TOP NEWS

Shocking: ದೆಹಲಿಯಲ್ಲಿ ಆಸ್ಪತ್ರೆಯ ಭೀಕರ ಎಡವಟ್ಟು: ಬದುಕಿದ್ದರೂ ಯುವತಿಗೆ ಮರಣ ಪ್ರಮಾಣ ಪತ್ರ ನೀಡಿದ ಆಡಳಿತ!

Delhi Hospital Major Lapse Death Certificate Issued in Living Mother Name Instead of Newborn

ನವದೆಹಲಿ: ಬದುಕಿರುವ ವ್ಯಕ್ತಿಯನ್ನು ಸರ್ಕಾರಿ ದಾಖಲೆಗಳಲ್ಲಿ ಅಧಿಕೃತವಾಗಿ ಸತ್ತಿದ್ದಾರೆ ಎಂದು ಘೋಷಿಸಿರುವ ಅತ್ಯಂತ ಆಘಾತಕಾರಿ ಹಾಗೂ ವಿಚಿತ್ರ ಘಟನೆಯೊಂದು ರಾಷ್ಟ್ರ ರಾಜಧಾನಿ (Shocking) ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ದೆಹಲಿ ಮೂಲದ 23 ವರ್ಷದ ಸಂಚಿತಾ ಠಾಕೂರ್ ಎಂಬ ಯುವತಿಗೆ ಮಂಗೋಲ್‌ಪುರಿಯಲ್ಲಿರುವ ಮಂಗೋಲ್‌ಪುರಿ ಸಂಜಯ್ ಗಾಂಧಿ ಆಸ್ಪತ್ರೆ ಮತ್ತು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಸೇರಿ ಮರಣ ಪ್ರಮಾಣ ಪತ್ರ ನೀಡಿದ್ದು, ವ್ಯವಸ್ಥೆಯ ಉಡಾಫೆಗೆ ಕನ್ನಡಿ ಹಿಡಿದಿದೆ.

ಏನಿದು ಶಾಕಿಂಗ್ ಪ್ರಕರಣ?

ಘಟನೆಯ ವಿವರಗಳ ಪ್ರಕಾರ, ಸಂಚಿತಾ ಠಾಕೂರ್ ಸೆಪ್ಟೆಂಬರ್ 4 ರಂದು ದೆಹಲಿಯ ಸಂಜಯ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ದುರದೃಷ್ಟವಶಾತ್ ಹುಟ್ಟಿದ ನಾಲ್ಕೇ ದಿನಕ್ಕೆ ಅಂದರೆ ಸೆಪ್ಟೆಂಬರ್ 8 ರಂದು ಆಕೆ ಹೆತ್ತ ನವಜಾತ ಶಿಶು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಆದರೆ, ಮಗುವಿನ ನಿಧನದ ದಾಖಲೆಗಳನ್ನು ಮಹಾನಗರ ಪಾಲಿಕೆಗೆ ರವಾನಿಸುವಾಗ ಆಸ್ಪತ್ರೆಯ ಸಿಬ್ಬಂದಿ ಹಾಗೂ ಎಂಸಿಡಿ ಅಧಿಕಾರಿಗಳು ಮಹಾಪರಾಧ ಎಸಗಿದ್ದಾರೆ. ಮೃತಪಟ್ಟ ಮಗುವಿನ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡುವ ಬದಲು, ಬದುಕಿರುವ ತಾಯಿ ಸಂಚಿತಾ ಹೆಸರಿನಲ್ಲಿಯೇ ಡೆತ್ ಸರ್ಟಿಫಿಕೇಟ್ ನೀಡಿ ಕೈತೊಳೆದುಕೊಂಡಿದ್ದಾರೆ.

ಈ ಭೀಕರ ಎಡವಟ್ಟು ತಡವಾಗಿ ಸಂಚಿತಾ ಅವರ ಗಮನಕ್ಕೆ ಬಂದಾಗ ಅವರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಕೂಡಲೇ ತಾನು ಜೀವಂತವಾಗಿದ್ದೇನೆ ಎಂದು ಸಾಬೀತುಪಡಿಸಲು ಆಸ್ಪತ್ರೆಯ ಆಡಳಿತ ಮಂಡಳಿಯನ್ನು ಸಂಪರ್ಕಿಸಿ, ತನಗೆ ನೀಡಲಾಗಿರುವ ಮರಣ ಪ್ರಮಾಣ ಪತ್ರವನ್ನು ತೋರಿಸಿ ದೂರು ನೀಡಿದ್ದಾರೆ. ಆದರೆ ಸಂಚಿತಾ ಅವರ ಗೋಳನ್ನು ಕೇಳಿದ ಆಸ್ಪತ್ರೆಯ ಅಧಿಕಾರಿಗಳು ಯಾವುದೇ ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಂಚಿತಾ ಆರೋಪಿಸಿದ್ದಾರೆ. ಆಸ್ಪತ್ರೆಯಿಂದ ನ್ಯಾಯ ಸಿಗದಿದ್ದಾಗ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದರೂ, ಪೊಲೀಸರಿಂದಲೂ ಯಾವುದೇ ನೆರವು ಲಭಿಸಿಲ್ಲ ಎಂಬುದು ಸಂಚಿತಾ ಅವರ ಅಳಲಾಗಿದೆ.

ಕಾನೂನು ಕ್ರಮಕ್ಕೆ ಆಗ್ರಹ

ಒಬ್ಬ ಜೀವಂತ ಯುವತಿಯನ್ನು ಸರ್ಕಾರಿ ಕಡತಗಳಲ್ಲಿ ಹೆಣವನ್ನಾಗಿ ಮಾಡಿರುವುದು ಸಂಚಿತಾ ಕುಟುಂಬಕ್ಕೆ ತೀವ್ರ ಆತಂಕ ತಂದೊಡ್ಡಿದೆ. ತಕ್ಷಣವೇ ತನ್ನ ಹೆಸರಿನಲ್ಲಿ ನೀಡಲಾಗಿರುವ ಸುಳ್ಳು ಮರಣ ಪ್ರಮಾಣ ಪತ್ರವನ್ನು ರದ್ದುಗೊಳಿಸಬೇಕು ಮತ್ತು ಇಂತಹ ಗಂಭೀರ ನಿರ್ಲಕ್ಷ್ಯ ವಹಿಸಿದ ಆಸ್ಪತ್ರೆ ಸಿಬ್ಬಂದಿ ಹಾಗೂ ಎಂಸಿಡಿ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳ ದಾಖಲೆ ನಿರ್ವಹಣೆ ಮತ್ತು ಮುನ್ಸಿಪಲ್ ಕಾರ್ಪೊರೇಷನ್‌ಗಳ ಕಾರ್ಯವೈಖರಿಯನ್ನು ಈ ಘಟನೆ ಪ್ರಶ್ನಿಸುವಂತೆ ಮಾಡಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತ ಮಂಡಳಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಏನು ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಸಿಇಸಿ ವಿರುದ್ಧದ ಮಹಾಭಿಯೋಗ ಸದ್ಯಕ್ಕಿಲ್ಲ: ‘ವೋಟ್ ಚೋರಿ’ ವಿರುದ್ಧ ಬೀದಿ ಹೋರಾಟಕ್ಕೆ ‘ಇಂಡಿಯಾ’ ಒಕ್ಕೂಟ ನಿರ್ಧಾರ

Leave a Reply

Your email address will not be published. Required fields are marked *