ಚಾಮರಾಜನಗರ: ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಹನೂರು (Hanuru Encounter) ತಾಲೂಕಿನ ಕಾವೇರಿ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ತಮಿಳುನಾಡು ಮೂಲದ ಮೂವರು ವ್ಯಕ್ತಿಗಳು ಬಲಿಯಾದ ಘಟನೆ ನೆರೆ ರಾಜ್ಯ ತಮಿಳುನಾಡಿನ ವಿಧಾನಸಭೆಯಲ್ಲಿ ಭಾರಿ ಕಾವು ಪಡೆದುಕೊಂಡಿದೆ. ಈ ಘಟನೆಗೆ ತೀವ್ರ ಸಂತಾಪ ಸೂಚಿಸಿರುವ ತಮಿಳುನಾಡು ಸರ್ಕಾರ, ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ.
ಫೋಟೋ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಶಾಸಕರು
ಸದನದಲ್ಲಿ ವಿಷಯ ಪ್ರಸ್ತಾಪಿಸಿದ ತಮಿಳುನಾಡು ಶಾಸಕರು, ಅರಣ್ಯ ಸಿಬ್ಬಂದಿ ಬಿಡುಗಡೆ ಮಾಡಿರುವ ಫೋಟೋಗಳ ಕುರಿತು ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳದಲ್ಲಿ ಹಂಚಿಕೊಳ್ಳಲಾದ ಚಿತ್ರಗಳಲ್ಲಿ ಮೃತರು ತೊಟ್ಟಿದ್ದ ಚಪ್ಪಲಿಗಳು ತೀರಾ ಹೊಸದಾಗಿದ್ದು, ಅವುಗಳ ಮೇಲಿದ್ದ ಬೆಲೆಚೀಟಿ (ಸ್ಟಿಕ್ಕರ್) ಕೂಡ ಕಿತ್ತುಹೋಗಿಲ್ಲ ಎಂಬಂಶವನ್ನು ಶಾಸಕರು ಸದನದ ಗಮನಕ್ಕೆ ತಂದಿದ್ದಾರೆ. ಈ ಅನುಮಾನಾಸ್ಪದ ಅಂಶಗಳು ಘಟನೆಯ ಸುತ್ತ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಇದು ನಕಲಿ ಎನ್ಕೌಂಟರ್ ಇರಬಹುದು ಎಂಬ ಬಲವಾದ ಶಂಕೆಯನ್ನು ತಮಿಳುನಾಡು ಜನಪ್ರತಿನಿಧಿಗಳು ವ್ಯಕ್ತಪಡಿಸಿದ್ದಾರೆ.
ಇನ್ನು ಮೆಟ್ಟೂರು ಜಲಾಶಯ ನಿರ್ಮಾಣದ ಸಮಯದಲ್ಲಿ ಹನೂರು ಭಾಗಕ್ಕೆ ಬಂದು ನೆಲೆಸಿದ ಮೃತರೆಲ್ಲರೂ ಮೂಲತಃ ತಮಿಳುನಾಡಿನವರಾಗಿದ್ದಾರೆ. ನೆರೆಯ ರಾಜ್ಯದಲ್ಲಿದ್ದುಕೊಂಡು ಜೀವನ ಸಾಗಿಸುತ್ತಿರುವ ತಮಿಳರ ಹಕ್ಕುಗಳು ಮತ್ತು ಜೀವ ರಕ್ಷಣೆ ಮಾಡುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಸದನದಲ್ಲಿ ಪ್ರತಿಪಾದಿಸಲಾಯಿತು. ಈ ಘಟನೆಯಲ್ಲಿ ಅನ್ಯಾಯವಾಗಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ತಲಾ 1 ಕೋಟಿ ರೂಪಾಯಿ ನಷ್ಟಪರಿಹಾರ ನೀಡಬೇಕು ಮತ್ತು ಪ್ರಕರಣದ ನೈಜ ಸತ್ಯಾಂಶ ಹೊರಬರಲು ಈ ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಒಪ್ಪಿಸಬೇಕು ಎಂದು ತಮಿಳುನಾಡು ಶಾಸಕರು ಸರ್ಕಾರವನ್ನು ಒಮ್ಮತದಿಂದ ಆಗ್ರಹಿಸಿದ್ದಾರೆ.
ಅರಣ್ಯ ಇಲಾಖೆ ಹೇಳೋದೇನು?
ಮತ್ತೊಂದೆಡೆ, ಶಿಕಾರಿಗಾಗಿ ಅರಣ್ಯ ಪ್ರವೇಶಿಸಿ ತಮ್ಮ ಮೇಲೆ ಗುಂಡಿನ ದಾಳಿ ನಡೆಸಲು ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಪ್ರತಿಯಾಗಿ ದಾಳಿ ನಡೆಸಿರುವುದಾಗಿ ಕರ್ನಾಟಕ ಅರಣ್ಯ ಇಲಾಖೆ ತಿಳಿಸಿದೆ. ಆದರೆ ಈ ಘಟನೆಯನ್ನು ಖಂಡಿಸಿರುವ ಮೃತರ ಸಂಬಂಧಿಕರು ಹಾಗೂ ತಮಿಳುನಾಡಿನ ನಾಯಕರು, ತನಿಖೆ ಸಂಪೂರ್ಣವಾಗಿ ಪಾರದರ್ಶಕವಾಗಿ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಹನೂರು ಎನ್ಕೌಂಟರ್: ಜುಡಿಷಿಯಲ್ ತನಿಖೆ ಹಾಗೂ ಮೃತರ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡಲು ಬಿ.ವೈ. ವಿಜಯೇಂದ್ರ ಆಗ್ರಹ!
ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ವ್ಯಾಪ್ತಿಯಲ್ಲಿ ನಡೆದ ಗುಂಡಿನ ಚಕಮಕಿ (ಎನ್ಕೌಂಟರ್) ಪ್ರಕರಣವು ದಿನದಿಂದ ದಿನಕ್ಕೆ ಭಾರಿ ರಾಜಕೀಯ ಕಾವು ಪಡೆದುಕೊಳ್ಳುತ್ತಿದ್ದು, ಈ ಕುರಿತು ನಿಷ್ಪಕ್ಷಪಾತ ಹಾಗೂ ಪಾರದರ್ಶಕ ತನಿಖೆ ನಡೆಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸರ್ಕಾರವನ್ನು ಬಲವಾಗಿ ಒತ್ತಾಯಿಸಿದ್ದಾರೆ. ಘಟನೆಯ ಸುತ್ತ ಹತ್ತಾರು ಪ್ರಶ್ನೆಗಳು ಮತ್ತು ಅನುಮಾನಗಳು ಸುಳಿದಾಡುತ್ತಿರುವ ಹಿನ್ನೆಲೆಯಲ್ಲಿ, ಕೇವಲ ಮ್ಯಾಜಿಸ್ಟ್ರೇಟ್ ಮಟ್ಟದ ತನಿಖೆಯಿಂದ ಸತ್ಯ ಹೊರಬರಲು ಸಾಧ್ಯವಿಲ್ಲ. ಹೀಗಾಗಿ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಜುಡಿಷಿಯಲ್ (ನ್ಯಾಯಾಂಗ) ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ನಾಡಿನ ಜನರ ಮುಂದಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದ್ದು, ಆರ್ಚ್ಬಿಷಪ್ ಕೂಡ ಮೃತರ ಕುಟುಂಬಗಳಿಗೆ ಪರಿಹಾರ ಹಾಗೂ ಉದ್ಯೋಗ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ, ಇಂತಹ ಭೀಕರ ಘಟನೆಗೆ ಜಾತಿ ಅಥವಾ ಧರ್ಮದ ಬಣ್ಣ ಬಳಿಯುವುದು ತೀರಾ ಅನುಚಿತ ಎಂದು ವಿಜಯೇಂದ್ರ ಪ್ರತಿಪಾದಿಸಿದ್ದಾರೆ. ಮೃತಪಟ್ಟವರು ಯಾವುದೇ ಧರ್ಮ ಅಥವಾ ಸಮುದಾಯಕ್ಕೆ ಸೇರಿದವರಾಗಿದ್ದರೂ, ಮಾನವೀಯತೆಯೇ ಸರ್ಕಾರದ ಪರಿಹಾರ ಮತ್ತು ನ್ಯಾಯ ನಿರ್ಣಯಕ್ಕೆ ಮುಖ್ಯ ಮಾನದಂಡವಾಗಬೇಕು. ಅರಣ್ಯ ಸಚಿವರು ಸದನದಲ್ಲಿ ಪದೇಪದೇ ಮೃತರ ಧರ್ಮವನ್ನು ಪ್ರಸ್ತಾಪಿಸುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, “ಧರ್ಮವನ್ನು ಆಧರಿಸಿ ಸರ್ಕಾರ ನಿರ್ಧಾರಗಳನ್ನು ಕೈಗೊಳ್ಳಬಾರದು. ಜೀವ ಕಳೆದುಕೊಂಡ ಕುಟುಂಬಗಳಿಗೆ ನ್ಯಾಯ ಒದಗಿಸುವುದು ಸರ್ಕಾರದ ಪ್ರಾಥಮಿಕ ಕರ್ತವ್ಯ” ಎಂದು ಸ್ಪಷ್ಟಪಡಿಸಿದರು.
ಹನೂರು ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಮೂವರ ಕುಟುಂಬಗಳಿಗೆ ಮಾನವೀಯತೆಯ ಆಧಾರದ ಮೇಲೆ ತಲಾ ₹1 ಕೋಟಿ ನಷ್ಟಪರಿಹಾರ ಹಾಗೂ ಪ್ರತಿಯೊಂದು ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ಕಲ್ಪಿಸಬೇಕು ಎಂದು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಸದನದ ಆರಂಭದ ದಿನದಿಂದಲೂ ಹೋರಾಟ ನಡೆಸುತ್ತಿದೆ. ಮೃತರು ಬೇಟೆಗೆ ತೆರಳಿದ್ದರು ಎಂಬ ಆರೋಪವಿದ್ದರೆ ಅದನ್ನು ತನಿಖೆಯ ಮೂಲಕವೇ ನಿರೂಪಿಸಲಿ. ಆದರೆ ಬೇಟೆಯಾಡಲು ಬಂದಿದ್ದರು ಎಂಬ ಏಕೈಕ ಕಾರಣಕ್ಕಾಗಿ ಪ್ರಾಣ ತೆಗೆಯುವ ಹಕ್ಕು ಯಾರಿಗೂ ಇಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಅವರನ್ನು ಸುತ್ತುವರಿದಿದ್ದಾಗ, ಪರಿಸ್ಥಿತಿಯನ್ನು ನಿಯಂತ್ರಿಸಲು ಬೇರೆ ಕಾನೂನುಬದ್ಧ ಮಾರ್ಗಗಳಿರಲಿಲ್ಲವೇ ಎಂಬುದಕ್ಕೆ ಸರ್ಕಾರ ಉತ್ತರ ನೀಡಬೇಕಾಗಿದೆ. ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾರೆಯೇ ಅಥವಾ ಕರ್ತವ್ಯ ಲೋಪ ಎಸಗಿದ್ದಾರೆಯೇ ಎಂಬುದು ಸಂಪೂರ್ಣವಾಗಿ ತನಿಖೆಯಾಗಬೇಕು.
ರಾಜ್ಯದ ಮಲೆನಾಡು, ಕರಾವಳಿ, ಕೊಡಗು, ಮಡಿಕೇರಿ ಹಾಗೂ ಶಿವಮೊಗ್ಗ ಭಾಗಗಳಲ್ಲಿ ಈಗಾಗಲೇ ಕಾಡಂಚಿನ ಜನರು ಮತ್ತು ಅರಣ್ಯ ಇಲಾಖೆ ನಡುವೆ ಸಂಘರ್ಷ ತೀವ್ರಗೊಂಡಿದೆ. ಇಂತಹ ಸೂಕ್ಷ್ಮ ವಾತಾವರಣದಲ್ಲಿ ಹನೂರು ಘಟನೆಯು ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಸರ್ಕಾರ ತನ್ನ ಅವಧಿಯಲ್ಲಿ ನಡೆದ ಲೋಪಗಳನ್ನು ಮುಚ್ಚಿಹಾಕಲು ಯತ್ನಿಸಬಾರದು. ಹಿಂದಿನ ಆಡಳಿತಾವಧಿಯ ಘಟನೆಗಳನ್ನು ನೆಪವಾಗಿಟ್ಟುಕೊಂಡು ಪ್ರಸ್ತುತ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಬದಲು, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ನಟಿ ತ್ರಿಶಾ ಪ್ರತ್ಯಕ್ಷ: ಸಿಎಂ ವಿಜಯ್ ವಿರುದ್ಧ ವಾಗ್ದಾಳಿ ನಡೆಸಿದ ಡಿಎಂಕೆ
