ಚೆನ್ನೈ: ತಮಿಳುನಾಡಿನ (Tamil Nadu) ಫೋರ್ಟ್ ಸೇಂಟ್ ಜಾರ್ಜ್ನಲ್ಲಿ ಇತ್ತೀಚೆಗೆ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವು ರಾಜ್ಯದ ರಾಜಕೀಯ ವಲಯದಲ್ಲಿ ಹೊಸ ವಿವಾದವೊಂದಕ್ಕೆ ನಾಂದಿ ಹಾಡಿದೆ. ಮುಖ್ಯಮಂತ್ರಿ ವಿಜಯ್ ಅವರು ಧ್ವಜಾರೋಹಣ ನೆರವೇರಿಸಿ, ರಾಷ್ಟ್ರದ ಗೌರವವನ್ನು ಹೆಚ್ಚಿಸಿದ ದಿನವೇ, ಅದೇ ವೇದಿಕೆಯಲ್ಲಿ ಅಥವಾ ಸಮಾರಂಭದಲ್ಲಿ ನಟಿ ತ್ರಿಶಾ ಕೃಷ್ಣನ್ ಅವರ ಉಪಸ್ಥಿತಿ ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿದೆ. ಈ ಘಟನೆಯು ಡಿಎಂಕೆಯ ಆಕ್ರೋಶಕ್ಕೆ ಗುರಿಯಾಗಿದ್ದು, ಪಕ್ಷದ ಅಧಿಕೃತ ಮುಖವಾಣಿಯಾದ ‘ಮುರಸೋಲಿ’ ಪತ್ರಿಕೆಯು ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯ್ದಿದೆ.
ಏನಿದು ನಟಿ ತ್ರಿಶಾ ವಿವಾದ?
ಸ್ವಾತಂತ್ರ್ಯ ದಿನಾಚರಣೆಯಂತಹ ಪವಿತ್ರ ಹಾಗೂ ಅಧಿಕೃತ ಸರ್ಕಾರಿ ಕಾರ್ಯಕ್ರಮದ ಮೊದಲ ಸಾಲಿನಲ್ಲಿ, ಮುಖ್ಯಮಂತ್ರಿ ವಿಜಯ್ ಅವರ ತಂದೆ ಎಸ್.ಎ. ಚಂದ್ರಶೇಖರ್ ಮತ್ತು ತಾಯಿ ಶೋಭಾ ಚಂದ್ರಶೇಖರ್ ಅವರ ಪಕ್ಕದಲ್ಲಿ ನಟಿ ತ್ರಿಶಾ ಕೃಷ್ಣನ್ ಕುಳಿತಿದ್ದರು. ಹಳದಿ ಸೀರೆ ಮತ್ತು ಹಸಿರು ಬಣ್ಣದ ಬ್ಲೌಸ್ ಧರಿಸಿದ್ದ ನಟಿ ತ್ರಿಶಾ, ಮುಖ್ಯಮಂತ್ರಿ ವಿಜಯ್ ಅವರು ತಮ್ಮ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಅವರಿಬ್ಬರೂ ಪರಸ್ಪರ ಸೆಲ್ಯೂಟ್ ಹೊಡೆದುಕೊಂಡ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದೃಶ್ಯವನ್ನು ಗಮನಿಸಿದ ವಿರೋಧ ಪಕ್ಷವಾದ ಡಿಎಂಕೆ, ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದೆ.
ಡಿಎಂಕೆಯ ಮುಖವಾಣಿ ‘ಮುರಸೋಲಿ’ ತನ್ನ ಸಂಪಾದಕೀಯದಲ್ಲಿ ಈ ಘಟನೆಯನ್ನು ಅತ್ಯಂತ ಕಟುವಾದ ಪದಗಳಲ್ಲಿ ಖಂಡಿಸಿದೆ. ಮುಖ್ಯಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿ ಈ ರೀತಿ ನಡೆದುಕೊಂಡಿರುವುದು ಆ ಹುದ್ದೆಯ ಘನತೆಗೆ ಶೋಭೆ ತರುವುದಿಲ್ಲ ಎಂದು ಪತ್ರಿಕೆ ಅಭಿಪ್ರಾಯಪಟ್ಟಿದೆ. ಮುಖ್ಯಮಂತ್ರಿಗಳು ಸ್ವತಃ ಅಸಭ್ಯ ಮತ್ತು ಅಸಹ್ಯಕರವಾಗಿ ಕಾಣುವಂತೆ ನಟಿಯೊಬ್ಬರನ್ನು ಮೊದಲ ಸಾಲಿನಲ್ಲಿ ಕೂರಿಸಿ, ಸಾರ್ವಜನಿಕವಾಗಿ ಪರಸ್ಪರ ಸೆಲ್ಯೂಟ್ ಮಾಡಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಸಂಪಾದಕೀಯದಲ್ಲಿ ತೀವ್ರವಾಗಿ ಟೀಕಿಸಲಾಗಿದೆ. ವಿಜಯ್ ಅವರಿಗೆ ಮತ ಹಾಕಿದ ಜನರೂ ಸಹ ಈ ದೃಶ್ಯವನ್ನು ಸಹಿಸಲು ಸಾಧ್ಯವಿಲ್ಲದ ಮಟ್ಟಿಗೆ ಅಸಮಾಧಾನಗೊಂಡಿದ್ದಾರೆ ಎಂದು ‘ಮುರಸೋಲಿ’ ಬರೆದಿದೆ. ಅಷ್ಟೇ ಅಲ್ಲದೆ, ವಿಜಯ್ ಅವರ ಪಕ್ಷದ (ಟಿವಿಕೆ) ಬೆಂಬಲಿಗರು ಮತ್ತು ಮತದಾರರಲ್ಲೂ ಈ ಘಟನೆಯ ಬಗ್ಗೆ ಅಸಮಾಧಾನವಿದೆ ಎಂಬರ್ಥದಲ್ಲಿ ಪತ್ರಿಕೆ ವಾದಿಸಿದೆ.
ಮುನ್ನಲೆಗೆ ಬಂದ ವಿಜಯ್ ವೈಯಕ್ತಿಕ ಜೀವನ
ಈ ವಿವಾದದೊಂದಿಗೆ ಮುಖ್ಯಮಂತ್ರಿ ವಿಜಯ್ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಹಳೆಯ ಕಹಿ ಘಟನೆಗಳೂ ಚರ್ಚೆಗೆ ಬಂದಿವೆ. ಇತ್ತೀಚೆಗಷ್ಟೇ ವಿಜಯ್ ಅವರ ಪತ್ನಿ ಸಂಗೀತಾ ಅವರು ವಿಚ್ಛೇದನ ಅರ್ಜಿಯನ್ನು ಹಿಂಪಡೆದಿದ್ದರು. ಅದಕ್ಕೂ ಮುನ್ನ, ಸಂಗೀತಾ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ವಿಜಯ್ ಅವರ ಮೇಲೆ ಅಕ್ರಮ ಸಂಬಂಧ, ಮಾನಸಿಕ ಕಿರುಕುಳ ಮತ್ತು ನಿರ್ಲಕ್ಷ್ಯದ ಆರೋಪಗಳನ್ನು ಹೊರಿಸಿದ್ದರು. ಈ ವಿಚಾರವು ಆಗ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ತ್ರಿಶಾ ಅವರ ಉಪಸ್ಥಿತಿಯು, ಈ ಹಳೆಯ ಆರೋಪಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ. ಜೊತೆಗೆ, ಹಿಂದೆ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ತ್ರಿಶಾ ಅವರ ಕುರಿತು ನೀಡಿದ್ದ ವಿವಾದಾತ್ಮಕ ಹೇಳಿಕೆಯೂ ಮತ್ತೆ ನೆನಪಿಗೆ ಬಂದಿದೆ.
ಮತ್ತೊಂದೆಡೆ, ವಿಜಯ್ ಅವರು ತಮ್ಮ ಭಾಷಣದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡುವ ತಮ್ಮ ಸಂಕಲ್ಪವನ್ನು ವ್ಯಕ್ತಪಡಿಸಿದ್ದರು. ತಮಿಳುನಾಡನ್ನು ಲಂಚಮುಕ್ತ ಮತ್ತು ಭ್ರಷ್ಟಾಚಾರಮುಕ್ತ ರಾಜ್ಯವನ್ನಾಗಿ ಮಾಡುವುದು ತಮ್ಮ ಸರ್ಕಾರದ ಪ್ರಮುಖ ಆದ್ಯತೆ ಎಂದು ಅವರು ಹೇಳಿದ್ದರು. ಆದರೆ, ಅವರ ಭಾಷಣಕ್ಕಿಂತ ಹೆಚ್ಚಾಗಿ, ಕಾರ್ಯಕ್ರಮದಲ್ಲಿ ನಡೆದ ಈ ಘಟನೆಯೇ ಹೆಚ್ಚು ಸುದ್ದಿಯಾಗಿದೆ. ವಿಜಯ್ ಅವರು ಇತ್ತೀಚೆಗೆ ತಮ್ಮ ಭಾಷಣಗಳಲ್ಲಿ ಜನರ ಬೆಂಬಲವನ್ನು ಯಾಚಿಸುತ್ತಿರುವುದನ್ನು ಗಮನಿಸಿದರೆ, ಅವರಿಗೆ ತಮ್ಮ ಜನಪ್ರಿಯತೆ ಕುಸಿಯುತ್ತಿದೆಯೋ ಎಂಬ ಭಯವಿದೆ ಎಂದು ಡಿಎಂಕೆ ಲೇವಡಿ ಮಾಡಿದೆ.
ಒಟ್ಟಾರೆಯಾಗಿ, ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡಿದ ವಿಜಯ್ ಅವರಿಗೆ, ಈ ವಿವಾದವು ಮುಜುಗರವನ್ನುಂಟುಮಾಡಿದೆ. ವಿಜಯ್ ಅವರ ಪಕ್ಷ ಟಿವಿಕೆ ಈವರೆಗೆ ಈ ಟೀಕೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಧಿಕೃತ ಸರ್ಕಾರಿ ಸಮಾರಂಭವೊಂದರಲ್ಲಿ ನಟಿಯೊಬ್ಬರ ಉಪಸ್ಥಿತಿ ಮತ್ತು ಅವರು ನಡೆಸಿಕೊಂಡ ರೀತಿ, ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ವಿರೋಧ ಪಕ್ಷಗಳಿಗೆ ಮತ್ತೊಂದು ಅಸ್ತ್ರವನ್ನು ನೀಡಿದಂತಾಗಿದೆ.
ಇದನ್ನೂ ಓದಿ: ಸಿಜೆಪಿ ಸಂಸ್ಥಾಪಕ ಎಎಪಿ ಕಾರ್ಯಕರ್ತ ಎಂದ ಕಿರಣ್ ರಿಜಿಜು
