ನವದೆಹಲಿ: ದೆಹಲಿಯಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ್ದಾರೆನ್ನಲಾದ ಅತಿರೇಕ ಮತ್ತು ದೌರ್ಜನ್ಯದ ಆರೋಪಗಳ ತನಿಖೆಗೆ ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ಮಹತ್ವದ ಆದೇಶ ನೀಡಿದೆ. ನಿವೃತ್ತ ನ್ಯಾಯಮೂರ್ತಿಗಳು, ಮಾಜಿ ಮಹಾನಿರ್ದೇಶಕರು (DGP) ಹಾಗೂ ಸಿಬಿಐ ಮಾಜಿ ನಿರ್ದೇಶಕರನ್ನೊಳಗೊಂಡ ಉನ್ನತ ಮಟ್ಟದ ಸ್ವತಂತ್ರ ತನಿಖಾ ಸಮಿತಿಯನ್ನು ರಚಿಸುವುದಾಗಿ ನ್ಯಾಯಾಲಯ ಘೋಷಿಸಿದೆ.
ಬುಧವಾರ ಅಧಿಕೃತ ಆದೇಶ ಹೊರಡಿಸಲಿದೆ ಪೀಠ
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ಪೀಠವು ಈ ಕುರಿತು ವಿಚಾರಣೆ ನಡೆಸಿತು. ಸಮಿತಿಗೆ ಸೇರ್ಪಡೆಗೊಳಿಸಬೇಕಾದ ಇತರ ಸದಸ್ಯರ ಕುರಿತು ವಿವಿಧ ಕಡೆಯಿಂದ ಸಲಹೆಗಳನ್ನು ಪಡೆದ ನಂತರ ಬುಧವಾರ ಅಧಿಕೃತ ಆದೇಶ ಹೊರಡಿಸುವುದಾಗಿ ಪೀಠ ತಿಳಿಸಿದೆ. ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಸತ್ ಚಲೋ ಪ್ರತಿಭಟನೆ ವೇಳೆ ಸಂಭವಿಸಿದ ಹಿಂಸಾಚಾರದ ಸಂಪೂರ್ಣ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ವಿಡಿಯೋ ರೆಕಾರ್ಡಿಂಗ್ಗಳನ್ನು ಪರಿಶೀಲನೆಗಾಗಿ ಈ ಉನ್ನತ ಸಮಿತಿಗೆ ಹಸ್ತಾಂತರಿಸಲು ಕೋರ್ಟ್ ನಿರ್ದೇಶಿಸಿದೆ. ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾಗ ಪೊಲೀಸರಿಂದ ಅನುಚಿತ ವರ್ತನೆಗೆ ಒಳಗಾದ ವಿದ್ಯಾರ್ಥಿನಿಯರ ದೂರುಗಳನ್ನು ಸಹ ಈ ಸಮಿತಿ ತನಿಖೆ ನಡೆಸಲಿದೆ.
ಇದೇ ವೇಳೆ, ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಎಫ್ಐಆರ್ಗಳನ್ನು ವಜಾಗೊಳಿಸುವ ಸುಳಿವು ನೀಡಿರುವ ಸುಪ್ರೀಂ ಕೋರ್ಟ್, ಸೋಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಪ್ರಕರಣಗಳ ವಿವರಗಳನ್ನು ಸಲ್ಲಿಸುವಂತೆ ಸೂಚಿಸಿದೆ. ಸಂವಿಧಾನದ ವಿಧಿ 142 ರ ಅಡಿಯಲ್ಲಿ ತನ್ನ ವಿಶೇಷ ಅಧಿಕಾರವನ್ನು ಬಳಸಿ ಪ್ರಕರಣಗಳನ್ನು ರದ್ದುಗೊಳಿಸುವ ಸಾಧ್ಯತೆಯನ್ನು ಪೀಠ ವ್ಯಕ್ತಪಡಿಸಿದೆ. ವಿದ್ಯಾರ್ಥಿಗಳು ಕ್ಷಮೆಯಾಚಿಸದೆ ಪ್ರಕರಣಗಳನ್ನು ವಜಾಗೊಳಿಸಬಾರದು ಎಂದು ಪ್ರತಿಪಾದಿಸಿದ ವಕೀಲರಿಗೆ ತರಾಟೆ ತೆಗೆದುಕೊಂಡ ಪೀಠ, “ಇಲ್ಲಿ ಪ್ರಶ್ನೆ ಇರುವುದು ವಿದ್ಯಾರ್ಥಿಗಳ ಭವಿಷ್ಯದ ಕುರಿತು. ಅವರಿಗೆ ಉತ್ತಮ ಭವಿಷ್ಯವಿದೆ. ಸಂವಿಧಾನದ ವಿಧಿ 19 ರ ಅಡಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕು ಅವರಿಗೆ ಕಲ್ಪಿಸಲಾಗಿದೆ” ಎಂದು ಖಡಕ್ ಆಗಿ ತಿಳಿಸಿತು.
ಏನಿದು ಪ್ರಕರಣ?
ಜುಲೈ 20 ರ ಪ್ರತಿಭಟನೆಯಲ್ಲಿ ಹಿಂಸಾಚಾರಕ್ಕೆ ಕಾರಣರಾದವರಲ್ಲಿ ಹಿಂದೆ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 2,800ಕ್ಕೂ ಹೆಚ್ಚು “ಸಮಾಜಘಾತುಕ ಶಕ್ತಿಗಳನ್ನು” ಪೊಲೀಸರು ಗುರುತಿಸಿದ್ದಾರೆ ಎಂದು ಸಾಲಿಸಿಟರ್ ಜನರಲ್ ಮೆಹ್ತಾ ತಿಳಿಸಿದರು. ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ಲಾಠಿಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗ ಮಾಡಿದ್ದರು. ಆದರೆ, ಯಾವುದೇ ಗಂಭೀರ ಅಪರಾಧ ಹಿನ್ನೆಲೆಯಿಲ್ಲದ ವಿದ್ಯಾರ್ಥಿಗಳ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಬದ್ಧವಾಗಿದೆ ಎಂದು ದೃಢಪಡಿಸಲಾಗಿದೆ.
ಇದನ್ನೂ ಓದಿ: ಚಾಮರಾಜನಗರ ಗುಂಡಿನ ದಾಳಿ ಪ್ರಕರಣ: ತಮಿಳುನಾಡು ವಿಧಾನಸಭೆಯಲ್ಲಿ ಭಾರಿ ಗದ್ದಲ
