ನವದೆಹಲಿ: 1984ರ ಭೀಕರ ಸಿಖ್ ವಿರೋಧಿ ದಂಗೆ ಪ್ರಕರಣದ ಪ್ರಮುಖ ಅಪರಾಧಿ ಹಾಗೂ ಕಾಂಗ್ರೇಸ್ ಮಾಜಿ ಸಂಸದ ಸಜ್ಜನ್ ಕುಮಾರ್ (80) ಗುರುವಾರ (Breaking News) ನಿಧನರಾಗಿದ್ದಾರೆ. ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಅವರಿಗೆ ದಿಢೀರ್ ಆರೋಗ್ಯ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸಿಖ್ ವಿರೋಧಿ ಹಿಂಸಾಚಾರದಲ್ಲಿ ಸಜ್ಜನ್ ಕುಮಾರ್ ಪ್ರಮುಖ ಸೂತ್ರಧಾರಿ
1984ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ನಂತರ ದೇಶಾದ್ಯಂತ ಭುಗಿಲೆದ್ದ ಸಿಖ್ ವಿರೋಧಿ ಹಿಂಸಾಚಾರದಲ್ಲಿ ಸಜ್ಜನ್ ಕುಮಾರ್ ಪ್ರಮುಖ ಸೂತ್ರಧಾರಿಯಾಗಿದ್ದರು. ಈ ದಂಗೆಗೆ ಸಂಬಂಧಿಸಿದಂತೆ ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು. ಪ್ರಕರಣವೊಂದರಲ್ಲಿ ಅವರಿಗೆ 2026ರ ಆರಂಭದಲ್ಲಿ ಖುಲಾಸೆ ಸಿಕ್ಕಿತ್ತಾದರೂ, ಇನ್ನುಳಿದ ಎರಡು ಪ್ರತ್ಯೇಕ ಕೊಲೆ ಮತ್ತು ಗಲಭೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರಿಂದ ಅವರು ಜೈಲಿನಲ್ಲೇ ದಿನ ದೂಡಬೇಕಾಯಿತು.
ಡಿಸೆಂಬರ್ 2018ರಲ್ಲಿ ದೆಹಲಿ ಹೈಕೋರ್ಟ್ ಪಾಲಂ ಕಾಲೋನಿಯ ರಾಜ್ ನಗರದಲ್ಲಿ ಐವರು ಸಿಖ್ಖರ ಹತ್ಯೆ ಮತ್ತು ಗುರುದ್ವಾರಕ್ಕೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಸಜ್ಜನ್ ಕುಮಾರ್ಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿತ್ತು. ಆ ವೇಳೆ ಹೈಕೋರ್ಟ್ ಈ ಹಿಂಸಾಚಾರವನ್ನು “ಮಾನವಕುಲದ ವಿರುದ್ಧ ಎಸಗಿದ ಮಹಾಪರಾಧ” ಎಂದು ಬಣ್ಣಿಸಿತ್ತು. ತದನಂತರ, ಫೆಬ್ರವರಿ 2025ರಲ್ಲಿ ಸರಸ್ವತಿ ವಿಹಾರ್ ಪ್ರಕರಣದಲ್ಲಿ ತಂದೆ-ಮಗನನ್ನು ಜೀವಂತವಾಗಿ ಸುಟ್ಟುಹಾಕಿದ ದಂಗೆಕೋರರ ಗುಂಪನ್ನು ಪ್ರಚೋದಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ರೋಸ್ ಅವೆನ್ಯೂ ನ್ಯಾಯಾಲಯವು ಅವರಿಗೆ ಮತ್ತೊಂದು ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಮರಣದಂಡನೆಗೆ ಆಗ್ರಹಿಸಿತ್ತಾದರೂ, ಸಜ್ಜನ್ ಕುಮಾರ್ ಅವರ ವೃದ್ಧಾಪ್ಯ ಮತ್ತು ಅನಾರೋಗ್ಯವನ್ನು ಪರಿಗಣಿಸಿ ಕೋರ್ಟ್ ಜೀವಾವಧಿ ಶಿಕ್ಷೆಗೆ ಸೀಮಿತಗೊಳಿಸಿತ್ತು.
ಸಾಯುವವರೆಗೂ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಸಜ್ಜನ್
ಇತ್ತೀಚೆಗೆ ಅಂದರೆ 2026ರ ಜನವರಿ 22 ರಂದು ಜನಕಪುರಿ ಮತ್ತು ವಿಕಾಸಪುರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ ರೋಸ್ ಅವೆನ್ಯೂ ನ್ಯಾಯಾಲಯ ಸಜ್ಜನ್ ಕುಮಾರ್ ಅವರನ್ನು ಖುಲಾಸೆಗೊಳಿಸಿತ್ತು. ಆದಾಗ್ಯೂ, ಇತರೆ ಎರಡು ಗಂಭೀರ ಪ್ರಕರಣಗಳಲ್ಲಿ ಸಾಯುವವರೆಗೂ ಜೀವಾವಧಿ ಶಿಕ್ಷೆ ಜಾರಿಯಲ್ಲಿದ್ದ ಕಾರಣ ಅವರು ಜೈಲಿನಲ್ಲೇ ಉಳಿಯಬೇಕಾಯಿತು. ಪ್ರಸ್ತುತ ಅವರ ಸಾವಿನೊಂದಿಗೆ ಸಿಖ್ ದಂಗೆಯ ಕಪ್ಪು ಇತಿಹಾಸದ ಪ್ರಮುಖ ಅಧ್ಯಾಯವೊಂದು ಅಂತ್ಯಗೊಂಡಂತಾಗಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದಬ್ಬಾಳಿಕೆ ತನಿಖೆಗೆ ಉನ್ನತ ಮಟ್ಟದ ಸಮಿತಿ: ಸುಪ್ರೀಂ ಕೋರ್ಟ್ ಮಹತ್ವದ ನಿರ್ಧಾರ
