ಬೆಂಗಳೂರು: “ಬಿಡದಿ ಟೌನ್‌ಶಿಪ್ ಹಾಗೂ ನೈಸ್ ಯೋಜನೆಗಳ ನೈಜ ಪಿತಾಮಹರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮತ್ತು ನಾನು ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ನೇರ ಸವಾಲು ಹಾಕುತ್ತಿದ್ದೇನೆ. ಧೈರ್ಯವಿದ್ದರೆ ಫ್ರೀಡಂ ಪಾರ್ಕ್‌ನಲ್ಲೇ ಒಂದು ಬಹಿರಂಗ ಚರ್ಚಾ ವೇದಿಕೆ ಸಿದ್ಧಪಡಿಸಿ, ನಿಮ್ಮ ಹಾಲಿ-ಮಾಜಿ ಶಾಸಕರೆಲ್ಲರೂ ಒಟ್ಟಾಗಿ ಬನ್ನಿ. ನಿಮ್ಮೆಲ್ಲರ ಆರೋಪಗಳನ್ನು ನಾನು ಏಕಾಂಗಿಯಾಗಿಯೇ ಎದುರಿಸಲು ಸಿದ್ಧನಿದ್ದೇನೆ” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಪ್ರಬಲ ಸವಾಲೆಸೆದಿದ್ದಾರೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಕಡು ವಾಗ್ದಾಳಿ
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಜೆಡಿಎಸ್ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಡು ವಾಗ್ದಾಳಿ ನಡೆಸಿದರು. “ನೈಸ್ ಯೋಜನೆಯ ಅಕ್ರಮಗಳ ಕುರಿತು ನನ್ನ ಬಳಿ ಸಕಲ ದಾಖಲೆಗಳಿವೆ. ಈ ಹಿಂದೆ ಎನ್.ವೈ. ಹನುಮಂತಪ್ಪ ಹಾಗೂ ಜಯಚಂದ್ರ ಸಮಿತಿ ನೀಡಿದ ವರದಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪಾತ್ರವೇನು ಎಂಬುದನ್ನು ಜಯಚಂದ್ರ ಅವರೇ ಬಹಿರಂಗಪಡಿಸಲಿ. ಸರ್ಕಾರ ಈ ವಿಚಾರದಲ್ಲಿ ಮೌನ ವಹಿಸಿರುವುದು ಏಕೆ?” ಎಂದು ಕಿಡಿಕಾರಿದರು.
ಯೋಜನೆಯ ಇತಿಹಾಸವನ್ನು ಸ್ಮರಿಸಿದ ಅವರು, “1995ರಲ್ಲಿ ಅಮೆರಿಕದ ಗವರ್ನರ್ ಉಪಸ್ಥಿತಿಯಲ್ಲಿ ಒಪ್ಪಂದ (MoU) ಸಹಿ ಮಾಡಿದ್ದು ನಿಜ. ಆದರೆ, ಸರ್ಕಾರದಿಂದ ಯಾವುದೇ ಬಂಡವಾಳ ಹೂಡದೆ ಸಂಪೂರ್ಣ ವೆಚ್ಚವನ್ನು ಕಂಪನಿಯೇ ಭರಿಸಬೇಕು ಎಂಬ ಕಟ್ಟುನಿಟ್ಟಿನ ಷರತ್ತು ವಿಧಿಸಲಾಗಿತ್ತು. ಆದರೆ ದೇವೇಗೌಡರು ಪ್ರಧಾನಿಯಾದ ನಂತರ ಅಧಿಕಾರಕ್ಕೆ ಬಂದವರು ಈ ಯೋಜನೆಯ ದಿಕ್ಕನ್ನೇ ತಪ್ಪಿಸಿದರು. ಮೂಲ ಅಮೆರಿಕನ್ ಕಂಪನಿಯನ್ನು ಬದಿಗೆ ಸರಿಸಿ ಮಧ್ಯವರ್ತಿಗಳಿಗೆ ಮಣೆ ಹಾಕಿದ ಮಹಾನುಭಾವರು ಯಾರು ಶಿವಕುಮಾರ್ ಅವರೇ?” ಎಂದು ನೇರವಾಗಿ ಪ್ರಶ್ನಿಸಿದರು.
1.75 ಲಕ್ಷ ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ಹವಣಿಕೆ
ಫ್ರೇಮ್‌ವರ್ಕ್ ಅಗ್ರಿಮೆಂಟ್ ಪ್ರಕಾರ 20 ಸಾವಿರ ಎಕರೆ ಪ್ರದೇಶದಲ್ಲಿ ಐದು ಟೌನ್‌ಶಿಪ್‌ಗಳನ್ನು ನಿರ್ಮಿಸಲು ಯೋಜಿಸಲಾಗಿತ್ತು. ಆದರೆ ಕೋರ್ಟ್ ತೀರ್ಪುಗಳನ್ನು ತಮಗೆ ಬೇಕಾದಂತೆ ತಿರುಚಿಕೊಂಡು, ಬಡ ರೈತರ ಸುಮಾರು 1.75 ಲಕ್ಷ ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ಹವಣಿಸಿದವರು ಯಾರು ಎಂಬುದನ್ನು ಕಾಂಗ್ರೆಸ್ ನಾಯಕರು ಸ್ವತಃ ತಮ್ಮ ಎದೆಮುಟ್ಟಿ ಉತ್ತರಿಸಲಿ ಎಂದು ಆಕ್ರೋಶ ಹೊರಹಾಕಿದರು. ಇಂದು ಸ್ವಲ್ಪ ಮಳೆಯಾದರೂ ಬೆಂಗಳೂರು ಜಲಾವೃತಗೊಳ್ಳಲು ಈ ಅಂದಾಜು ರಹಿತ ನಗರಾಭಿವೃದ್ಧಿ ಯೋಜನೆಗಳೇ ಮೂಲ ಕಾರಣ ಎಂದು ಜಹೀರುಗೊಳಿಸಿದರು.
ತಮ್ಮ ಆಡಳಿತಾವಧಿಯ ಬಗ್ಗೆ ಮಾತನಾಡುತ್ತಾ, “ನನಗೆ ಎಂದಿಗೂ ಪೂರ್ಣ ಪ್ರಮಾಣದ ಸ್ವತಂತ್ರ ಅಧಿಕಾರ ಸಿಗಲಿಲ್ಲ. ರಾಮನಗರವನ್ನು ‘ಬೆಂಗಳೂರು ದಕ್ಷಿಣ’ ಎಂದು ಮರುನಾಮಕರಣ ಮಾಡಿ ಭೂಮಿಯ ಬೆಲೆ ಹೆಚ್ಚಾಗುತ್ತದೆ ಎಂದು ಡಿಕೆ ಶಿವಕುಮಾರ್ ಜನರಲ್ಲಿ ಭ್ರಮೆ ಹುಟ್ಟಿಸುತ್ತಿದ್ದಾರೆ. ಕುಮಾರಕೃಪಾದಂತಹ ಪಾರಂಪರಿಕ ಕಟ್ಟಡ ಧ್ವಂಸಗೊಳಿಸಿ, ವಿಧಾನಸೌಧದ ಮೆಟ್ಟಿಲಿಗೆ ನಮಸ್ಕರಿಸಿ ಫೋಟೊಗೆ ಪೋಸ್ ಕೊಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ವಿಧಾನಸೌಧಕ್ಕೆ ಸಾವಿರಾರು ಜನರನ್ನು ನುಗ್ಗಿಸುವ ಸಾಮರ್ಥ್ಯ ನನಗೂ ಇದೆ, ಆದರೆ ಜೆಡಿಎಸ್ ಎಂದಿಗೂ ಕಾನೂನನ್ನು ಕೈಗೆತ್ತಿಕೊಂಡಿಲ್ಲ. ನಿಮ್ಮ ಭ್ರಷ್ಟಾಚಾರದ ಮಾಹಿತಿಗಳು ನಿಮ್ಮ ಸುತ್ತಮುತ್ತಲಿರುವ ಜನರಿಂದಲೇ ನನಗೆ ತಲುಪುತ್ತಿವೆ” ಎಂದು ಹೆಚ್‌ಡಿಕೆ ಬಾಂಬ್ ಸಿಡಿಸಿದರು.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ಜ್ವರ, ಲೋ ಬಿಪಿಯಿಂದ ಬಳಲುತ್ತಿರುವ ಪವಿತ್ರಾಗೌಡ
