Arvind Kejriwal: ‘ದಿಮಾಗಿ ನಕ್ಸಲ್’ ಹೇಳಿಕೆಗೆ ಪ್ರಧಾನಿ ಮೋದಿ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

I Am a Dimaagi Naxal Arvind Kejriwal Hits Back at PM Modi independence Day Speech

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಉಲ್ಲೇಖಿಸಿದ್ದ ‘ದಿಮಾಗಿ ನಕ್ಸಲ್’ (ಬುದ್ಧಿಜೀವಿ ನಕ್ಸಲರು) ಎಂಬ ಮಾತು ಇದೀಗ ದೇಶಾದ್ಯಂತ ಭಾರಿ ರಾಜಕೀಯ ಕಾಳಗಕ್ಕೆ ನಾಂದಿ ಹಾಡಿದೆ. ಕೇಂದ್ರ ಸರ್ಕಾರ ಹಾಗೂ ಬಿಜೆಪಿಯನ್ನು ಪ್ರಶ್ನಿಸುವ, ದೇಶದಲ್ಲಿ ಉತ್ತಮ ಸೌಲಭ್ಯಗಳನ್ನು ಬಯಸುವ ಪ್ರತಿಯೊಬ್ಬ ನಾಗರಿಕನನ್ನೂ ಪ್ರಧಾನಿ ‘ದಿಮಾಗಿ ನಕ್ಸಲ್’ ಎಂದು ಕರೆಯುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಅಂಬೇಡ್ಕರ್‌ಗೂ ಮೋದಿ ‘ದಿಮಾಗಿ ನಕ್ಸಲ್’ ಪಟ್ಟ ಕಟ್ಟುತ್ತಿದ್ದರು

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಟ್ವಿಟರ್) ವೀಡಿಯೊ ಸಂದೇಶವೊಂದನ್ನು ಹಂಚಿಕೊಂಡಿರುವ ದೆಹಲಿಯ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್, “ಒಂದು ವೇಳೆ ಭಗತ್ ಸಿಂಗ್ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರು ಇಂದು ಜೀವಂತವಾಗಿದ್ದಿದ್ದರೆ, ಪ್ರಧಾನಿ ಮೋದಿ ಅವರಿಗೂ ‘ದಿಮಾಗಿ ನಕ್ಸಲ್’ ಪಟ್ಟ ಕಟ್ಟುತ್ತಿದ್ದರು. ದೇಶದ ಅಭಿವೃದ್ಧಿಗಾಗಿ ಪ್ರಶ್ನೆ ಕೇಳುವ ಪ್ರತಿಯೊಬ್ಬ ದೇಶಪ್ರೇಮಿಯೂ ಪ್ರಧಾನಿಯವರ ಕಣ್ಣಿಗೆ ನಕ್ಸಲನಂತೆ ಕಾಣಿಸುತ್ತಿದ್ದಾನೆ. ನಾನೂ ಕೂಡ ಒಬ್ಬ ‘ದಿಮಾಗಿ ನಕ್ಸಲ್’, ಹಾಗೆ ಕರೆಸಿಕೊಳ್ಳಲು ನನಗೆ ಹೆಮ್ಮೆ ಇದೆ. ಏಕೆಂದರೆ ನಾನು ನಿಜವಾದ ದೇಶಪ್ರೇಮಿ” ಎಂದು ತಿರುಗೇಟು ನೀಡಿದ್ದಾರೆ.

ಪ್ರಧಾನಿ ಮೋದಿಯವರ ವ್ಯಾಖ್ಯಾನವನ್ನು ಲೇವಡಿ ಮಾಡಿದ ಕೇಜ್ರಿವಾಲ್, “ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಿಸಬೇಕು ಎಂದು ಬಯಸುವವರು, ಉತ್ತಮ ಆಸ್ಪತ್ರೆಗಳು ಮತ್ತು ರಸ್ತೆ ಮೂಲಸೌಕರ್ಯಗಳನ್ನು ಕೇಳುವವರು ಪ್ರಧಾನಿಗಳ ಪ್ರಕಾರ ‘ದಿಮಾಗಿ ನಕ್ಸಲರು’. ಬಿಜೆಪಿಗೆ ಮತ್ತು ಮೋದಿಯವರಿಗೆ ಹೆದರದೆ, ನಿಜವಾದ ‘ವಿಕಸಿತ ಭಾರತ’ ನಿರ್ಮಾಣಕ್ಕೆ ಧ್ವನಿ ಎತ್ತುವವರನ್ನು ಈ ರೀತಿ ಕರೆಯಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿವಾದಕ್ಕೆ ಕಾರಣವಾದ ಪ್ರಧಾನಿ ಮೋದಿ ಹೇಳಿಕೆ:

ಕೆಂಪುಕೋಟೆಯ ಮೇಲೆ 80ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಮಾಡುವ ವೇಳೆ ಪ್ರಧಾನಿ ಮೋದಿ ಅವರು, ದೇಶದ ಬೆಳವಣಿಗೆಗೆ ಅಡ್ಡಿಯಾಗಿರುವ ‘ದಿಮಾಗಿ ನಕ್ಸಲರನ್ನು’ ಗುರುತಿಸಿ ಅವರನ್ನು ಸಮಾಜದಿಂದ ಪ್ರತ್ಯೇಕಿಸಬೇಕು ಎಂದು ಕರೆ ನೀಡಿದ್ದರು. ಆದರೆ ಈ ಪದದ ಕುರಿತು ಅವರು ಹೆಚ್ಚಿನ ವಿವರಣೆ ನೀಡಿರಲಿಲ್ಲ. ಪ್ರಧಾನಿಯವರ ಈ ಹೇಳಿಕೆಯನ್ನು ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿಪಕ್ಷಗಳು ತೀವ್ರವಾಗಿ ಖಂಡಿಸಿದ್ದು, ಕೇಂದ್ರದ ನೀತಿಗಳನ್ನು ವಿರೋಧಿಸುವ ಪ್ರತಿಯೊಬ್ಬರನ್ನೂ ನಕ್ಸಲರೆಂದು ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿವೆ.

ಇನ್ನೊಂದೆಡೆ, ಮಾಜಿ ಕೇಂದ್ರ ಗೃಹ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಕೂಡ ತಾವೂ ಒಬ್ಬ ‘ದಿಮಾಗಿ ನಕ್ಸಲ್’ ಎಂದು ಹೇಳಿಕೊಳ್ಳಲು ಹೆಮ್ಮೆಪಡುವುದಾಗಿ ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ, 2006ರಲ್ಲಿ ಆಗಿನ ಪ್ರಧಾನಿ ಡಾ. ಮನ್ಮೋಹನ್ ಸಿಂಗ್ ಅವರು ‘ನಕ್ಸಲಿಸಂ ದೇಶದ ಆಂತರಿಕ ಭದ್ರತೆಗೆ ಅತಿ ದೊಡ್ಡ ಸವಾಲು’ ಎಂದು ಹೇಳಿದ್ದನ್ನು ನೆನಪಿಸಿದ್ದಾರೆ. “ಕಾಂಗ್ರೆಸ್‌ನಲ್ಲಿ ಮನ್ಮೋಹನ್ ಸಿಂಗ್ ಹೇಳಿದ್ದು ಸರಿಯೇ ಅಥವಾ ಪಿ. ಚಿದಂಬರಂ ಅವರ ಹೇಳಿಕೆ ಸರಿಯೇ?” ಎಂದು ಬಿಜೆಪಿ ಪ್ರಸ್ನಿಸಿದ್ದು, ಎರಡೂ ಪಕ್ಷಗಳ ನಡುವೆ ವಾಕ್ಸಮರ ತೀವ್ರಗೊಂಡಿದೆ.

ಇದನ್ನೂ ಓದಿ: ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್ ಕ್ಷಮೆಯಾಚನೆ

Leave a Reply

Your email address will not be published. Required fields are marked *