ನವದೆಹಲಿ: ಕೇಂದ್ರ ಸರ್ಕಾರವು ಪ್ರತಿಭಟನಾನಿರತ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿದ್ದ ವಿವಿಧ ಪ್ರಕರಣಗಳನ್ನು ವಾಪಸ್ ಪಡೆಯಲು ಹಾಗೂ ಎಫ್ಐಆರ್ ರದ್ದುಗೊಳಿಸಲು ಸಮ್ಮತಿಸಿರುವ ಹಿನ್ನೆಲೆಯಲ್ಲಿ, ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸೆಪ್ಟೆಂಬರ್ 5ರಂದು ನಡೆಸಲು ಉದ್ದೇಶಿಸಿದ್ದ ಬೃಹತ್ ಮೆರವಣಿಗೆಯನ್ನು ರದ್ದುಗೊಳಿಸಿದೆ. ಇಂಡಿಯಾ ಗೇಟ್ನಿಂದ ದೆಹಲಿ ಪೊಲೀಸ್ ಪ್ರಧಾನ ಕಚೇರಿಯವರೆಗೆ ಆಯೋಜಿಸಲಾಗಿದ್ದ ಈ ಪಾದಯಾತ್ರೆಯನ್ನು ಹಿಂಪಡೆಯಲಾಗಿದ್ದು, ಸರ್ಕಾರದ ಈ ಧನಾತ್ಮಕ ನಿಲುವನ್ನು ಹಾಗೂ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಗೌರವಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಜೆಪಿ ಸಹ-ಸಂಚಾಲಕ ಸೌರವ್ ದಾಸ್ ಸ್ಪಷ್ಟಪಡಿಸಿದ್ದಾರೆ.
ಮುಕ್ತವಾಗಿ ಚರ್ಚಿಸಿ ಬಗೆಹರಿಸಿಕೊಳ್ಳಬಹುದು
ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಅವರು ಎರಡೂ ಕಡೆಗಳ ಈ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಪರಸ್ಪರ ನಂಬಿಕೆ ಮತ್ತು ವಿಶ್ವಾಸವಿದ್ದರೆ ಪ್ರಪಂಚದ ಯಾವುದೇ ಕ್ಲಿಷ್ಟಕರ ಸಮಸ್ಯೆಯನ್ನಾದರೂ ಮುಕ್ತವಾಗಿ ಚರ್ಚಿಸಿ ಬಗೆಹರಿಸಿಕೊಳ್ಳಬಹುದು” ಎಂದು ಪೀಠವು ಅಭಿಪ್ರಾಯಪಟ್ಟಿದೆ. ಇನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಪೀಠಕ್ಕೆ ಮಾಹಿತಿ ನೀಡಿ, ಬಿಹಾರ, ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ವಿದ್ಯಾರ್ಥಿ ಪ್ರತಿಭಟನೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಎಫ್ಐಆರ್ಗಳನ್ನು ರದ್ದುಗೊಳಿಸಲು ಅರ್ಜಿ ಸಲ್ಲಿಸಲಾಗಿದೆ ಎಂದಿದ್ದಾರೆ. ಅಲ್ಲದೆ, ಜುಲೈ 20ರಿಂದ 25ರವರೆಗೆ ನಡೆದ ಚಳವಳಿಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಯಾವುದೇ ಹೊಸ ಎಫ್ಐಆರ್ ದಾಖಲಿಸುವುದಿಲ್ಲ ಎಂದು ಕೋರ್ಟ್ಗೆ ಭರವಸೆ ನೀಡಿದ್ದಾರೆ.
ಇದರ ಜೊತೆಗೆ, ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆಯಿಂದ ಕಂಗೆಟ್ಟು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಕುಟುಂಬಸ್ಥರಿಗೆ ಪರಿಹಾರ ನೀಡುವ ಸಂಬಂಧ ಮುಂಬರುವ ಮೂರು ತಿಂಗಳ ಒಳಗಾಗಿ ಸ್ಪಷ್ಟ ನೀತಿಯೊಂದನ್ನು ರೂಪಿಸಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಹಿಂದೆ ಜುಲೈ 25ರಂದು ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ ಎಂದು ಆರೋಪಿಸಿ ಅಭಿಜೀತ್ ದೀಪ್ಕೆ ನೇತೃತ್ವದ ಸಿಜೆಪಿ ಈ ಮೆರವಣಿಗೆಗೆ ಕರೆ ನೀಡಿತ್ತು. ಮೃತ ವಿದ್ಯಾರ್ಥಿಗಳ ಕುಟುಂಬಸ್ಥರೇ ಈ ಪಾದಯಾತ್ರೆಯ ಮುಂಚೂಣಿಯಲ್ಲಿರಲಿದ್ದರು. ಆದರೆ ಇದೀಗ ಸರ್ಕಾರ ಕೋರ್ಟ್ ಮುಖೇನ ಸ್ಪಂದಿಸಿರುವುದರಿಂದ ಪ್ರತಿಭಟನೆ ಹಿಂಪಡೆಯಲಾಗಿದೆ.
ಸಿಜೆಪಿ ನಾಯಕರ ರಾಜಕೀಯ ಮಹತ್ವಾಕಾಂಕ್ಷೆ ಕುರಿತು ಸೋನಮ್ ವಾಂಗ್ಚುಕ್ ಮಾತು:
ಇನ್ನೊಂದೆಡೆ, ಖ್ಯಾತ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಸಿಜೆಪಿ ನಾಯಕ ಅಭಿಜೀತ್ ದೀಪ್ಕೆ ಹಾಗೂ ಯುವ ನಾಯಕರ ರಾಜಕೀಯ ನಡೆಗಳ ಕುರಿತು ಮಾತನಾಡಿದ್ದಾರೆ. ಯುವಜನರು ಹಿಂದೆ ಯಾವುದೋ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡಿದ್ದರೆ ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿರುವ ಅವರು, ಈ ಯುವ ನಾಯಕರಲ್ಲಿ ರಾಜಕೀಯ ಮಹತ್ವಾಕಾಂಕ್ಷೆ ಇರುವುದು ಸಹಜ ಮತ್ತು ಅದು ಇರಲೇಬೇಕು ಎಂದಿದ್ದಾರೆ. “ಅವರೇನು ಯಾವುದೇ ಬಯಕೆಗಳಿಲ್ಲದ ಸನ್ಯಾಸಿಗಳಲ್ಲ, ಸಮಾಜ ಬದಲಾವಣೆಗೆ ಹೊರಟಿರುವ ಯುವಕರಾಗಿದ್ದು, ರಾಜಕೀಯವಾಗಿ ಬೆಳೆಯುವ ಆಸೆ ಹೊಂದುವುದರಲ್ಲಿ ಯಾವುದೇ ತಪ್ಪಿಲ್ಲ” ಎಂದು ವಾಂಗ್ಚುಕ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಎಸ್ಸಿಒ ಶೃಂಗಸಭೆಯಲ್ಲಿ ಮೋದಿ ಹವಾ: ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮಹತ್ವದ ಸಭೆ!
