Actor Yash: ಕನ್ನಡ್ ಅಲ್ಲ ಕನ್ನಡ: ಪ್ರೀತಿಯಿಂದಲೇ ಭಾಷೆ ತಿದ್ದಿದ ರಾಕಿಂಗ್ ಸ್ಟಾರ್ ಯಶ್

Actor Yash Wins Hearts Again Corrects Host Pronunciation of Kannada on Aap Ki Adalat

ಬೆಂಗಳೂರು: ಸ್ಯಾಂಡಲ್‌ವುಡ್‌ ಗಡಿಯನ್ನಷ್ಟೇ ಅಲ್ಲದೆ ಜಾಗತಿಕ ಮಟ್ಟದಲ್ಲೂ ಕನ್ನಡ ಚಿತ್ರರಂಗದ ಕೀರ್ತಿಪತಾಕೆಯನ್ನು ಎತ್ತಿಹಿಡಿದಿರುವ ರಾಕಿಂಗ್ ಸ್ಟಾರ್ ಯಶ್ (Actor Yash) ಅವರಿಗೆ ತಮ್ಮ ಮಾತೃಭಾಷೆ ಕನ್ನಡದ ಮೇಲಿರುವ ಗೌರವ ಮತ್ತು ಪ್ರೀತಿ ಅಪಾರ. ವಿದೇಶಿ ಅಥವಾ ರಾಷ್ಟ್ರೀಯ ವೇದಿಕೆಗಳಲ್ಲಾದರೂ ಸರಿ, ಕನ್ನಡ ಭಾಷೆಯನ್ನು ಸರಿಯಾಗಿ ಉಚ್ಚರಿಸಬೇಕು ಎಂಬುದನ್ನು ಪ್ರತಿಪಾದಿಸುತ್ತಾ ಬಂದಿರುವ ಯಶ್, ಇತ್ತೀಚೆಗೆ ಪ್ರಸಿದ್ಧ ‘ಆಪ್ ಕೀ ಅದಾಲತ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ನಡೆದಿರುವ ಸ್ವಾರಸ್ಯಕರ ಪ್ರಸಂಗವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಕನ್ನಡ್‌ ಅಲ್ಲ ಕನ್ನಡ

ಉತ್ತರ ಭಾರತದ ಮೂಲದವರು ಅಥವಾ ರಾಷ್ಟ್ರೀಯ ಮಾಧ್ಯಮಗಳು ಸಾಮಾನ್ಯವಾಗಿ ‘ಕನ್ನಡ’ ಭಾಷೆಯನ್ನು ‘ಕನ್ನಡ್’ ಎಂದು ಉಚ್ಚರಿಸುವುದು ವಾಡಿಕೆ. ಆದರೆ ಭಾಷೆಯ ಉಚ್ಚಾರಣೆಯಲ್ಲಿ ಆಗುವ ಇಂತಹ ತಪ್ಪನ್ನು ಯಶ್ ಎಂದಿಗೂ ಸಹಿಸುವುದಿಲ್ಲ. ಹಾಗಂತ ಅವರು ಕೋಪಗೊಳ್ಳದೆ ಪ್ರೀತಿಯಿಂದಲೇ ತಿದ್ದುವ ಗುಣ ಉಳ್ಳವರು. ‘ಆಪ್ ಕೀ ಅದಾಲತ್’ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹಾಗೂ ನಿರೂಪಕರಾದ ರಜತ್ ಶರ್ಮಾ ಅವರು ಯಶ್ ಅವರನ್ನು ಪ್ರಶ್ನಿಸುವಾಗ ‘ಕನ್ನಡ್ ಸಿನಿಮಾಗಳು…’ ಎಂದು ಉಚ್ಚರಿಸಿದ್ದರು. ಇದನ್ನು ತಕ್ಷಣವೇ ಗಮನಿಸಿದ ಯಶ್, ಮಧ್ಯಪ್ರವೇಶಿಸಿ ಅತ್ಯಂತ ನಮ್ರತೆಯಿಂದಲೇ “ಸರ್… ಅದು ಕನ್ನಡ್ ಅಲ್ಲ, ಕನ್ನಡ” ಎಂದು ನಗುಮುಖದಿಂದ ತಿದ್ದಿದರು.

ಯಶ್ ಅವರ ಈ ಮಾತಿಗೆ ನಕ್ಕ ರಜತ್ ಶರ್ಮಾ ಅವರು ಕೂಡಲೇ ತಮ್ಮ ತಪ್ಪನ್ನು ಒಪ್ಪಿಕೊಂಡು “ಸರಿ… ಕನ್ನಡ” ಎಂದು ಸರಿಯಾಗಿ ಉಚ್ಚರಿಸಿದರು. ನಂತರ ಅಲ್ಲಿ ನೆರೆದಿದ್ದ ಪ್ರೇಕ್ಷಕರತ್ತ ತಿರುಗಿ ಹಿಂದಿಯಲ್ಲೇ ಮಾತನಾಡಿದ ಯಶ್, “ಎಲ್ಲರೂ ಕೇಳಿಸಿಕೊಳ್ಳಿ, ಅದು ಕನ್ನಡ್ ಅಲ್ಲ, ಕನ್ನಡ. ನನ್ನ ಭಾವನೆಯನ್ನು ಅರ್ಥ ಮಾಡಿಕೊಳ್ಳಿ” ಎಂದು ತಿಳಿಸಿ ಸನ್ನಿವೇಶವನ್ನು ಹಗುರಗೊಳಿಸಿದರು.

ಯಶ್‌ ಕೆಲಸಕ್ಕೆ ಶ್ಲಾಘನೆಯ ಮಳೆ

ರಾಷ್ಟ್ರೀಯ ಮಟ್ಟದ ಅತ್ಯಂತ ಜನಪ್ರಿಯ ವೇದಿಕೆಯಲ್ಲೂ ತಮ್ಮ ಮಾತೃಭಾಷೆಯ ಸರಿಯಾದ ಉಚ್ಚಾರಣೆ ಮತ್ತು ಗೌರವಕ್ಕಾಗಿ ಧ್ವನಿ ಎತ್ತಿದ ಯಶ್ ಅವರ ಈ ಅಭಿಮಾನ ಮತ್ತು ಕಾಳಜಿಗೆ ಕನ್ನಡಿಗರು ಹಾಗೂ ಅವರ ಅಭಿಮಾನಿಗಳು ಜಾಲತಾಣಗಳಲ್ಲಿ ಶ್ಲಾಘನೆಯ ಮಳೆ ಹರಿಸುತ್ತಿದ್ದಾರೆ. ಶೋ ಆರಂಭದಲ್ಲೇ ತಮ್ಮ ಹಿಂದಿ ಸಂಭಾಷಣೆಯ ಕುರಿತು ಮಾತನಾಡಿದ್ದ ಯಶ್, “ನಾವು ಎಲ್ಲಾ ಭಾಷೆಗಳನ್ನೂ ಗೌರವಿಸಬೇಕು. ಒಂದು ವೇಳೆ ನಾನು ಹಿಂದಿ ಮಾತನಾಡುವಾಗ ಏನಾದರೂ ಸಣ್ಣಪುಟ್ಟ ತಪ್ಪಾದರೆ ಕ್ಷಮಿಸಿ” ಎಂದು ವಿನಂತಿಸಿದ್ದರು. ಯಶ್ ಅವರ ಈ ವಿನಮ್ರತೆ ಹಾಗೂ ಸ್ಪಷ್ಟ ಹಿಂದಿ ಮಾತುಗಳಿಗೆ ನಿರೂಪಕ ರಜತ್ ಶರ್ಮಾ ಅವರೇ ಫಿದಾ ಆಗಿದ್ದರು.

ಇದನ್ನೂ ಓದಿ: ಖುದ್ದು ಹಾಜರಾತಿ ಅರ್ಜಿ, ಕೋರ್ಟ್‌ನಿಂದ ಮಹತ್ವದ ಆದೇಶ

Leave a Reply

Your email address will not be published. Required fields are marked *