ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ವೇಳೆ ‘ಹಿಂದಿನ ಬಿಜೆಪಿ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ’ ಎಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ (High Court) ಪೂರ್ಣಗೊಳಿಸಿದ್ದು, ಆದೇಶವನ್ನು ಕಾಯ್ದಿರಿಸಿದೆ.
ಅಸಮಾಧಾನ ವ್ಯಕ್ತಪಡಿಸಿದ ಪೀಠ
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ರಾಜಕೀಯ ಪಕ್ಷಗಳ ನಡುವಿನ ಆರೋಪ-ಪ್ರತ್ಯಾರೋಪ ಹಾಗೂ ಕಾದಾಟದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠವು, “ರಾಜಕೀಯ ನಾಯಕರು ಹಾಗೂ ಪಕ್ಷಗಳು ಇಂತಹ ವಿಚಾರಗಳನ್ನು ಬದಿಗೊತ್ತಿ ನೀತಿ-ನಿರೂಪಣೆ ಮತ್ತು ಜನಸೇವೆಯಲ್ಲಿ ನಿರತರಾಗಿದ್ದರೆ ದೇಶಕ್ಕೆ ಒಳಿತಾಗುತ್ತಿತ್ತು. ಅದನ್ನು ಬಿಟ್ಟು ಪ್ರತಿಯೊಬ್ಬರೂ ಪರಸ್ಪರ ಕೆಸರೆರಚಾಟ ನಡೆಸುವ ಆಟದಲ್ಲೇ ಮುಳುಗಿದ್ದಾರೆ” ಎಂದು ಮಾರ್ಮಿಕವಾಗಿ ಅಸಮಾಧಾನ ಹೊರಹಾಕಿತು.
ವಿಚಾರಣೆ ವೇಳೆ ಬಿಜೆಪಿ ಪರವಾಗಿ ವಾದ ಮಂಡಿಸಿದ ವಕೀಲ ವಿನೋದ್ ಕುಮಾರ್, ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿದ ಈ ಸುಳ್ಳು ಮತ್ತು ಆಧಾರರಹಿತ ಜಾಹೀರಾತುಗಳಿಂದಾಗಿ ಬಿಜೆಪಿಗೆ ಅಪಾರ ಪ್ರಮಾಣದ ರಾಜಕೀಯ ನಷ್ಟವಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. “ಕಾಂಗ್ರೆಸ್ ನೀಡಿದ ಈ ಅಪಪ್ರಚಾರದ ಜಾಹೀರಾತಿನಿಂದಾಗಿ ನಮ್ಮ ಪಕ್ಷಕ್ಕೆ ಕನಿಷ್ಠ 40 ಕ್ಷೇತ್ರಗಳಲ್ಲಿ ಸೋಲಾಗಿದೆ ಮತ್ತು ಶೇಕಡಾ 10ರಷ್ಟು ಮತಗಳು ಕೈತಪ್ಪಿಹೋಗಿವೆ. ಈ ಜಾಹೀರಾತುಗಳು ಜನರ ಮನಸ್ಸಿನ ಮೇಲೆ ತೀವ್ರ ಪ್ರಭಾವ ಬೀರಿದ್ದರಿಂದ ಅವರು ಕಾಂಗ್ರೆಸ್ಗೆ ಮತ ನೀಡುವಂತಾಯಿತು. ಯಾರೋ ಎಲ್ಲೋ ನೀಡಿದ ಹೇಳಿಕೆಗಳನ್ನು ಆಧಾರವಾಗಿಟ್ಟುಕೊಂಡು ಈ ರೀತಿ ಬಾಲಿಶವಾಗಿ ಜಾಹೀರಾತು ಪ್ರಕಟಿಸಿರುವುದು ತಪ್ಪು. ಆದ್ದರಿಂದ ಈ ಪ್ರಕರಣದ ಕುರಿತು ಸಮಗ್ರ ವಿಚಾರಣೆ ನಡೆಯಲೇಬೇಕು” ಎಂದು ವಾದಿಸಿದರು.
ಅಂತಿಮ ಆದೇಶವನ್ನು ಕಾಯ್ದಿರಿಸಿದ ಕೋರ್ಟ್
ಇನ್ನೊಂದೆಡೆ ಕಾಂಗ್ರೆಸ್ ಮುಖಂಡರ ಹಾಗೂ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕೆ. ಶಶಿಕಿರಣ್ ಶೆಟ್ಟಿ ಅವರು, ಬಿಜೆಪಿಯ ವಾದವನ್ನು ಪ್ರಬಲವಾಗಿ ವಿರೋಧಿಸಿದರು. “ಪ್ರಕರಣ ದಾಖಲಿಸಲು ರಾಷ್ಟ್ರೀಯ ಪಕ್ಷವಾದ ಬಿಜೆಪಿಯು ಅಧಿಕೃತವಾಗಿ ಯಾವುದೇ ಅನುಮತಿ ಅಥವಾ ಸಮ್ಮತಿಯನ್ನು ನೀಡಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಈ ದೂರು ಕ್ರಮಬದ್ಧವಾಗಿಲ್ಲ” ಎಂದು ವಾದಿಸಿ, ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿದರು.
ಎರಡೂ ಕಡೆಯ ವಕೀಲರ ಸುದೀರ್ಘ ಹಾಗೂ ತೀವ್ರ ಸ್ವರೂಪದ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ವಿಚಾರಣೆಯನ್ನು ಮುಕ್ತಾಯಗೊಳಿಸಿ, ಪ್ರಕರಣಕ್ಕೆ ಸಂಬಂಧಿಸಿದ ತನ್ನ ಅಂತಿಮ ಆದೇಶವನ್ನು ಕಾಯ್ದಿರಿಸಿದೆ
ಇದನ್ನೂ ಓದಿ: ಆಗಸ್ಟ್ 26ರಿಂದ ಗಜಪಯಣ ಆರಂಭ, ಜಂಬೂಸವಾರಿಯ ಅಂಬಾರಿ ಆನೆ ‘ಅಭಿಮನ್ಯು’ಗೆ ನಿವೃತ್ತಿ!
