ಬೆಂಗಳೂರು: ಭಾರತೀಯ ಶಾಸ್ತ್ರೀಯ ಸಂಗೀತ ಕ್ಷೇತ್ರದ ಅಪರೂಪದ ಸಾಧಕಿ, ಹಿರಿಯ ಪತ್ರಕರ್ತೆ, ಸ್ತ್ರೀವಾದಿ (Sad News) ಚಿಂತಕಿ, ಗ್ರಾಹಕರ ಹಕ್ಕುಗಳ ಹೋರಾಟಗಾರ್ತಿ ಹಾಗೂ ಅಂಕಣಕಾರ್ತಿ ಡಾ. ಶಕುಂತಲಾ ನರಸಿಂಹನ್ (86) ಅವರು ನವೆಂಬರ್ 18, 2026ರಂದು ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಬೆಂಗಳೂರಿನಲ್ಲಿ ಕೊನೆಯುಸಿರೆಳೆದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ಡಾ. ಶಕುಂತಲಾ ಅವರು, ದಕ್ಷಿಣ ಮತ್ತು ಉತ್ತರ ಭಾರತದ ಶಾಸ್ತ್ರೀಯ ಸಂಗೀತ ಪ್ರಕಾರಗಳೆರಡರಲ್ಲೂ ಏಕಕಾಲಕ್ಕೆ ಅಸಾಧಾರಣ ಸಾಧನೆ ಮಾಡಿದ ವಿಶಿಷ್ಟ ವ್ಯಕ್ತಿತ್ವದವರಾಗಿದ್ದರು. ಸಂಗೀತದ ಜೊತೆಗೆ ಸಮಾಜಮುಖಿ ಚಿಂತನೆ ಮತ್ತು ಪತ್ರಿಕೋದ್ಯಮದ ಮೂಲಕ ನಾಡಿನ ಬೌದ್ಧಿಕ ಹಾಗೂ ಸಾಂಸ್ಕೃತಿಕ ವಲಯಕ್ಕೆ ಅವರು ಸಲ್ಲಿಸಿದ ಸೇವೆ ಅಪಾರವಾದುದು.
ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತದ ‘ಸ್ವಯಂ ಜುಗಲ್ಬಂದಿ’ (Sad News) ವೈಶಿಷ್ಟ್ಯ
ಡಾ. ಶಕುಂತಲಾ ನರಸಿಂಹನ್ ಅವರು ಭಾರತೀಯ ಶಾಸ್ತ್ರೀಯ ಸಂಗೀತ ಪರಂಪರೆಯಲ್ಲಿ ಅತ್ಯಂತ ವಿಭಿನ್ನ ಸ್ಥಾನ ಪಡೆದಿದ್ದ ಕಲಾವಿದೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ರಾಂಪುರ-ಸಹಸ್ವಾನ್ ಘರಾನಾದ ಪ್ರಸಿದ್ಧ ಉಸ್ತಾದ್ ಹಫೀಜ್ ಅಹ್ಮದ್ ಖಾನ್ ಅವರ ಬಳಿ ಹಿಂದೂಸ್ತಾನಿ ಗಾಯನವನ್ನು ಕಲಿತಿದ್ದ ಅವರು, ಮತ್ತೊಂದೆಡೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಖ್ಯಾತ ದಿಗ್ಗಜರಾದ ಮುಸಿರಿ ಸುಬ್ರಮಣ್ಯ ಅಯ್ಯರ್ ಮತ್ತು ತಂಜಾವೂರು ಬೃಂದಾ ಅವರಿಂದ ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತದ ಶಿಕ್ಷಣ ಪಡೆದಿದ್ದರು.
ಆಕಾಶವಾಣಿ (AIR) ಮತ್ತು ದೂರದರ್ಶನದ ರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳಲ್ಲಿ ಕರ್ನಾಟಕ ಹಾಗೂ ಹಿಂದೂಸ್ತಾನಿ — ಈ ಎರಡೂ ಸಂಗೀತ ಪ್ರಕಾರಗಳಲ್ಲಿ ಪ್ರದರ್ಶನ ನೀಡಿದ ದೇಶದ ಏಕೈಕ ಗಾಯಕಿ ಎಂಬ ಕೀರ್ತಿ ಅವರಿಗೆ ಸಲ್ಲುತ್ತದೆ. ಅಲ್ಲದೆ, ಈ ಉಭಯ ಸಂಗೀತ ಶೈಲಿಗಳಲ್ಲೂ ‘ಎ-ಟಾಪ್’ (A-Top) ಶ್ರೇಣಿ ಪಡೆದ ಏಕೈಕ ಕಲಾವಿದೆ ಎಂಬ ಹೆಗ್ಗಳಿಕೆಯೂ ಅವರದಾಗಿತ್ತು. ಒಂದೇ ಕಛೇರಿಯಲ್ಲಿ ಮತ್ತು ಒಂದೇ ವೇದಿಕೆಯಲ್ಲಿ ಕರ್ನಾಟಕ ಹಾಗೂ ಹಿಂದೂಸ್ತಾನಿ ಶೈಲಿಗಳನ್ನು ಅತ್ಯಂತ ಸಹಜವಾಗಿ ಹಾಗೂ ಲೀಲಾಜಾಲವಾಗಿ ಬದಲಾಯಿಸುತ್ತಾ ‘ಸ್ವಯಂ ಜುಗಲ್ಬಂದಿ’ ನಡೆಸಿಕೊಡುವ ಅಪೂರ್ವ ಕಲೆ ಅವರಿಗೆ ಒಲಿದಿತ್ತು. ಶ್ರೋತೃಗಳಿಗೆ ಎರಡೂ ಸಂಪ್ರದಾಯಗಳ ಸೊಬಗನ್ನು ಏಕಕಾಲಕ್ಕೆ ಉಣಬಡಿಸುವ ಅವರ ಪ್ರಸ್ತುತಿ ವಿಶಿಷ್ಟವಾಗಿತ್ತು.
ಧ್ವನಿ ಕಳೆದುಕೊಂಡ ಸಂಕಷ್ಟ ಮೆಟ್ಟಿನಿಂತ ಛಲದ ಬದುಕು
ಸಂಗೀತ ಮತ್ತು ಬದುಕಿನಲ್ಲಿ ಉನ್ನತ ಸಾಧನೆ ಮಾಡಿದ ಶಕುಂತಲಾ ಅವರ ಜೀವನದ ಹಾದಿ ಸುಗಮವಾಗಿರಲಿಲ್ಲ. ಅವರ ಮೊದಲ ಮಗುವಿಗೆ ಎರಡು ವರ್ಷ ತುಂಬಿದ್ದ ಸಂದರ್ಭದಲ್ಲಿ, ಅಜ್ಞಾತ ಕಾರಣದಿಂದಾಗಿ ಅವರು ತಮ್ಮ ಧ್ವನಿಯನ್ನೇ ಕಳೆದುಕೊಂಡಿದ್ದರು. ಹಾಡುವ ಮಾತೇ ದೂರವಾಗಲಿ, ಸಾಮಾನ್ಯವಾಗಿ ಮಾತನಾಡಲೂ ಸಾಧ್ಯವಾಗದ ಕಠಿಣ ಪರಿಸ್ಥಿತಿ ಅವರನ್ನು ಕಾಡಿತ್ತು. ಈ ಸಮಸ್ಯೆಗೆ ನಿಖರ ಕಾರಣವೇನು ಎಂಬುದನ್ನು ವೈದ್ಯರಿಗೂ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.
ಸಂಗೀತ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದ ಪ್ರತಿಭಾವಂತ ಕಲಾವಿದೆಗೆ, ಮನೆಯಲ್ಲಿಯೇ ಕೂತು ಮಾತನಾಡಲೂ, ಹಾಡಲೂ ಆಗದೆ ಸಂಕಟಪಡುವ ಸ್ಥಿತಿ ಬಂದೊದಗಿದ್ದು ದೊಡ್ಡ ಆಘಾತ ಮತ್ತು ನಿರಾಶೆ ತಂದಿತ್ತು. ಆದರೆ, ಎದೆಗುಂದದ ಅವರು ಆತ್ಮವಿಶ್ವಾಸ, ತಾಳ್ಮೆ ಮತ್ತು ಅಚಲ ಛಲದಿಂದ ಆ ಸವಾಲನ್ನು ಎದುರಿಸಿದರು. ಧ್ವನಿ ಕಳೆದುಕೊಂಡ ಹಿನ್ನಡೆಯನ್ನೂ ಮೆಟ್ಟಿ ನಿಂತು, ಮುಂದೆ ಸಂಗೀತ ಸಾಧನೆಯ ಜೊತೆಗೆ ಬೌದ್ಧಿಕ ಮತ್ತು ಸಾಹಿತ್ಯಿಕ ಕ್ಷೇತ್ರದಲ್ಲೂ ಅತ್ಯುತ್ತಮ ಸಾಧನೆಗಳನ್ನು ಮಾಡುವ ಮೂಲಕ ಎಲ್ಲರಿಗೂ ಸ್ಫೂರ್ತಿಯಾದರು.
ಉಭಯ ಡಾಕ್ಟರೇಟ್, ಅಧ್ಯಾಪನ ಮತ್ತು ಜಾಗತಿಕ ಪತ್ರಿಕೋದ್ಯಮ ಪಯಣ
1947ರ ದೇಶ ವಿಭಜನೆ ಮತ್ತು ಸ್ವಾತಂತ್ರ್ಯದ ವೇಳೆ ದೆಹಲಿಯಲ್ಲಿ ವಾಸವಾಗಿದ್ದ ಶಕುಂತಲಾ ನರಸಿಂಹನ್ ಅವರು, ನಂತರ ಮುಂಬೈಗೆ ತೆರಳಿ ಅಲ್ಲಿಂದ ಬೆಂಗಳೂರಿಗೆ ಬಂದು ನೆಲೆಸಿದರು. ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಹಾಗೂ ಶಾಸ್ತ್ರೀಯ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದ ಅವರು, ‘ಮಹಿಳಾ ಅಧ್ಯಯನ’ ಮತ್ತು ‘ಸಂಗೀತಶಾಸ್ತ್ರ’ (ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತದ ತುಲನಾತ್ಮಕ ಅಧ್ಯಯನ) ವಿಷಯಗಳಲ್ಲಿ ಎರಡು ಪಿಎಚ್ಡಿ (ಡಾಕ್ಟರೇಟ್) ಪದವಿಗಳನ್ನು ಪಡೆದಿದ್ದರು.
ಶೈಕ್ಷಣಿಕ ಕ್ಷೇತ್ರದಲ್ಲೂ ಅವರ ಸೇವೆ ವ್ಯಾಪಕವಾಗಿತ್ತು. ಬಾಂಬೆ ವಿಶ್ವವಿದ್ಯಾಲಯದಲ್ಲಿ ಸಂಗೀತ ವಿಭಾಗದಲ್ಲಿ ಬೋಧನೆ ಮಾಡಿದ್ದ ಅವರು, ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದಲ್ಲಿ ಪತ್ರಿಕೋದ್ಯಮ, ಮಹಿಳಾ ಅಧ್ಯಯನ ಮತ್ತು ಅರ್ಥಶಾಸ್ತ್ರ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿದ್ದರು. ಪ್ರತಿಷ್ಠಿತ ‘ಫುಲ್ಬ್ರೈಟ್ ಫೆಲೋಶಿಪ್’ ಅಡಿಯಲ್ಲಿ ಅಮೆರಿಕದಲ್ಲೂ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು.
ಪತ್ರಕರ್ತೆಯಾಗಿಯೂ ಅವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. 2002ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಸುಸ್ಥಿರ ಅಭಿವೃದ್ಧಿ ಕುರಿತ ವಿಶ್ವ ಶೃಂಗಸಭೆಯನ್ನು ವರದಿ ಮಾಡಲು ಆಯ್ಕೆಯಾದ ನಾಲ್ವರು ಭಾರತೀಯ ಪತ್ರಕರ್ತರಲ್ಲಿ ಇವರೂ ಒಬ್ಬರಾಗಿದ್ದರು. ಅಮೆರಿಕ, ಬ್ರಿಟನ್, ನಾರ್ವೆ, ಪಾಕಿಸ್ತಾನ, ಕೀನ್ಯಾ, ಉಗಾಂಡಾ, ಫಿಲಿಪೈನ್ಸ್, ಇಂಡೋನೇಷ್ಯಾ, ಜಪಾನ್, ಥೈಲ್ಯಾಂಡ್ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪಾಲ್ಗೊಂಡು, ಮಾಧ್ಯಮ, ಸಂಗೀತ ಮತ್ತು ಸ್ತ್ರೀವಾದಿ ಅಧ್ಯಯನಗಳ ಕುರಿತು ಮಹತ್ವದ ಪ್ರಬಂಧಗಳನ್ನು ಮಂಡಿಸಿದ್ದರು.
ಶಿಷ್ಯೆ ಅರ್ಚನಾ ಉಡುಪ ಸ್ಮರಣೆ; ಸಕಾಲದ ಗೌರವದ ಬಗ್ಗೆ ಬೇಸರ
ಡಾ. ಶಕುಂತಲಾ ನರಸಿಂಹನ್ ಅವರ ನಿಧನಕ್ಕೆ ಖ್ಯಾತ ಗಾಯಕಿ ಹಾಗೂ ಅವರ ಶಿಷ್ಯೆಯಾದ ಅರ್ಚನಾ ಉಡುಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿ ಭಾವುಕರಾಗಿದ್ದಾರೆ. ತಮ್ಮ ಗುರುಗಳ ಸಂಗೀತ ಪಾಂಡಿತ್ಯವನ್ನು ನೆನಪಿಸಿಕೊಂಡ ಅವರು, ಕರ್ನಾಟಕ ಮತ್ತು ಹಿಂದೂಸ್ತಾನಿ ಎರಡೂ ಪ್ರಕಾರಗಳಲ್ಲಿ ‘ಎ-ಟಾಪ್’ ಶ್ರೇಣಿ ಪಡೆದ ಏಕೈಕ ಕಲಾವಿದೆ ಅವರಾಗಿದ್ದರು ಎಂದು ಸ್ಮರಿಸಿದ್ದಾರೆ.
ನಮ್ಮ ಸಂಗೀತ ಕ್ಷೇತ್ರ ಅವರ ಪ್ರತಿಭೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಗೌರವಿಸಿ ಸಂಭ್ರಮಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿರುವ ಅರ್ಚನಾ ಉಡುಪ, ಅವರಿಗೆ ಸಲ್ಲಬೇಕಾದ ಸೂಕ್ತ ಗೌರವ ಮತ್ತು ಸಂಭಾವನೆ ಸಕಾಲದಲ್ಲಿ ದೊರೆಯಲಿಲ್ಲ ಎಂಬ ಕೊರಗನ್ನು ಹೊರಹಾಕಿದ್ದಾರೆ. ಸುಮಾರು 80ರ ಹರೆಯದ ಸಮೀಪದಲ್ಲಿದ್ದಾಗ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತು. ಇಂತಹ ಶ್ರೇಷ್ಠ ಸಾಧಕರನ್ನು ವಯಸ್ಸಾದ ಮೇಲೆ ಅಥವಾ ತಡವಾಗಿ ಗುರುತಿಸುವ ಬದಲು, ಸರಿಯಾದ ಸಮಯದಲ್ಲೇ ಗುರುತಿಸಿ ಗೌರವಿಸುವ ವ್ಯವಸ್ಥೆ ರೂಪುಗೊಳ್ಳಬೇಕು ಎಂದು ಅವರು ಕಳಕಳಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಿಎಂ ಹೊಸ ನಿವಾಸ ‘ಗಂಗಾ’ ಔತಣಕೂಟದ ವೇಳೆ ವಾಟಾಳ್ ನಾಗರಾಜ್ ಪ್ರತಿಭಟನೆ: ಕರ್ನಾಟಕ ಬಂದ್ ಎಚ್ಚರಿಕೆ
