TOP NEWS

KSRTC: ಸಾರಿಗೆ ನಿಗಮಗಳಿಗೆ ಕೋಟ್ಯಂತರ ರೂ. ನಷ್ಟ: ದರ ಪರಿಷ್ಕರಣೆಗೆ ಸಚಿವ ಬೈರತಿ ಸುರೇಶ್ ಸುಳಿವು

Massive Losses Prompt Karnataka Government to Consider Bus Fare Revision

ಬೆಂಗಳೂರು: ರಾಜ್ಯದ ಸರ್ಕಾರಿ ಬಸ್ ಪ್ರಯಾಣಿಕರ ಜೇಬಿಗೆ ಮತ್ತೆ ಕತ್ತರಿ ಬೀಳುವುದು ಬಹುತೇಕ ಖಚಿತವಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಾದ ಕೆಎಸ್‌ಆರ್‌ಟಿಸಿ (KSRTC), ಬಿಎಂಟಿಸಿ (BMTC), ವಾಯುವ್ಯ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ತೀವ್ರ ಸಂಕಷ್ಟದಲ್ಲಿದ್ದು, ಬಸ್ ಟಿಕೆಟ್ ದರ ಏರಿಕೆ ಮಾಡಲು ರಾಜ್ಯ ಸರ್ಕಾರ ಗಂಭೀರ ಆಲೋಚನೆ ನಡೆಸಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಸುಳಿವು ನೀಡಿದ್ದಾರೆ.

ಅಂತಿಮ ವರದಿ ಸಿದ್ದ ಮಾಡಿದ ವಿಶೇಷ ಸಮಿತಿ

ಸಾರಿಗೆ ನಿಗಮಗಳು ಎದುರಿಸುತ್ತಿರುವ ತೀವ್ರ ಆರ್ಥಿಕ ನಷ್ಟ ಮತ್ತು ದರ ಪರಿಷ್ಕರಣೆಯ ಅಗತ್ಯತೆಯ ಕುರಿತು ಸಮಗ್ರ ಅಧ್ಯಯನ ನಡೆಸಲು ನಿವೃತ್ತ ಐಎಎಸ್ ಅಧಿಕಾರಿ ಅತುಲ್ ತಿವಾರಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿಯು ತನ್ನ ಸುದೀರ್ಘ ಅಧ್ಯಯನದ ವರದಿಯನ್ನು ಸಿದ್ಧಪಡಿಸಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸಲಿದೆ. ವರದಿ ಕೈಸೇರಿದ ತಕ್ಷಣ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ, ಸಚಿವ ಸಂಪುಟ (Cabinet) ಸಭೆಯ ಅನುಮೋದನೆ ಪಡೆದು ಹೊಸ ದರಗಳನ್ನು ಜಾರಿಗೆ ತರಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರ್ಕಾರದ ನಿರ್ಧಾರಗಳಿಂದಾಗಿ ಕಳೆದ ಒಂದು ವರ್ಷದಲ್ಲಿ ನಾಲ್ಕು ಬಾರಿ ಡೀಸೆಲ್ ದರ ಏರಿಕೆಯಾಗಿದ್ದು, ಪ್ರತಿ ಲೀಟರ್‌ಗೆ 15 ರಿಂದ 16 ರೂಪಾಯಿ ಹೆಚ್ಚುವರಿ ಹೊರೆ ಬಿದ್ದಿದೆ. ಜಾಗತಿಕ ಯುದ್ಧ ಮತ್ತು ಅಂತಾರಾಷ್ಟ್ರೀಯ ಬಿಕ್ಕಟ್ಟುಗಳ ಪರಿಣಾಮವಾಗಿ ಕಳೆದ ಏಳು ತಿಂಗಳುಗಳಲ್ಲಿಯೇ ಲೀಟರ್ ಡೀಸೆಲ್ ಬೆಲೆ 8 ರೂಪಾಯಿ ಜಿಗಿದಿದೆ. ಇದರಿಂದಾಗಿ ನಾಲ್ಕೂ ನಿಗಮಗಳಿಗೆ ತಿಂಗಳಿಗೆ 40 ಕೋಟಿ ರೂ. ಹಾಗೂ ವಾರ್ಷಿಕವಾಗಿ ಸುಮಾರು 480 ಕೋಟಿ ರೂಪಾಯಿಗಳ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದ್ದು, ನಿತ್ಯ ಬಸ್‌ಗಳಿಗೆ ಡೀಸೆಲ್ ತುಂಬಿಸಲು ಅಧಿಕಾರಿಗಳು ಹೆಣಗಾಡುವಂತಾಗಿದೆ.

ಸಾರಿಗೆ ಇಲಾಖೆಯ ಅಂಕಿಅಂಶಗಳ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ನಿಗಮಗಳ ಆದಾಯಕ್ಕಿಂತ ವೆಚ್ಚವೇ ಗಣನೀಯವಾಗಿ ಹೆಚ್ಚಾಗಿದ್ದು, ಸಾಲದ ಹೊರೆ ಬೆಳೆಯುತ್ತಿದೆ.

  • 2023-24ನೇ ಸಾಲಿನಲ್ಲಿ: 11,822.35 ಕೋಟಿ ರೂ. ಆದಾಯ ಬಂದಿದ್ದರೆ, ವೆಚ್ಚ 13,177.35 ಕೋಟಿ ರೂ. ತಲುಪಿ 1,354.48 ಕೋಟಿ ರೂ. ನಷ್ಟ ಸಂಭವಿಸಿತ್ತು.
  • 2024-25ನೇ ಸಾಲಿನಲ್ಲಿ: 13,753 ಕೋಟಿ ರೂ. ಆದಾಯ ಮತ್ತು 14,595 ಕೋಟಿ ರೂ. ವೆಚ್ಚದೊಂದಿಗೆ 842 ಕೋಟಿ ರೂ. ನಷ್ಟ ದಾಖಲಾಗಿತ್ತು.
  • 2025-26ನೇ ಸಾಲಿನಲ್ಲಿ: ಆದಾಯ 14,991 ಕೋಟಿ ರೂ. ತಲುಪಿದ್ದರೂ, ವೆಚ್ಚ 16,519 ಕೋಟಿ ರೂ.ಗೆ ಏರಿಕೆಯಾಗಿ ಒಟ್ಟು ನಷ್ಟದ ಪ್ರಮಾಣ ಭಾರಿ ಅಂದರೆ 1,527 ಕೋಟಿ ರೂಪಾಯಿಗಳಿಗೆ ತಲುಪಿದೆ.

ಕಳೆದ ವರ್ಷದ ಜನವರಿಯಲ್ಲಷ್ಟೇ ಎಲ್ಲಾ ನಾಲ್ಕೂ ಸಾರಿಗೆ ನಿಗಮಗಳು ಶೇಕಡಾ 15 ರಷ್ಟು ಟಿಕೆಟ್ ದರ ಏರಿಕೆ ಮಾಡಿದ್ದವು. ಆದಾಗ್ಯೂ ಇಂಧನ ಬೆಲೆ ಏರಿಕೆಯಿಂದಾಗಿ ಆರ್ಥಿಕ ಚೇತರಿಕೆ ಸಾಧ್ಯವಾಗಿಲ್ಲ. ಇದೀಗ ಅತುಲ್ ತಿವಾರಿ ಸಮಿತಿಯ ಶಿಫಾರಸುಗಳಿಗೆ ಸಚಿವ ಸಂಪುಟ ಅಂತಿಮ ಮುದ್ರೆ ಒತ್ತಿದರೆ, ಪ್ರಸಕ್ತ ತಿಂಗಳಲ್ಲೇ ಬಸ್ ಟಿಕೆಟ್ ದರ ಪರಿಷ್ಕರಣೆಯಾಗಿ ದಿನನಿತ್ಯ ಪ್ರಯಾಣಿಸುವ ಸಾಮಾನ್ಯ ಜನರಿಗೆ ನೇರ ದರ ಏರಿಕೆಯ ಬಿಸಿ ತಟ್ಟುವುದು ಖಚಿತವಾಗಿದೆ.

ಇದನ್ನೂ ಓದಿ: ನಮೂನೆ-7 ದುರ್ಬಳಕೆ: ಜೈಲು ಶಿಕ್ಷೆಯ ಎಚ್ಚರಿಕೆ ನೀಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ

Leave a Reply

Your email address will not be published. Required fields are marked *