ಮುಂಬೈ: ಬಾಲಿವುಡ್ನ ಜನಪ್ರಿಯ ನಟಿ ಜಾನ್ವಿ ಕಪೂರ್ (Janhvi Kapoor) ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಲೈಂಗಿಕವಾಗಿ ಅಸಭ್ಯವಾದ ‘ಡೀಪ್ಫೇಕ್’ (Deepfake) ವೀಡಿಯೊ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಂತ್ರಜ್ಞಾನದ ದುರ್ಬಳಕೆ ಮತ್ತು ಮಹಿಳೆಯರ ಸಮ್ಮತಿಯ ಕುರಿತು ಅತ್ಯಂತ ಗಂಭೀರ ಪ್ರಶ್ನೆಗಳನ್ನು ಎತ್ತಿರುವ ಅವರು, ಇನ್ಸ್ಟಾಗ್ರಾಮ್ ಖಾತೆಯ ಸ್ಟೋರೀಸ್ ವಿಭಾಗದಲ್ಲಿ ದೀರ್ಘವಾದ ಭಾವನಾತ್ಮಕ ಹಾಗೂ ಖಾರವಾದ ಟಿಪ್ಪಣಿಯೊಂದನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಜೂನಿಯರ್ ಎನ್ಟಿಆರ್ ಅವರೊಂದಿಗೆ ನಟಿಸಿದ್ದ ‘ದೇವರ’ ಚಿತ್ರದ ದೃಶ್ಯವೊಂದನ್ನು ತರ್ತು ಮಾಡಿ, ಕೃತಕ ಬುದ್ಧಿಮತ್ತೆಯ (AI) ಸಹಾಯದಿಂದ ಈ ಅಸಲಿ ಇಲ್ಲದ ಅಶ್ಲೀಲ ವೀಡಿಯೊವನ್ನು ಸೃಷ್ಟಿಸಲಾಗಿತ್ತು. ಈ ಘಟನೆಯು ಚಿತ್ರರಂಗ ಸೇರಿದಂತೆ ಡಿಜಿಟಲ್ ಜಗತ್ತಿನಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.
ಮಹಿಳೆಯ ಅನುಮತಿ ಬಹಳ ಮುಖ್ಯ ಎಂದ ನಟಿ
ತಮ್ಮ ಸುದೀರ್ಘ ಬರಹದಲ್ಲಿ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ಮಾನಸಿಕತೆಯನ್ನು ಜಾನ್ವಿ ಕಪೂರ್ ತೀವ್ರವಾಗಿ ವಾಗ್ದಾಳಿ ಮಾಡಿದ್ದಾರೆ. ಮಹಿಳೆಯರ ಒಪ್ಪಿಗೆಯಿಲ್ಲದೆ ಅವರ ಚಿತ್ರ ಅಥವಾ ವೀಡಿಯೊಗಳನ್ನು ಮಾರ್ಪಡಿಸಿ ಹಂಚಿಕೊಳ್ಳುವುದು ತೀವ್ರ ರೀತಿಯ ಲೈಂಗಿಕ ದೌರ್ಜನ್ಯಕ್ಕೆ ಸಮಾನವಾಗಿದೆ ಎಂದು ಅವರು ಕಿಡಿಕಾರಿದ್ದಾರೆ. ಚಿತ್ರರಂಗದಲ್ಲಿರುವ ಬಹುತೇಕ ಪ್ರತಿಯೊಬ್ಬ ಮಹಿಳೆಯೂ ಯಾವುದೋ ಒಂದು ಹಂತದಲ್ಲಿ ಇಂತಹ ಅನುಭವವನ್ನು ಎದುರಿಸಿದ್ದಾರೆ ಹಾಗೂ ಸಾಮಾನ್ಯ ಮಹಿಳೆಯರು ಸಹ ಇಂದು ಇಂತಹ ಡಿಜಿಟಲ್ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಮಹಿಳೆಯ ದೇಹ, ಆಯ್ಕೆ ಮತ್ತು ಆಕೆಯ ಸಮ್ಮತಿಗೆ ಗೌರವ ನೀಡುವುದು ಮಾನವೀಯತೆಯ ಅತ್ಯಂತ ಮೂಲಭೂತ ಸೂತ್ರವಾಗಿದೆ. ಆದರೆ ಜನರಿಗೆ ಇದು ಇನ್ನೂ ಅರ್ಥವಾಗದಿರುವುದು ಆಶ್ಚರ್ಯಕರವಾಗಿದೆ. ಒಬ್ಬ ಮಹಿಳೆ ಕಂಟಿನ್ಯೂ ಆಗಿ ಐದು ದಿನಗಳ ಕಾಲ ಯಾವುದಕ್ಕಾದರೂ ಒಪ್ಪಿಗೆ ನೀಡಿ, ಆರನೇ ದಿನ ‘ಇಲ್ಲ’ ಎಂದು ಹೇಳಿದರೆ, ಆಕೆಯ ಆ ನಿರ್ಧಾರವನ್ನು ಪ್ರತಿಯೊಬ್ಬರೂ ಗೌರವಿಸಲೇಬೇಕು ಎಂದು ಸಮ್ಮತಿಯ ಆಳವಾದ ಅರ್ಥವನ್ನು ಅವರು ವಿವರವಾಗಿ ವಿವರಿಸಿದ್ದಾರೆ.
ಮಹಿಳೆಯರ ಉಡುಪು ಮತ್ತು ಅವರ ಹಕ್ಕುಗಳ ಕುರಿತು ಮಾತನಾಡುತ್ತಾ, ಒಬ್ಬ ಮಹಿಳೆ ಮಿನಿ ಸ್ಕರ್ಟ್ ಧರಿಸಿದ ತಕ್ಷಣ ಆಕೆಯ ಒಪ್ಪಿಗೆಯಿಲ್ಲದೆ ಆಕೆಯ ದೇಹವನ್ನು ಸೂಕ್ಷ್ಮ ಕೋನಗಳಿಂದ ಚಿತ್ರೀಕರಿಸಲು ಅಥವಾ ಅದನ್ನು ಸಾರ್ವಜನಿಕವಾಗಿ ದುರ್ಬಳಕೆ ಮಾಡಲು ಯಾರಿಗೂ ಅಧಿಕಾರ ಸಿಗುವುದಿಲ್ಲ. ಒಬ್ಬ ಮಹಿಳೆಗೆ ಯಾವುದು ಅನುಕೂಲಕರವಾಗಿದೆ, ಆಕೆ ಎಲ್ಲಿ ಗಡಿಗಳನ್ನು ನಿರ್ಧರಿಸುತ್ತಾಳೆ ಮತ್ತು ತನ್ನ ದೇಹದ ಬಗ್ಗೆ ಆಕೆ ಏನು ನಿರ್ಧಾರ ತೆಗೆದುಕೊಳ್ಳುತ್ತಾಳೆ ಎಂಬುದು ಸಂಪೂರ್ಣವಾಗಿ ಆಕೆಯ ವೈಯಕ್ತಿಕ ಹಕ್ಕಾಗಿದೆ. ಇದು ಕೇವಲ ತಮಗೆ ಎದುರಾದ ಎಐ ವೀಡಿಯೊ ಸಮಸ್ಯೆಗೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಸಮಾಜದಲ್ಲಿ ಮಹಿಳೆಯರನ್ನು ನೋಡುವ ದೃಷ್ಟಿಕೋನ, ಅವರ ಸುರಕ್ಷತೆಯ ಹೋರಾಟ ಮತ್ತು ಪ್ರತಿದಿನ ಅವರು ಅನುಭವಿಸುವ ಭಯಕ್ಕೆ ಸಂಬಂಧಿಸಿದ್ದಾಗಿದೆ ಎಂದು ಜಾನ್ವಿ ಸ್ಪಷ್ಟಪಡಿಸಿದ್ದಾರೆ.
ಡಿಜಿಟಲ್ ಜಗತ್ತಿನಲ್ಲಿ ಎದುರಾಗುತ್ತಿರುವ ಈ ಬೆದರಿಕೆಗಳು ಮಹಿಳೆಯರ ದೈನಂದಿನ ಭೌತಿಕ ಜೀವನದ ನೆಮ್ಮದಿಯನ್ನು ಸಂಪೂರ್ಣವಾಗಿ ಕಸಿದುಕೊಳ್ಳುತ್ತಿವೆ. ಇಂತಹ ಘಟನೆಗಳು ನಡೆದಾಗ ಕೇವಲ “ನಿಮ್ಮ ಹೆಣ್ಣುಮಕ್ಕಳನ್ನು ರಕ್ಷಿಸಿ” ಎಂದು ಹೇಳುವುದು ಪರಿಹಾರವಲ್ಲ. ಬದಲಾಗಿ, ಇತರರ ಗಡಿಗಳನ್ನು ಮೀರುವುದು ತಮ್ಮ ಹಕ್ಕು ಎಂದು ಭಾವಿಸುವ ಸಮಾಜದ ತಪ್ಪಾದ ಮಾನಸಿಕತೆಯನ್ನು ಬುಡಮೇಲು ಮಾಡಬೇಕಾಗಿದೆ. ಸಮಾಜದಲ್ಲಿ ನೈತಿಕ ದಿಕ್ಸೂಚಿ ಮತ್ತು ಧೈರ್ಯವಿರುವ ಪುರುಷರು ಎದ್ದುನಿಂತು ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಬಹಿರಂಗವಾಗಿ ಹೇಳಿದಾಗ ಮಾತ್ರ ಇಂತಹ ಬದಲಾವಣೆ ಸಾಧ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.
ಸಮಾಜವನ್ನ ಪ್ರಶ್ನೆ ಮಾಡಿದ ಜಾನ್ವಿ
ಈ ಕಷ್ಟದ ಸಮಯದಲ್ಲಿ ತಮ್ಮ ಪರವಾಗಿ ಧ್ವನಿ ಎತ್ತಿದ ‘ದೇವರ’ ಚಿತ್ರದ ನಾಯಕ ನಟ ಜೂನಿಯರ್ ಎನ್ಟಿಆರ್ ಅವರಿಗೆ ಜಾನ್ವಿ ಕಪೂರ್ ಧನ್ಯವಾದ ಅರ್ಪಿಸಿದ್ದಾರೆ. ಕೋಟ್ಯಂತರ ಜನರು ಆರಾಧಿಸುವ ವ್ಯಕ್ತಿಯೊಬ್ಬರು ತಮಗೆ ನೇರವಾಗಿ ಸಂಬಂಧವಿಲ್ಲದ ವಿಷಯದಲ್ಲೂ ಮಹಿಳೆಯರ ಪರವಾಗಿ ಗಟ್ಟಿಯಾಗಿ ಮಾತನಾಡಿದಾಗ, ಅದು ಅನ್ಯಾಯ ಎದುರಿಸುತ್ತಿರುವ ಪ್ರತಿಯೊಬ್ಬ ಮಹಿಳೆಗೂ ದೊಡ್ಡ ಶಕ್ತಿಯನ್ನು ನೀಡುತ್ತದೆ ಎಂದಿದ್ದಾರೆ. ಇದರ ಜೊತೆಗೆ ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಬೆಂಬಲವಾಗಿ ನಿಂತ ಮೆಗಾಸ್ಟಾರ್ ಚಿರಂಜೀವಿ, ನಟ ವಿಜಯ್ ಹಾಗೂ ಹಿರಿಯ ನಟಿ ಖುಷ್ಬೂ ಅವರಿಗೂ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಕೊನೆಯಲ್ಲಿ, ಸಮಾಜದಲ್ಲಿ ಜರುಗುತ್ತಿರುವ ಈ ಎಲ್ಲಾ ಬೆಳವಣಿಗೆಗಳು ಮಹಿಳೆಯರ ಮೇಲೆ ಕಿರುಕುಳ ನೀಡುವ ಪ್ರತಿಯೊಬ್ಬರಿಗೂ ಆತ್ಮಾವಲೋಕನ ಮಾಡಿಕೊಳ್ಳಲು ಪ್ರೇರೇಪಿಸಲಿ ಎಂದು ಆಶಿಸಿರುವ ಜಾನ್ವಿ, ಮಹಿಳೆಯನ್ನು ಕೇವಲ ಒಬ್ಬ ಮನುಷ್ಯಳಾಗಿ ನೋಡಲು ಮತ್ತು ಆಕೆಯ ದೇಹ, ಆಕೆಯ ಪ್ರತಿಬಿಂಬ, ಆಕೆಯ ಗಡಿಗಳು ಹಾಗೂ ಆಕೆಯ ಆಯ್ಕೆಯನ್ನು ಗೌರವಿಸಲು ಸಮಾಜಕ್ಕೆ ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: 182 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್ಗೆ ಸಲ್ಮಾನ್ ಖಾನ್ ಶ್ಲಾಘನೆ: ಸಲ್ಲು ಸ್ಪೆಷಲ್ ಪೋಸ್ಟ್!
