ನವದೆಹಲಿ: ದೇಶಾದ್ಯಂತ ಚುನಾವಣಾ ಆಯೋಗದ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆ ತೀವ್ರ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ, ಲಕ್ಷಾಂತರ ಮತದಾರರ ಹೆಸರುಗಳನ್ನು ಡಿಜಿಟಲ್ ವ್ಯವಸ್ಥೆಯ ಮೂಲಕ ತೆಗೆದುಹಾಕಿರುವ ಪ್ರಕ್ರಿಯೆಯ ಸತ್ಯಾಸತ್ಯತೆ ಬಯಲಾಗಿದೆ. ಮಧ್ಯಪ್ರದೇಶದ ಇಂದೋರ್ ಜಿಲ್ಲೆಯೊಂದರಲ್ಲೇ ಕೇವಲ ಒಂಬತ್ತು ತಿಂಗಳ ಅವಧಿಯಲ್ಲಿ 1.36 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದ್ದು, ಹೀಗೆ ಹೆಸರುಗಳನ್ನು ಕೈಬಿಡಲು ಕಾರಣವೇನು ಎಂಬ ಡಿಜಿಟಲ್ ದಾಖಲೆಗಳೇ ಲಭ್ಯವಿಲ್ಲ ಎಂಬ ವಿಚಿತ್ರ ಹಾಗೂ ಆಘಾತಕಾರಿ ಸತ್ಯ ಆರ್ಟಿಐ (ಮೂಲಸೌಕರ್ಯ/ಮಾಹಿತಿ ಹಕ್ಕು ಕಾಯ್ದೆ) ಅರ್ಜಿಯ ಮೂಲಕ ಬೆಳಕಿಗೆ ಬಂದಿದೆ.
ಒಂದೇ ರೀತಿಯ ಉತ್ತರ ನೀಡಿದ ಅಧಿಕಾರಿಗಳು
ಮಧ್ಯಪ್ರದೇಶದ ಇಂದೋರ್ ಮಾಜಿ ಕಾರ್ಪೊರೇಟರ್ ದಿಲೀಪ್ ಕೌಶಲ್ ಎಂಬುವರು 2022ರ ಜನವರಿ 5 ರಿಂದ ಅಕ್ಟೋಬರ್ 15ರ ಅವಧಿಯಲ್ಲಿ ಇಂದೋರ್ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಕಡೇಪಕ್ಷ 1,36,552 ಮತದಾರರ ಹೆಸರುಗಳನ್ನು ಏಕಾಏಕಿ ಕೈಬಿಡಲಾದ ಕುರಿತು ಸಮಗ್ರ ಮಾಹಿತಿ ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಬೂತ್ ಮಟ್ಟದ ಅಧಿಕಾರಿಗಳು (BLO) ಬಳಸುವ ‘ಗರುಡ’ (Garud) ಆ್ಯಪ್ ಹಾಗೂ ಇಆರ್ಒ ನೆಟ್ (ERO Net) ತಂತ್ರಾಂಶಗಳಲ್ಲಿ ಯಾವ ಕಾರಣಕ್ಕಾಗಿ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ, ಅದಕ್ಕೆ ಸಂಬಂಧಿಸಿದ ವೀಡಿಯೋ ಸಾಕ್ಷ್ಯಗಳು, ಇಮೇಲ್, ಡಿವಿಡಿ, ಬ್ಯಾಕಪ್ ಮಾಹಿತಿ ಹಾಗೂ ಗುತ್ತಿಗೆದಾರರ ಒಪ್ಪಂದಗಳ ಪ್ರತಿಗಳನ್ನು ನೀಡುವಂತೆ ಕೋರಿದ್ದರು. ಆದರೆ ಇಂದೋರ್ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು “ಈ ಸಂಬಂಧ ಯಾವುದೇ ಡಿಜಿಟಲ್ ದಾಖಲೆಗಳನ್ನು ಕಚೇರಿಯಲ್ಲಿ ನಿರ್ವಹಿಸಿಲ್ಲ ಅಥವಾ ಕಾಯ್ದುಕೊಂಡಿಲ್ಲ” (Record not maintained) ಎಂದು ಒಂದೇ ರೀತಿಯ ಉತ್ತರ ನೀಡಿ ಕೈತೊಳೆದುಕೊಂಡಿದ್ದಾರೆ.
ಚುನಾವಣಾ ಕಚೇರಿ ನೀಡಿದ ಈ ಆಘಾತಕಾರಿ ಹೇಳಿಕೆಯಿಂದ ಕಂಗಾಲಾದ ಅರ್ಜಿದಾರರು, ಮಾಹಿತಿ ಹಕ್ಕು ಕಾಯ್ದೆಯಡಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಈ ಮೇಲ್ಮನವಿ ವಿಚಾರಣೆ ವಿಳಂಬವಾದ ಹಿನ್ನೆಲೆಯಲ್ಲಿ ಅವರು ಮಧ್ಯಪ್ರದೇಶ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸಂದೀಪ್ ಎನ್. ಭಟ್ ಅವರ ಪೀಠವು, ಮಾಹಿತಿ ಹಕ್ಕು ಕಾಯ್ದೆಯ ಎರಡನೇ ಮೇಲ್ಮನವಿಯನ್ನು ಕಾಯ್ದೆಯನ್ವಯ 45 ದಿನಗಳ ಒಳಗಾಗಿ ವಿಲೇವಾರಿ ಮಾಡಿ ಅರ್ಜಿದಾರರಿಗೆ ಸೂಕ್ತ ಮಾಹಿತಿ ನೀಡಬೇಕು ಎಂದು ರಾಜ್ಯ ಮಾಹಿತಿ ಆಯೋಗಕ್ಕೆ ನಿರ್ದೇಶನ ನೀಡಿದೆ. ಕೌಶಲ್ ಅವರು ಸಲ್ಲಿಸಿದ್ದ ಮೇಲ್ಮನವಿ ಜನವರಿ 30, 2026 ರಿಂದ ವಿಚಾರಣೆಯಿಲ್ಲದೆ ನೆನಗುದಿಗೆ ಬಿದ್ದಿತ್ತು ಎಂಬುದು ಗಮನಾರ್ಹ.
ಏನಿದು ಪ್ರಕರಣ?
ಮಾಹಿತಿ ಹಕ್ಕು ಕಾಯ್ದೆಯಡಿ ನೀಡಿರುವ ವಿವರಗಳ ಪ್ರಕಾರ, ಇಂದೋರ್-4 ಕ್ಷೇತ್ರದಲ್ಲಿ ಗರಿಷ್ಠ 28,391 ಹಾಗೂ ಇಂದೋರ್-5 ಕ್ಷೇತ್ರದಲ್ಲಿ 28,091 ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ಈ ಎರಡೇ ಕ್ಷೇತ್ರಗಳಲ್ಲಿ ಬರೋಬ್ಬರಿ 56,482 ಹೆಸರುಗಳು ಮಾಯವಾಗಿವೆ. ಇನ್ನು ರಾವ್ ಕ್ಷೇತ್ರದಲ್ಲಿ 21,346 ಹೆಸರುಗಳು ಡಿಲೀಟ್ ಆಗಿದ್ದು, ಈ ಮೂರೂ ಕ್ಷೇತ್ರಗಳ ಒಟ್ಟು ಮೊತ್ತವೇ ಇಂದೋರ್ ಜಿಲ್ಲೆಯ ಒಟ್ಟು ಡಿಲೀಟ್ ಆದ ಮತದಾರರಲ್ಲಿ ಶೇಕಡಾ 57 ರಷ್ಟಿದೆ! ಇದರ ಜೊತೆಗೆ ಇಂದೋರ್-2 ರಲ್ಲಿ 19,983, ಇಂದೋರ್-1 ರಲ್ಲಿ 12,102, ಇಂದೋರ್-3 ರಲ್ಲಿ 8,107, ಸಾಂವೇರ್ನಲ್ಲಿ 8,531 ಹಾಗೂ ದೇವಪಾಲ್ಪುರ ಕ್ಷೇತ್ರದಲ್ಲಿ 2,214 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಹೊರಹಾಕಲಾಗಿದೆ.
ಈ ಕುರಿತು ಇಂದೋರ್-1 ಮತ್ತು ಇಂದೋರ್-3 ಕ್ಷೇತ್ರಗಳ ಚುನಾವಣಾಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಆ ಸಮಯದಲ್ಲಿ ವೀಡಿಯೋ ಅಥವಾ ಇಮೇಲ್ ಬ್ಯಾಕಪ್ ಸಂಗ್ರಹಿಸಿಡುವಂತೆ ಕೇಂದ್ರ ಚುನಾವಣಾ ಆಯೋಗದಿಂದ ಯಾವುದೇ ಲಿಖಿತ ಸೂಚನೆಗಳು ಇರಲಿಲ್ಲ. ಹೀಗಾಗಿ ಡಿಜಿಟಲ್ ದಾಖಲೆಗಳನ್ನು ನಾವು ಉಳಿಸಿಕೊಂಡಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ ಯಾವುದೇ ಆಧಾರ ಹಾಗೂ ಕಾರಣಗಳಿಲ್ಲದೆ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಿರುವುದಕ್ಕೆ ಯಾವುದೇ ಜವಾಬ್ದಾರಿಯುತ ಸಾಕ್ಷ್ಯ ಇಲ್ಲದಿರುವುದು ದೇಶಾದ್ಯಂತ ಇಸಿಐ ಪ್ರಕ್ರಿಯೆಯ ಪಾರದರ್ಶಕತೆಯ ಮೇಲೆ ಬಹುದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿದೆ.
ಈ ಹಗರಣ ಇಂದೋರ್ಗೆ ಮಾತ್ರ ಸೀಮಿತವಾಗಿಲ್ಲ ಎಂದು ಪ್ರತಿಪಾದಿಸಿರುವ ದಿಲೀಪ್ ಕೌಶಲ್, ಜುಲೈ 31, 2025 ರಂದೇ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಮಧ್ಯಪ್ರದೇಶದ ಎಲ್ಲಾ 230 ವಿಧಾನಸಭಾ ಕ್ಷೇತ್ರಗಳಲ್ಲೂ ಇದೇ ರೀತಿ ಲಕ್ಷಾಂತರ ಮತದಾರರ ಹೆಸರುಗಳನ್ನು ಅಕ್ರಮವಾಗಿ ಡಿಲೀಟ್ ಮಾಡಲಾಗಿದ್ದು, ಸಾಕ್ಷ್ಯಗಳನ್ನು ನಾಶಪಡಿಸಲಾಗಿದೆ ಎಂದು ಆರೋಪಿಸಿದ್ದಾರೆ. ರಾಜಕೀಯ ಹಿನ್ನೆಲೆಯನ್ನು ಗಮನಿಸುವುದಾದರೆ, 2023ರ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 163 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿದ್ದರೆ, ಕಾಂಗ್ರೆಸ್ 66 ಸ್ಥಾನಗಳಿಗೆ ಕುಸಿದಿತ್ತು. ವಿಶೇಷವೆಂದರೆ ಇಂದೋರ್ ಜಿಲ್ಲೆಯ ಎಲ್ಲಾ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿಯೇ ಜಯಭೇರಿ ಬಾರಿಸಿತ್ತು. ಹೀಗಾಗಿ ಈ ಬೃಹತ್ ಮತದಾರರ ಹೆಸರುಗಳ ಡಿಲೀಟ್ ಪ್ರಕ್ರಿಯೆಯ ಹಿಂದೆ ರಾಜಕೀಯ ದುರುದ್ದೇಶವಿದೆಯೇ ಎಂಬ ಅನುಮಾನಗಳು ಈಗ ಮತ್ತಷ್ಟು ದಟ್ಟವಾಗಿವೆ.
ಇದನ್ನೂ ಓದಿ: ಅನ್ಯಾಯದ ವಿರುದ್ಧ ಹೋರಾಡುವವರ ಒಗ್ಗೂಡಿಸಲು ‘ಸತ್ಯಾಗ್ರಹ’ ಡಿಜಿಟಲ್ ಆಂದೋಲನ: ರಾಹುಲ್ ಗಾಂಧಿ ಚಾಲನೆ!
