NEET-UG: ನೀಟ್ ಪರೀಕ್ಷೆ ರದ್ದು: ನಾಸಿಕ್‌ನಿಂದ ಹಬ್ಬಿತ್ತು ಪೇಪರ್ ಲೀಕ್ ದಂಧೆ, ಆರು ರಾಜ್ಯಗಳಲ್ಲಿ ಸಿಬಿಐ ಬಲೆ!

NEET UG 2026 paper leak exam cancelled

ನವದೆಹಲಿ: ದೇಶಾದ್ಯಂತ ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕಾಗಿ ನಡೆದಿದ್ದ ನೀಟ್ (NEET-UG) ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅಧಿಕೃತವಾಗಿ ರದ್ದುಗೊಳಿಸಿದೆ. ಮಂಗಳವಾರ ಈ ಮಹತ್ವದ ನಿರ್ಧಾರ ಹೊರಬಿದ್ದಿದ್ದು, ಪೇಪರ್ ಲೀಕ್ ಜಾಲವು ಮಹಾರಾಷ್ಟ್ರದ ನಾಸಿಕ್‌ನಿಂದ ಆರಂಭವಾಗಿ ದೇಶದ ಆರು ರಾಜ್ಯಗಳಿಗೆ ವಿಸ್ತರಿಸಿರುವ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ನಾಸಿಕ್ ಟು ಹರಿಯಾಣ: ಹೇಗೆ ಹರಡಿತು ಜಾಲ?

ತನಿಖಾ ವರದಿಗಳ ಪ್ರಕಾರ, ಈ ಅಕ್ರಮ ದಂಧೆಯ ಸಂಚು ಮೊದಲು ನಾಸಿಕ್‌ನಲ್ಲಿ ಸಿದ್ಧವಾಗಿತ್ತು. ಅಲ್ಲಿಂದ ಪತ್ರಿಕೆಯ ಒಂದು ಪ್ರತಿಯನ್ನು ಹರಿಯಾಣಕ್ಕೆ ರವಾನಿಸಿ, ಅಲ್ಲಿ ಐದು ಪ್ರತ್ಯೇಕ ಸೆಟ್‌ಗಳನ್ನು ಸಿದ್ಧಪಡಿಸಲಾಗಿತ್ತು. ಬಳಿಕ ಈ ಪತ್ರಿಕೆಗಳನ್ನು ಆಂಧ್ರಪ್ರದೇಶ, ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ ಹಾಗೂ ತೆಲಂಗಾಣ ರಾಜ್ಯಗಳ ದಲ್ಲಾಳಿಗಳಿಗೆ ಹಂಚಿಕೆ ಮಾಡಲಾಗಿತ್ತು ಎಂಬುದು ತಿಳಿದುಬಂದಿದೆ. ‘ಗೆಸ್ ಪೇಪರ್’ ಎಂಬ ಹೆಸರಿನಲ್ಲಿ ಪರೀಕ್ಷೆಗಿಂತ 15 ದಿನಗಳ ಮೊದಲೇ ನೂರಾರು ಪ್ರಶ್ನೆಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲಾಗಿತ್ತು ಎನ್ನಲಾಗುತ್ತಿದೆ.

ಬಂಧಿತರಲ್ಲಿ ವೈದ್ಯಕೀಯ ವಿದ್ಯಾರ್ಥಿಗಳೂ ಭಾಗಿ

ಈ ಹಗರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ವಿಶೇಷ ಕಾರ್ಯಾಚರಣೆ ತಂಡ (SOG) ಈಗಾಗಲೇ ಜೈಪುರ, ಸಿಕಾರ್ ಸೇರಿದಂತೆ ಹಲವೆಡೆ ದಾಳಿ ನಡೆಸಿ 15 ಮಂದಿಯನ್ನು ಬಂಧಿಸಿದೆ. ಬಂಧಿತರಲ್ಲಿ ಕೋಚಿಂಗ್ ಸೆಂಟರ್ ಮಾಲೀಕರು ಮಾತ್ರವಲ್ಲದೆ, ಕೇರಳದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಸೇರಿರುವುದು ಆತಂಕ ಮೂಡಿಸಿದೆ. ಆರೋಪಿಗಳ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಾಟ್ಸಾಪ್ ಮೂಲಕ ನಡೆದಿರುವ ಸಂವಹನಗಳ ದತ್ತಾಂಶವನ್ನು ಸಿಬಿಐ ವಿಶ್ಲೇಷಿಸುತ್ತಿದೆ.

23 ಲಕ್ಷ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಆತಂಕ

ಮೇ 3 ರಂದು ನಡೆದಿದ್ದ ಪರೀಕ್ಷೆ ರದ್ದಾಗಿರುವುದರಿಂದ ಸುಮಾರು 23 ಲಕ್ಷ ವಿದ್ಯಾರ್ಥಿಗಳು ಈಗ ಮರು ಪರೀಕ್ಷೆ ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಪರೀಕ್ಷಾ ವ್ಯವಸ್ಥೆಯ ಪಾರದರ್ಶಕತೆಯನ್ನು ಕಾಪಾಡಲು ಈ ಕಠಿಣ ನಿರ್ಧಾರ ಅನಿವಾರ್ಯವಾಗಿತ್ತು ಎಂದು ಎನ್‌ಟಿಎ ಸಮರ್ಥಿಸಿಕೊಂಡಿದೆ. ಪ್ರಕರಣದ ಸಮಗ್ರ ತನಿಖೆಯನ್ನು ಈಗ ಸಿಬಿಐಗೆ ವಹಿಸಲಾಗಿದ್ದು, ಹೊಸ ಪರೀಕ್ಷಾ ದಿನಾಂಕ ಮತ್ತು ಪ್ರವೇಶ ಪತ್ರಗಳ ಕುರಿತು ಶೀಘ್ರದಲ್ಲೇ ಅಧಿಕೃತ ಮಾಹಿತಿ ಹೊರಬೀಳಲಿದೆ. ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: ಚಿನ್ನದ ಖರೀದಿ ನಿಲ್ಲಿಸಿ ಅಂದಿದ್ದರು ಇಂದಿರಾ ಗಾಂಧಿ: ವೈರಲ್ ಆದ ಪತ್ರಿಕೆಯ ಅಸಲಿ ಸತ್ಯವೇನು?

Leave a Reply

Your email address will not be published. Required fields are marked *