಳ್ಳಿಹಾಕಿದರು. ಅಷ್ಟೇ ಅಲ್ಲದೆ, ಗಂಭೀರ ಪ್ರಕರಣದ ವಿಚಾರಣೆ ನಡೆಯುವಾಗ ಜೈಲು ಸಿಬ್ಬಂದಿ ಆರೋಪಿಗಳ ಮೇಲೆ ಇಟ್ಟಿರುವ ಕಣ್ಗಾವಲು ಮತ್ತು ಮೇಲ್ವಿಚಾರಣೆಯ ವೈಖರಿಯನ್ನು ಪ್ರಶ್ನಿಸಿದ ಕೋರ್ಟ್, ಈ ಹೆಡ್‌ಫೋನ್ ರಹಸ್ಯದ ಕುರಿತು ತಕ್ಷಣವೇ ಜೈಲು ಅಧಿಕಾರಿಗಳಿಂದ ಅಧಿಕೃತ ಸ್ಪಷ್ಟನೆ ಪಡೆದು ವರದಿ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ದರ್ಶನ್ ಕೋರ್ಟ್‌ಗೆ ಖುದ್ದು ಹಾಜರಾಗ್ತಾರಾ ಅಥವಾ ವೀಡಿಯೋ ಕಾನ್ಫರೆನ್ಸ್? ಎಸ್‌ಪಿಪಿ ಆಕ್ಷೇಪದ ಬೆನ್ನಲ್ಲೇ ಸೋಮವಾರಕ್ಕೆ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ನಟ ದರ್ಶನ್ ಅವರನ್ನು ನ್ಯಾಯಾಲಯಕ್ಕೆ ನೇರವಾಗಿ ಹಾಜರುಪಡಿಸುವ ವಿಚಾರ ಈಗ ಕಾನೂನು ಸಂಘರ್ಷಕ್ಕೆ ಕಾರಣವಾಗಿದೆ. ವಿಚಾರಣೆ ವೇಳೆ ದರ್ಶನ್ ಅವರನ್ನು ಖುದ್ದಾಗಿ ನ್ಯಾಯಾಲಯದ ಮುಂದೆ ತರಬೇಕು ಎಂದು ಅವರ ಪರ ವಕೀಲರು ಮನವಿ ಸಲ್ಲಿಸಿದ್ದು, ಇದಕ್ಕೆ ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕರಾದ (SPP) ಪ್ರಸನ್ನ ಕುಮಾರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕಲಾಪದ ವೇಳೆ ದರ್ಶನ್ ಅವರ ನೇರ ಹಾಜರಾತಿಗೆ ಆಕ್ಷೇಪ ಎತ್ತಿದ ಎಸ್‌ಪಿಪಿ ಪ್ರಸನ್ನ ಕುಮಾರ್, ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ಹಿಂದೆ ಬಿಹಾರದ ಪ್ರಕರಣವೊಂದರಲ್ಲಿ ನೀಡಿದ್ದ ಮಹತ್ವದ ತೀರ್ಪನ್ನು ನ್ಯಾಯಾಧೀಶರ ಗಮನಕ್ಕೆ ತಂದಿದ್ದಾರೆ. ಈ ತೀರ್ಪಿನ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ಖುದ್ದು ಹಾಜರುಪಡಿಸುವುದು ಸೂಕ್ತವಲ್ಲ ಎಂದು ವಾದಿಸಿದರು. ಈ ವಾದವನ್ನು ಆಲಿಸಿದ ನ್ಯಾಯಾಧೀಶರು, ಎಸ್‌ಪಿಪಿ ಉಲ್ಲೇಖಿಸಿದ ಸುಪ್ರೀಂ ಕೋರ್ಟ್ ಆದೇಶದ ಅಧಿಕೃತ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಅದರೊಂದಿಗೆ, ದರ್ಶನ್ ನೇರ ಹಾಜರಾತಿಯ ಅಗತ್ಯತೆ, ಪ್ರಕರಣದ ಸದ್ಯದ ಸ್ಥಿತಿ ಹಾಗೂ ಭದ್ರತಾ ಹಿನ್ನೆಲೆಯನ್ನು ಒಳಗೊಂಡ ಸಂಪೂರ್ಣ ವರದಿಯನ್ನು ಒಪ್ಪಿಸುವಂತೆ ಪ್ರಾಸಿಕ್ಯೂಷನ್‌ಗೆ ಕೋರ್ಟ್ ಆದೇಶಿಸಿದೆ.

ಪ್ರದೋಶ್ ಅಪ್ರೂವರ್ ಅರ್ಜಿಗೆ ದರ್ಶನ್ ವಕೀಲರ ಬ್ರೇಕ್: ಇದೇ ಪ್ರಕರಣದ ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ, 14ನೇ ಆರೋಪಿಯಾದ ಪ್ರದೋಶ್ ತನ್ನನ್ನು ಮಾಫಿ ಸಾಕ್ಷಿ (ಅಪ್ರೂವರ್) ಆಗಿ ಪರಿಗಣಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಆದರೆ ಇದಕ್ಕೆ ತೀವ್ರ ತಡೆ ಒಡ್ಡಿದ ದರ್ಶನ್ ಪರ ವಕೀಲರು, ಆಗಸ್ಟ್ 18ರ ವರೆಗೆ ಪ್ರದೋಶ್‌ನ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಅನುಮತಿ ನೀಡಬಾರದು ಎಂದು ಕೋರಿದರು. ದರ್ಶನ್ ವಕೀಲರ ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಹೇಳಿಕೆ ದಾಖಲಾತಿಯನ್ನು ಸದ್ಯಕ್ಕೆ ಮುಂದೂಡಿದೆ.

ಅಂತಿಮವಾಗಿ, ದರ್ಶನ್ ಅವರನ್ನು ಮುಂದಿನ ಸಾಕ್ಷಿಗಳ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಖುದ್ದಾಗಿ ಕರೆತರಬೇಕೇ ಅಥವಾ ಜೈಲಿನಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಮುಂದುವರಿಸಬೇಕೇ ಎಂಬ ಗೊಂದಲಕ್ಕೆ ಸೋಮವಾರ ತೆರೆ ಬೀಳಲಿದೆ. ಪ್ರಾಸಿಕ್ಯೂಷನ್ ಸಲ್ಲಿಸುವ ಸಮಗ್ರ ವರದಿಯನ್ನು ಪರಿಶೀಲಿಸಿದ ಬಳಿಕ, ನ್ಯಾಯಾಲಯವು ಈ ಕುರಿತು ಸೋಮವಾರ ತನ್ನ ಮಹತ್ವದ ಆದೇಶವನ್ನು ಪ್ರಕಟಿಸಲಿದೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಯುಪಿ ಎಟಿಎಸ್ ಭರ್ಜರಿ ಕಾರ್ಯಾಚರಣೆ: ಐಸಿಸ್, ಪಾಕ್ ಲಿಂಕ್ ಆರೋಪದಡಿ ಇಬ್ಬರು ಶಂಕಿತ ಉಗ್ರರು ಅರೆಸ್ಟ್!

Leave a Reply

Your email address will not be published. Required fields are marked *