ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ (Nayanthara) ಅವರು ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ತಮ್ಮ ತಲೆಗೂದಲನ್ನು ಮುಡಿ ನೀಡಿ, ಸಂಪೂರ್ಣವಾಗಿ ತಲೆಬೋಳಿಸಿಕೊಂಡಿದ್ದಾರೆ ಎನ್ನಲಾದ ಚಿತ್ರಗಳು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ಸಾಂಪ್ರದಾಯಿಕವಾಗಿ ಭಕ್ತರು ದೇವರಿಗೆ ಮುಡಿ ಕೊಡುವ ರೀತಿಯಲ್ಲೇ ನಯನತಾರಾ ಕೂಡ ಬೋಳು ತಲೆಯಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ಫೇಸ್‌ಬುಕ್ ಹಾಗೂ ಎಕ್ಸ್ (ಟ್ವಿಟರ್) ತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದ್ದು, ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದ್ದವು.
ಟಾಕ್ಸಿಕ್ ರಿಲೀಸ್ ಬೆನ್ನಲ್ಲೆ ಮುಡಿ ಕೊಟ್ರಾ ನಟಿ?
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಹಾಗೂ ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆಗಿನ ‘ಎಸ್‌ವಿಸಿ 63’ (SVC63) ಸಿನಿಮಾಗಳಲ್ಲಿ ನಯನತಾರಾ ನಟಿಸುತ್ತಿರುವ ಬೆನ್ನಲ್ಲೇ ಈ ಫೋಟೋಗಳು ಹೊರಬಿದ್ದಿದ್ದವು. ಆದರೆ, ಈ ಚಿತ್ರಗಳ ಅಸಲಿಯತ್ತನ್ನು ಪರಿಶೀಲಿಸಿದಾಗ ಇದು ಸಂಪೂರ್ಣವಾಗಿ ಸುಳ್ಳು ಎಂಬುದು ತಿಳಿದುಬಂದಿದೆ. ನಯನತಾರಾ ತಿರುಮಲದಲ್ಲಿ ಮುಡಿ ನೀಡಿದ್ದಾರೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ.
ನಕಲಿ ಫೋಟೋದ ಸತ್ಯ ಬಯಲು
ನೆಟ್ಟಿಗರು ಜಾಲತಾಣಗಳಲ್ಲಿ ಹಂಚಿಕೊಂಡಿರುವ ಈ ಫೋಟೋಗಳು ಎಐ (ಕೃತಕ ಬುದ್ಧಿಮತ್ತೆ – AI) ತಂತ್ರಜ್ಞಾನವನ್ನು ಬಳಸಿ ಎಡಿಟ್ ಮಾಡಲಾದ ನಕಲಿ ಚಿತ್ರಗಳಾಗಿವೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ನಯನತಾರಾ ಅವರು ತಮ್ಮ ಪತಿ ವಿಘ್ನೇಶ್ ಶಿವನ್ ಅವರೊಂದಿಗೆ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದಾಗ ತೆಗೆಸಿಕೊಂಡಿದ್ದ ನೈಜ ಫೋಟೋಗಳನ್ನು ಆಧರಿಸಿ ಈ ಅಸಲಿ ಚಿತ್ರಗಳನ್ನು ತಿದ್ದುಪಡಿ ಮಾಡಲಾಗಿದೆ. ಮೂಲ ಫೋಟೋದಲ್ಲಿ ನಯನತಾರಾ ಅವರ ತಲೆಗೂದಲು ಹಾಗೆಯೇ ಇರುವುದನ್ನು ಕಾಣಬಹುದು. ಆದರೆ ಎಐ ಮೂಲಕ ಆಕೆಯ ಉಡುಪು ಹಾಗೂ ಕಿವಿ ಓಲೆಗಳನ್ನು ಹಾಗೆಯೇ ಉಳಿಸಿಕೊಂಡು, ತಲೆಯನ್ನು ಮಾತ್ರ ಬೋಳು ತಲೆಯನ್ನಾಗಿ ಬದಲಾಯಿಸಿ ಗೊಂದಲ ಸೃಷ್ಟಿಸಲಾಗಿದೆ.
#Nayanthara & #VigneshShivan visit Tirumala to seek the blessings of Lord Venkateshwara 🙏✨ pic.twitter.com/xwJU0ZDszo
— Jitendra (@Jitendra_9012) April 9, 2026
ಇನ್ನು ನಯನತಾರಾ ಅವರ ಮುಂಬರುವ ಸಿನಿಮಾಗಳ ಬಗ್ಗೆ ಹೇಳುವುದಾದರೆ, ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಶ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಹಾಗೂ ಹುಮಾ ಖುರೇಷಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಗೋವಾದ ಕರಾವಳಿ ತೀರದ ಸೌಂದರ್ಯದ ಹಿಂದೆ ಅಡಗಿರುವ ಡ್ರಗ್ಸ್ ಮಾಫಿಯಾದ ಕಥಾಹಂದರ ಹೊಂದಿರುವ ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿದ್ದು, ಆಗಸ್ಟ್ 26 ರಂದು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಕನ್ನಡ್ ಅಲ್ಲ ಕನ್ನಡ: ಪ್ರೀತಿಯಿಂದಲೇ ಭಾಷೆ ತಿದ್ದಿದ ರಾಕಿಂಗ್ ಸ್ಟಾರ್ ಯಶ್
