ಬೆಂಗಳೂರು: ರಾಜ್ಯದಲ್ಲಿ ಸುಮಾರು 50 ರಿಂದ 60 ಲಕ್ಷ ಮತದಾರರ ಹೆಸರುಗಳನ್ನು ಏಕಾಏಕಿ ಪಟ್ಟಿಯಿಂದ ಕೈಬಿಡಲು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಗಂಭೀರ ಷಡ್ಯಂತ್ರ ಹೆಣೆದಿದ್ದಾರೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬೃಹತ್ ಅಕ್ರಮವನ್ನು ತಡೆಯಲು ಮತ್ತು ಮತದಾರರ ಹಕ್ಕನ್ನು ರಕ್ಷಿಸಲು ಸೂಕ್ತ ತನಿಖೆಯಾಗುವವರೆಗೂ ತಾವು ಚುನಾವಣಾ ಆಯೋಗದ ಕಚೇರಿಯಿಂದ ಹೊರಬರುವುದಿಲ್ಲ ಎಂದು ಪಟ್ಟು ಹಿಡಿದು ಧರಣಿ ಕುಳಿತಿದ್ದಾರೆ.
ದಾಖಲೆ ಸಮೇತ ಆರೋಪ ಮಾಡಿದ ಸಿಎಂ
ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿಯೂ ಫಾರಂ-7 ಅನ್ನು ದುರ್ಬಳಕೆ ಮಾಡಿಕೊಂಡು 5 ಸಾವಿರದಿಂದ 10 ಸಾವಿರದವರೆಗೆ ಬೋಗಸ್ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಸಿಎಂ ಆರೋಪಿಸಿದರು. ಮತದಾರರ ಹೆಸರು, ವಿಳಾಸ ಮತ್ತು ಎಪಿಕ್ ಸಂಖ್ಯೆ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಮೊದಲೇ ಮುದ್ರಿಸಿರುವ ಅರ್ಜಿಗಳನ್ನು ಆಯೋಗಕ್ಕೆ ನೀಡಲಾಗುತ್ತಿದೆ. ಮತಗಳನ್ನು ಡಿಲೀಟ್ ಮಾಡಿಸುವ ಏಕೈಕ ಉದ್ದೇಶದಿಂದ ಬಿಜೆಪಿಯ ಒಬ್ಬೊಬ್ಬ ಕಾರ್ಯಕರ್ತರು 80, 90, 150 ರಿಂದ ಹಿಡಿದು 200 ಅರ್ಜಿಗಳವರೆಗೆ ಸಲ್ಲಿಸಿ ಅಕ್ರಮ ಎಸಗುತ್ತಿದ್ದಾರೆ ಎಂದು ಅವರು ದಾಖಲೆ ಸಮೇತ ದೂರಿದರು.
ಜನಾದೇಶದ ಮೂಲಕ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗದ ವಿಪಕ್ಷಗಳು, ಈಗ ಚುನಾವಣಾ ಆಯೋಗದ ‘ಎಸ್ಐಆರ್’ (SIR) ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಹಿಂಬಾಗಿಲ ಮೂಲಕ ಅಕ್ರಮ ಎಸಗಲು ಮುಂದಾಗಿವೆ. ಈ ಎಸ್ಐಆರ್ ಎಂಬುದು ದೇಶದ ಅತಿ ದೊಡ್ಡ ಫ್ರಾಡ್ ವ್ಯವಸ್ಥೆಯಾಗಿದ್ದು, ಇದನ್ನು ತಕ್ಷಣವೇ ರದ್ದುಗೊಳಿಸಬೇಕು. ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ಗಮನಕ್ಕೆ ಬಾರದೆ ಹಾಗೂ ಅವರ ಸಹಕಾರವಿಲ್ಲದೆ ಇಂತಹ ಬೃಹತ್ ಮಟ್ಟದ ಷಡ್ಯಂತ್ರ ನಡೆಯಲು ಸಾಧ್ಯವೇ ಇಲ್ಲ ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.
ತಪ್ಪಿಸ್ಥರನ್ನ ಬಂಧಿಸಿ ಜೈಲಿಗೆ ಹಾಕಲು ಆಗ್ರಹ
ಇಂದು ರಾಜ್ಯ ಸಚಿವ ಸಂಪುಟ ಸಭೆ ನಿಗದಿಯಾಗಿದ್ದರೂ ಸಹ, ನಮಗೆ ಬಡವರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಮತದಾರರ ಹಕ್ಕುಗಳನ್ನು ರಕ್ಷಿಸುವುದೇ ಮೊದಲ ಆದ್ಯತೆಯಾಗಿದೆ. ಮತದಾರರ ಹಕ್ಕನ್ನು ಕಾಪಾಡುವುದು ಚುನಾವಣಾ ಆಯೋಗದ ಮೂಲಭೂತ ಕರ್ತವ್ಯ. ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರ ವಿರುದ್ಧವೂ ತಕ್ಷಣವೇ ಕ್ರಿಮಿನಲ್ ಪ್ರಕರಣ ದಾಖಲಿಸಿ, ಸಮಗ್ರ ತನಿಖೆಗೆ ಆದೇಶಿಸಬೇಕು. ಈ ಅಕ್ರಮದ ಹಿಂದೆ ಯಾವ ಪಕ್ಷದ ನಾಯಕರಿದ್ದಾರೆ ಮತ್ತು ಯಾರ್ಯಾರು ಭಾಗಿಯಾಗಿದ್ದಾರೆ ಎಂಬ ನಿಜಬಣ್ಣ ಸಾರ್ವಜನಿಕರ ಮುಂದೆ ಬಹಿರಂಗವಾಗಬೇಕು ಹಾಗೂ ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸಿ ಜೈಲಿಗಟ್ಟಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಪಶುವೈದ್ಯಾಧಿಕಾರಿ ಉದ್ಯೋಗ ಹಗರಣ: ಇಡಿ ಎಂಟ್ರಿಯಿಂದ ಬಯಲಾಯ್ತು ಲಂಚದ ನೆಟ್‌ವರ್ಕ್
