ನವದೆಹಲಿ: ದೆಹಲಿಯ ಜಂತರ್ ಮಂತರ್ನಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಆಮ್ ಆದ್ಮಿ ಪಾರ್ಟಿ (AAP) ತನ್ನ ರಾಜಕೀಯ ಲಾಭಕ್ಕಾಗಿ ‘ಹೈಜಾಕ್’ ಮಾಡಲು ಯತ್ನಿಸುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು (Kiren Rijiju) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಸ್ತುತ ಹೋರಾಟ ಮುಂಚೂಣಿಯಲ್ಲಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜಿಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಮೂಲತಃ ಎಎಪಿ ಕಾರ್ಯಕರ್ತನಾಗಿದ್ದು, ವಿದ್ಯಾರ್ಥಿ ನಾಯಕನಂತೆ ಬಿಂಬಿಸಿಕೊಳ್ಳುತ್ತಿದ್ದಾನೆ ಎಂದು ಸಚಿವರು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳ ಬೆನ್ನ ಹಿಂದೆ ನಿಂತುಬೇಳೆ ಬೇಯಿಸಿಕೊಳ್ಳುವುದು ಸರಿಯಲ್ಲ
ಸುದ್ದಿಸಂಸ್ಥೆ ‘ಎಎನ್ಐ’ ಜೊತೆ ಮಾತನಾಡಿದ ಕಿರಣ್ ರಿಜಿಜು, ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಕಳವಳಗಳು ಮತ್ತು ಬೇಡಿಕೆಗಳು ಸಂಪೂರ್ಣವಾಗಿ ನ್ಯಾಯಯುತವಾಗಿವೆ. ಆದರೆ ರಾಜಕೀಯ ಪಕ್ಷಗಳು ವಿದ್ಯಾರ್ಥಿಗಳ ಬೆನ್ನ ಹಿಂದೆ ನಿಂತು ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿರುವುದು ಸರಿಯಲ್ಲ ಎಂದಿದ್ದಾರೆ. “ಅಭಿಜಿತ್ ದೀಪ್ಕೆ ಮಹಾರಾಷ್ಟ್ರ ಮೂಲದವರಾಗಿದ್ದು, ಆಮ್ ಆದ್ಮಿ ಪಾರ್ಟಿಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ಇಂತಹವರು ಇದ್ದಕ್ಕಿದ್ದಂತೆ ವಿದ್ಯಾರ್ಥಿ ನಾಯಕನಾಗಲು ಹೇಗೆ ಸಾಧ್ಯ?” ಎಂದು ಸಚಿವರು ಪ್ರಶ್ನಿಸಿದ್ದಾರೆ.
ವಿದ್ಯಾರ್ಥಿಗಳ ನೇರ ಬೇಡಿಕೆಗಳನ್ನು ಆಲಿಸಲು ಹಾಗೂ ಅವರೊಂದಿಗೆ ಮುಕ್ತವಾಗಿ ಚರ್ಚಿಸಲು ಸರ್ಕಾರ ಸದಾ ಸಿದ್ಧವಾಗಿದೆ. ಆದರೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ ರಾಜಕೀಯ ಪಕ್ಷಗಳು ಈ ಹೋರಾಟದ ಲಾಭ ಪಡೆಯಲು ಯತ್ನಿಸುತ್ತಿವೆ. ಪ್ರಸ್ತುತ ಪೀಳಿಗೆಯ ಯುವಕರ (Gen Z) ಜೊತೆ ಬಿಜೆಪಿ ಮತ್ತು ಸರ್ಕಾರದ ಸಂಬಂಧದ ಕುರಿತು ಮಾತನಾಡಿದ ರಿಜಿಜು, ನಮ್ಮದು ಏಷ್ಯನ್ ಸಾಂಸ್ಕೃತಿಕ ಮೌಲ್ಯಗಳನ್ನು ಹೊಂದಿರುವ ಕುಟುಂಬ ವ್ಯವಸ್ಥೆ. ಯುವಕರು ಹಿರಿಯರ ಮಾತುಗಳನ್ನು ಕೇಳುವ ವಾತಾವರಣ ನಮ್ಮಲ್ಲಿದೆ. ಯುವಕರನ್ನು ಪ್ರಚೋದಿಸುವ ಬದಲು ಅವರೊಂದಿಗೆ ನಿರಂತರ ಸಂವಾದ ನಡೆಸಿ ಸಮಸ್ಯೆ ಬಗೆಹರಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಆರೋಪಕ್ಕೆ ಪುಷ್ಟಿ ನೀಡಿ ಹಳೆದ ಫೋಟೋಗಳು
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ವಿಚಾರಣೆಯೊಂದರ ವೇಳೆ ‘ಕಾಕ್ರೋಚ್’ ಹಾಗೂ ‘ಪರಾವಲಂಬಿಗಳು’ ಎಂದು ನೀಡಿದ್ದ ಹೇಳಿಕೆಯ ನಂತರ ಅಭಿಜಿತ್ ದೀಪ್ಕೆ ಈ ‘ಕಾಕ್ರೋಚ್ ಜನತಾ ಪಾರ್ಟಿ’ ಚಳವಳಿಯನ್ನು ಹುಟ್ಟುಹಾಕಿದ್ದರು. ಈ ಹಿಂದೆ ಎಎಪಿ ಜೊತೆ ಗುರುತಿಸಿಕೊಂಡಿದ್ದ ದೀಪ್ಕೆ ಅವರ ಹಳೆಯ ಸಾಮಾಜಿಕ ಜಾಲತಾಣ ಪೋಸ್ಟ್ಗಳು ಈ ಆರೋಪಕ್ಕೆ ಪುಷ್ಟಿ ನೀಡಿವೆ. ಪ್ರಸ್ತುತ ಸಿಜೆಪಿ ಯಾವುದೇ ರಾಜಕೀಯ ಪಕ್ಷವಾಗಿ ಬದಲಾಗುವುದಿಲ್ಲ, ಬದಲಿಗೆ ಇದೊಂದು ಒತ್ತಡ ಗುಂಪಾಗಿ ಕಾರ್ಯನಿರ್ವಹಿಸಲಿದ್ದು, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಸುಧಾರಣೆಗೆ ‘ಶಾಲೆ ಸರಿ ಮಾಡಿ’ ಅಭಿಯಾನ ನಡೆಸುತ್ತಿರುವುದಾಗಿ ತಿಳಿಸಿದೆ.
ಇದನ್ನೂ ಓದಿ: ‘ದಿಮಾಗಿ ನಕ್ಸಲ್’ ಹೇಳಿಕೆಗೆ ಪ್ರಧಾನಿ ಮೋದಿ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ
