ಮುಂಬೈ ದುಬೈನಿಂದ ಟೆಲ್ ಅವಿವ್ಗೆ ಹೊರಟಿದ್ದ ಫ್ಲೈದುಬೈ (flydubai) ವಿಮಾನದಲ್ಲಿ ನಡೆದ ಭೀಕರ ಮಿಡ್-ಏರ್ ದಾಳಿಯ ವೇಳೆ ಅಸದೃಶ ಸಾಹಸ ಮೆರೆದು 182 ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Captain Smit Machchhar) ಅವರ ಶೌರ್ಯವನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ‘ಎಕ್ಸ್’ (X) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ಸಲ್ಮಾನ್ ಖಾನ್, “ಕಮಾಲ್ ಮಾಡಿದ್ದೀರಿ ಪೈಲಟ್ ಜೀ, ನಾವೆಲ್ಲರೂ ನಿಮಗೆ ಗೌರವಪೂರ್ವಕ ಸಲಾಂ ಸಲ್ಲಿಸುತ್ತೇವೆ! ನಿಮ್ಮ ಜೊತೆ ವಿಮಾನದಲ್ಲಿ ಪ್ರಯಾಣಿಸುವುದು ನಮಗೆ ಅತ್ಯಂತ ಹೆಮ್ಮೆಯ ವಿಷಯವಾಗಲಿದೆ. ವೆಲ್ ಡನ್ ಬ್ರೋ, ಕ್ಯಾಪ್ಟನ್ ಸ್ಮಿತ್ ಮಚ್ಚಾರ್” ಎಂದು ಹಾರೈಸಿದ್ದಾರೆ.
ಏನಿದು ದುಬೈ ವಿಮಾನ ಪ್ರಕರಣ?
ಬುಧವಾರದಂದು ದುಬೈನಿಂದ ಟೆಲ್ ಅವಿವ್ಗೆ ಸಾಗುತ್ತಿದ್ದ ಫ್ಲೈದುಬೈ ಎಫ್ಝಡ್1073 (FZ1073) ವಿಮಾನದಲ್ಲಿ ಸಹ-ಪೈಲಟ್ (Co-pilot) ಏಕಾಏಕಿ ಕಾಕ್ಪಿಟ್ ಒಳಗಡೆಯೇ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ವಿಮಾನವನ್ನು ಅಪಘಾತಕ್ಕೀಡುಮಾಡಲು ಯತ್ನಿಸಿದ್ದ. ದಾಳಿಯಿಂದ ತೀವ್ರವಾಗಿ ಗಾಯಗೊಂಡು ರಕ್ತಸಿಕ್ತರಾಗಿದ್ದಾಗ್ಯೂ ಧೈರ್ಯ ಗೆಡದ ಸ್ಮಿತ್ ಮಚ್ಚಾರ್, ವಿಮಾನವು ವೇಗವಾಗಿ ಕೆಳಕ್ಕೆ ಧುಮುಕುತ್ತಿರುವುದನ್ನು ಗ್ರಹಿಸಿ, ಸಾವು-ಬದುಕಿನ ನಡುವಿನ ಹೋರಾಟದಲ್ಲಿ ಕಾಕ್ಪಿಟ್ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು. ಬಾಗಿಲು ತೆರೆಯುತ್ತಿದ್ದಂತೆ ಒಳಗಡೆ ಧಾವಿಸಿದ ಪ್ರಯಾಣಿಕರು ಮತ್ತು ಸಿಬ್ಬಂದಿ ದಾಳಿಕೋರನನ್ನು ಹಿಡಿದು ಬಂಧಿಸಿದರು.
Kamaal kar diya pilot ji, hum sab aap ko salute karte hain will be a pleasure to fly with u.. Well done bro.. Capt #SmitMachchhar
— Salman Khan (@BeingSalmanKhan) October 2, 2026
ಭಾರತೀಯ ಹೀರೋಗೆ ಮಚ್ಚುಗೆಯ ಮಳೆ
ನಂತರ ವಿಮಾನವನ್ನು ಸೌದಿ ಅರೇಬಿಯಾದ ತಬುಕ್ ವಿಮಾನನಿಲ್ದಾಣಕ್ಕೆ ತುರ್ತು ಭೂಸ್ಪರ್ಶ ಮಾಡಿಸಲಾಯಿತು. ಪ್ರಾಣಾಪಾಯದಿಂದ ಪಾರಾದ ಕ್ಯಾಪ್ಟನ್ ಸ್ಮಿತ್ ಅವರ ಸಾಹಸಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿ ಜಾಗತಿಕ ನಾಯಕರು ಪ್ರಶಂಸೆ ವ್ಯಕ್ತಪಡಿಸಿದ್ದು, ವಿಡಿಯೋ ಕಾಲ್ ಮೂಲಕ ಮಾತನಾಡಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಇದೀಗ ಬಾಲಿವುಡ್ನ ‘ಟೈಗರ್’ ಸಲ್ಮಾನ್ ಖಾನ್ ಕೂಡ ಈ ರಿಯಲ್ ಹೀರೋಗಾಗಿ ಮೆಚ್ಚುಗೆಯ ನುಡಿಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಅಭಿಮಾನಿಗಳ ಜೊತೆ 33ನೇ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ರಚಿತಾ ರಾಮ್: ಸೆಲ್ಫಿ ವೇಳೆ ಅನಿರೀಕ್ಷಿತ ಘಟನೆ!
