TOP NEWS

KEA: UG NEET-26: ವೈದ್ಯಕೀಯ 3ನೇ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶ ಪ್ರಕಟ!

KEA Releases UG NEET 3rd Round Seat Allotment Results Key Guidelines Issued for Candidates

ಬೆಂಗಳೂರು: ರಾಜ್ಯದ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಮಾಹಿತಿಯೊಂದನ್ನು ನೀಡಿದೆ. 2026ನೇ ಸಾಲಿನ ಯುಜಿ ನೀಟ್ (UG NEET) ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಮೂರನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಪ್ರಾಧಿಕಾರವು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಸೀಟು ರದ್ದತಿ ಹಾಗೂ ಕೌನ್ಸೆಲಿಂಗ್‌ನಿಂದ ಹೊರನಡೆಯಲು ಅಭ್ಯರ್ಥಿಗಳಿಗೆ ಮುಖ್ಯ ಸೂಚನೆಗಳನ್ನು ರವಾನಿಸಿದೆ.

ವಿಶೇಷ ವಿನಾಯಿತಿ ನೀಡಿದ ಪ್ರಾಧಿಕಾರ

ಮೆಡಿಕಲ್ ಕೌನ್ಸೆಲಿಂಗ್ ಕಮಿಟಿ (MCC) ಹಾಗೂ KEA ಎರಡೂ ಕಡೆ ಸೀಟು ಪಡೆದುಕೊಂಡು, ಅಂತಿಮವಾಗಿ MCCಯ ಮೂರನೇ ಸುತ್ತಿನ ಸೀಟಿಗೆ ಪ್ರವೇಶ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳಿಗೆ ಪ್ರಾಧಿಕಾರವು ವಿಶೇಷ ವಿನಾಯಿತಿ ನೀಡಿದೆ. ಅಂತಹ ವಿದ್ಯಾರ್ಥಿಗಳು ಅಕ್ಟೋಬರ್ 5 ರಂದು ಮಧ್ಯಾಹ್ನ 12 ಗಂಟೆಯೊಳಗೆ KEA ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಲಿಂಕ್ ಮೂಲಕ ‘ಚಾಯ್ಸ್-4’ (Choice-4) ಆಯ್ಕೆ ಮಾಡುವ ಮೂಲಕ ಯಾವುದೇ ದಂಡವಿಲ್ಲದೆ ಉಚಿತವಾಗಿ ಕೌನ್ಸೆಲಿಂಗ್‌ನಿಂದ ಹೊರನಡೆಯಬಹುದಾಗಿದೆ.

ಇನ್ನು ಈಗಾಗಲೇ ಮೊದಲ ಹಾಗೂ ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳಿಗೆ ಪ್ರವೇಶ ಪಡೆದಿರುವ ಅಭ್ಯರ್ಥಿಗಳಿಗೆ ಎಂಸಿಸಿ 3ನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿದ್ದು, ಅಲ್ಲಿಯೇ ಪ್ರವೇಶ ಪಡೆಯಲು ಬಯಸಿದರೆ ಅಂತಹವರು ಅಕ್ಟೋಬರ್ 5 ರಂದು ಮಧ್ಯಾಹ್ನ 12 ಗಂಟೆಯ ಒಳಗಾಗಿ 10,000 ರೂಪಾಯಿ ದಂಡ ಪಾವತಿಸಿ ತಮ್ಮ KEA ಸೀಟನ್ನು ರದ್ದುಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದೇ ರೀತಿ ಇತರ ರಾಜ್ಯಗಳ 3ನೇ ಸುತ್ತಿನಲ್ಲಿ ಸೀಟು ಪಡೆದವರು ಅಥವಾ ಪ್ರಸ್ತುತ ಸಿಕ್ಕಿರುವ ಸೀಟು ಬೇಡವೆಂದು ಕೌನ್ಸೆಲಿಂಗ್‌ನಿಂದ ಸಂಪೂರ್ಣವಾಗಿ ಹೊರನಡೆಯಲು ಬಯಸುವ ಅಭ್ಯರ್ಥಿಗಳು ಸಹ 10,000 ರೂಪಾಯಿ ದಂಡ ಶುಲ್ಕ ಪಾವತಿಸಿ ಸೀಟು ರದ್ದುಗೊಳಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ಚೆಕ್‌ ಮಾಡುವಂತೆ ಸೂಚನೆ

ಮತ್ತೊಂದೆಡೆ, MCC ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಪ್ರವೇಶ ಪಡೆದಿದ್ದರೂ, ಪ್ರಸ್ತುತ KEA 3ನೇ ಸುತ್ತಿನಲ್ಲಿ ಲಭ್ಯವಾದ ಸೀಟಿನಲ್ಲೇ ಮುಂದುವರಿಯಲು ಇಚ್ಛಿಸುವ ಅಭ್ಯರ್ಥಿಗಳು ಅಕ್ಟೋಬರ್ 5 ರ ಮಧ್ಯಾಹ್ನ 12 ಗಂಟೆಯೊಳಗೆ ವಿಷಯದ ಸಾಲಿನಲ್ಲಿ “Confirmation of My KEA Seat” ಎಂದು ಕಡ್ಡಾಯವಾಗಿ ನಮೂದಿಸಿ ಪ್ರಾಧಿಕಾರದ ಅಧಿಕೃತ ಇ-ಮೇಲ್ (keauthority_ka@nic.in) ವಿಳಾಸಕ್ಕೆ ಸಂದೇಶ ರವಾನಿಸಬೇಕಿದೆ.

ಒಮ್ಮೆ ಸೀಟು ರದ್ದುಪಡಿಸಿಕೊಂಡು ಕೌನ್ಸೆಲಿಂಗ್‌ನಿಂದ ಹೊರನಡೆದ ಅಭ್ಯರ್ಥಿಗಳಿಗೆ ನಂತರದ ಯಾವುದೇ ಸುತ್ತುಗಳಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ. ಹೀಗೆ ಸೀಟು ರದ್ದುಗೊಂಡ ನಂತರ ಖಾಲಿ ಉಳಿಯುವ ಸೀಟುಗಳನ್ನು ಪುನಃ ಇದೇ ಮೂರನೇ ಸುತ್ತಿನ ಸೀಟು ಹಂಚಿಕೆಗೆ ಪರಿಗಣಿಸಿ ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಅಲ್ಲದೆ, ಈ ಸುತ್ತಿನ ನಂತರ ವಿದ್ಯಾರ್ಥಿಗಳಿಗೆ ‘ಚಾಯ್ಸ್-4’ ಆಯ್ಕೆಗೆ ಅವಕಾಶವಿರುವುದಿಲ್ಲವಾದ್ದರಿಂದ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಕೆಇಎ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ಇಸ್ರೋದಿಂದ ಉಚಿತ ಆನ್‌ಲೈನ್ ಕೋರ್ಸ್: AI ಹಾಗೂ ML ತಂತ್ರಜ್ಞಾನ ಕಲಿಕೆಗೆ ಸುವರ್ಣಾವಕಾಶ!

Leave a Reply

Your email address will not be published. Required fields are marked *