ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ನಡೆದ ಪ್ರತ್ಯೇಕ ಅಪರಾಧ ಮತ್ತು ತನಿಖಾ ಪ್ರಕರಣಗಳಲ್ಲಿ(Crime) ಪೋಲೀಸರು ಭರ್ಜರಿ ಯಶಸ್ಸು ಗಳಿಸಿದ್ದು, ಹಲವು ದಿನಗಳಿಂದ ಕುತೂಹಲ ಕೆರಳಿಸಿದ್ದ ಘಟನೆಗಳಿಗೆ ತೆರೆಬಿದ್ದಿದೆ.
ಕೂಡಲಿ ಮಠದ ಬಂಗಾರದ ಪಾದುಕೆ ಕಳವಾಗಿಲ್ಲ, ಎಸ್‌ಬಿಐ ಲಾಕರ್‌ನಲ್ಲಿ ಸುರಕ್ಷಿತ: ಶಿವಮೊಗ್ಗ ಜಿಲ್ಲೆಯ ಜಗತ್ಪ್ರಸಿದ್ಧ ಕೂಡಲಿ ಮಠದ ಸುಮಾರು 400 ಗ್ರಾಂ ತೂಕದ ಚಿನ್ನದ ಪಾದುಕೆಗಳು ಕಳ್ಳತನವಾಗಿವೆ ಎಂದು ದಾಖಲಾಗಿದ್ದ ಸಾಯಂಕಾಲದ ದೂರಿಗೆ ಕೊನೆಗೂ ಅನಿರೀಕ್ಷಿತ ತಿರುವು ಸಿಕ್ಕಿದೆ. ಮಾಜಿ ಪೀಠಾಧಿಪತಿ ವಿದ್ಯಾರಣ್ಯಭಾರತಿ ಸ್ವಾಮೀಜಿ ಅವರು ಪೀಠತ್ಯಾಗ ಮಾಡಿದ ಬಳಿಕ ಈ ಬಂಗಾರದ ಪಾದುಕೆಗಳು ಕಾಣೆಯಾಗಿವೆ ಎಂದು ದೂರು ದಾಖಲಾಗಿತ್ತು. ಕಳೆದ ಎರಡು ವರ್ಷಗಳಿಂದ ಮಠದ ಭಕ್ತರಲ್ಲಿ ಭಾರಿ ಗೊಂದಲ ಮೂಡಿಸಿದ್ದ ಈ ಪ್ರಕರಣವನ್ನು ಹೊಳೆಹೊನ್ನೂರು ಠಾಣೆಯ ಪೊಲೀಸರು ಅತ್ಯಂತ ತೀವ್ರವಾಗಿ ತನಿಖೆ ನಡೆಸಿದ್ದರು. ಸುದೀರ್ಘ ತನಿಖೆಯ ಅಂತ್ಯದಲ್ಲಿ ಶ್ರೀಗಳ ಬಂಗಾರದ ಪಾದುಕೆಗಳು ಯಾವುದೇ ರೀತಿಯಲ್ಲೂ ಕಳವಾಗಿಲ್ಲ; ಬದಲಿಗೆ ಶಿವಮೊಗ್ಗ ನಗರದ ಬಿ.ಹೆಚ್. ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಾಖೆಯ ಬ್ಯಾಂಕ್ ಲಾಕರ್‌ನಲ್ಲಿ ಅತ್ಯಂತ ಸುರಕ್ಷಿತವಾಗಿವೆ ಎಂಬ ಸತ್ಯವನ್ನು ಪೊಲೀಸರು ಹೊರಗೆಳೆದಿದ್ದಾರೆ. ಈ ಸಂಬಂಧ ತನಿಖಾ ವರದಿಯನ್ನು ಪೊಲೀಸರು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಸತ್ಯಾಸತ್ಯತೆ ಹೊರಬಿದ್ದ ತಕ್ಷಣ ಮಠದ ಲಕ್ಷಾಂತರ ಭಕ್ತಾದಿಗಳು ನಿರಾಳರಾಗಿದ್ದಾರೆ.
ಜ್ಯೂವೆಲ್ಲರಿ ಕೆಲಸಗಾರನ ಕೈಚಳಕ ಬಯಲು: 1.06 ಕೋಟಿ ರೂ. ಮೌಲ್ಯದ ಚಿನ್ನ ಜಪ್ತಿ: ಇತ್ತ ರಾಜಧಾನಿ ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿನ್ನ ತಯಾರಿಕಾ ಸಂಸ್ಥೆ ಹಾಗೂ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಿಂದ ಒಟ್ಟು 1.06 ಕೋಟಿ ರೂಪಾಯಿ ಮೌಲ್ಯದ 702 ಗ್ರಾಂ ತೂಕದ ಬಂಗಾರ ಹಾಗೂ ಚಿನ್ನದ ಗಟ್ಟಿಗಳನ್ನು ಸೀಜ್ ಮಾಡಲಾಗಿದೆ. ಜ್ಯೂವೆಲ್ಲರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನೂರ್ ಇಸ್ಲಾಂ ಮಲ್ಲಿಕ್ ಎಂಬಾತನೇ ಈ ಕಳ್ಳತನದ ಮುಖ್ಯ ರೂವಾರಿಯಾಗಿದ್ದಾನೆ. ಅಂಗಡಿ ಮಾಲೀಕ ಗುರುಪ್ರಸಾದ್ ಅವರು ಚಿನ್ನದ ಆಭರಣಗಳನ್ನು ತಯಾರಿಸಲು ನೀಡುತ್ತಿದ್ದ ಬಂಗಾರದ ಗಟ್ಟಿಯಿಂದ ಸಣ್ಣ ಪ್ರಮಾಣದ ಚಿನ್ನವನ್ನು ನಿರಂತರವಾಗಿ ಕದ್ದು, ತಾನೇ ಪ್ರತ್ಯೇಕವಾಗಿ ಆಭರಣ ಮಾಡಿ ಮನೆಯಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದನು. ಇತ್ತೀಚೆಗೆ ಮಾಲೀಕರು ನೀಡಿದ್ದ ಚಿನ್ನದ ಗಟ್ಟಿಯ ನಂತರ ಈತ ಕೆಲಸಕ್ಕೆ ಬರದೇ ನಾಪತ್ತೆಯಾಗಿದ್ದಾಗ ಅನುಮಾನಗೊಂಡ ಮಾಲೀಕರು ತಪಾಸಣೆ ನಡೆಸಿದಾಗ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಸುಬ್ರಹ್ಮಣ್ಯನಗರ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿ, ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ತಿಮ್ಮಪ್ಪನಸ್ವಾಮಿ ದೇವಸ್ಥಾನದಲ್ಲಿ ಕಳವು ಮಾಡಿದ್ದ ಖದೀಮರ ಬಂಧನ: ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಪ್ರಸಿದ್ಧ ಬೇವೂರು ಬೆಟ್ಟದ ತಿಮ್ಮಪ್ಪನಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ ನಡೆಸಿದ್ದ ಇಬ್ಬರು ಖದೀಮರನ್ನು ಎಂ.ಕೆ. ದೊಡ್ಡಿ ಠಾಣೆಯ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಜಾಫರ್ ಸಾದಿಕ್ ಹಾಗೂ ಸೈಯದ್ ಸಲೀಂ ಬಂಧಿತ ಆರೋಪಿಗಳು. ಇತ್ತೀಚೆಗೆ ದೇವಸ್ಥಾನದ ಮುಖ್ಯ ಬಾಗಿಲು ಒಡೆದು ಒಳನುಗ್ಗಿದ್ದ ಈ ಆರೋಪಿಗಳು, ದೇವಸ್ಥಾನದಲ್ಲಿದ್ದ ಧಾರ್ಮಿಕ ಬೆಳ್ಳಿಯ ಆಭರಣಗಳು ಹಾಗೂ ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದರು. ದೂರು ದಾಖಲಿಸಿಕೊಂಡ ಎಂ.ಕೆ. ದೊಡ್ಡಿ ಪೊಲೀಸರು ನಡೆಸಿದ ಸತತ ಕಾರ್ಯಚರಣೆಯ ಫಲವಾಗಿ ಆರೋಪಿಗಳನ್ನು ಸೆರೆಹಿಡಿದಿದ್ದು, ಅವರಿಂದ ಕಳವು ಮಾಡಲಾಗಿದ್ದ ಬೆಳ್ಳಿಯ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ: 16 ಲಕ್ಷ ಫಾಲೋವರ್ಸ್ ಹೊಂದಿದ್ದ ಖ್ಯಾತ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ನಿಧಿ ತಿವಾರಿ ಆತ್ಮ*ಹತ್ಯೆ!
