ಗದಗ: ಮಣ್ಣು ತುಂಬಿಕೊಂಡು ವೇಗವಾಗಿ ಬಂದ ಟಿಪ್ಪರ್ ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಇಟಗಿ (Road Mishap) ಕ್ರಾಸ್ ಸಮೀಪ ಮಂಗಳವಾರ ನಡೆದಿದೆ.
ಏನಿದು ಪ್ರಕರಣ?
ರೋಣ ತಾಲೂಕಿನ ಹೊಸಳ್ಳಿ ಗ್ರಾಮದ ನಿವಾಸಿಗಳಾದ ಶರಣಪ್ಪ ಜಾಲಿಹಾಳ (65) ಹಾಗೂ ಸುರೇಶ ತಳವಾರ (59) ಮೃತಪಟ್ಟ ದುರ್ದೈವಿಗಳು. ಇಬ್ಬರೂ ಇಟಗಿಯಿಂದ ತಮ್ಮ ಸ್ವಗ್ರಾಮ ಹೊಸಳ್ಳಿಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.
ರೋಣ ಭಾಗದಿಂದ ಗಜೇಂದ್ರಗಡದ ಕಡೆಗೆ ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಚಾಲಕ ಅತಿ ವೇಗ ಮತ್ತು ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ಬೈಕ್ಗೆ ಬಲವಾಗಿ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಟಿಪ್ಪರ್ ಲಾರಿ ಕೂಡ ರಸ್ತೆಬದಿಗೆ ಪಲ್ಟಿಯಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ಘಟನಾವಳಿ ತಿಳಿದ ತಕ್ಷಣವೇ ರೋಣ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಟಿಪ್ಪರ್ ಚಾಲಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬೆಂಗಳೂರು ಏರ್ಪೋರ್ಟ್ ಫ್ಲೈಓವರ್ನಲ್ಲಿ ಸರಣಿ ಅಪಘಾತ: 6 ವಾಹನಗಳು ಜಖಂ,
ಬೆಂಗಳೂರು: ರಾಜಧಾನಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಮೇಲ್ಸೇತುವೆಯಲ್ಲಿ ತಡರಾತ್ರಿ ಭೀಕರ ಸರಣಿ ಅಪಘಾತ ಸಂಭವಿಸಿದೆ. ಚಾಲಕನೊಬ್ಬ ದಿಢೀರನೆ ಬ್ರೇಕ್ ಹಾಕಿದ ಪರಿಣಾಮ ಸಾಲು ಸಾಲಾಗಿ ಬರುತ್ತಿದ್ದ ವಾಹನಗಳು ಒಂದಕ್ಕೊಂದು ಬಲವಾಗಿ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ವಾಹನಗಳು ಜಖಂಗೊಂಡಿವೆ. ಆದರೆ ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಾಪಾಯ ಅಥವಾ ಗಂಭೀರ ಗಾಯಗಳು ಸಂಭವಿಸದೆ ಭಾರಿ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.
ಫ್ಲೈಓವರ್ ಮೇಲೆ ಮುಂದೆ ಸಾಗುತ್ತಿದ್ದ ವಾಹನವೊಂದು ಏಕಾಏಕಿ ಬ್ರೇಕ್ ಹಾಕಿದ್ದೇ ಈ ಅನಾಹುತಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ವೇಗವಾಗಿ ಹಿಂದೆ ಬರುತ್ತಿದ್ದ ವಾಹನಗಳ ಚಾಲಕರಿಗೆ ನಿಯಂತ್ರಣ ಸಿಗದೆ ಸಾಲಾಗಿ ಡಿಕ್ಕಿಯಾಗಿವೆ. ಅಪಘಾತದ ತೀವ್ರತೆಗೆ ಒಂದು ಟಿಪ್ಪರ್ ಲಾರಿ, ನಾಲ್ಕು ಕಾರುಗಳು ಹಾಗೂ ಒಂದು ಟಿಟಿ (ಟೆಂಪೋ ಟ್ರಾವೆಲರ್) ಸೇರಿದಂತೆ ಒಟ್ಟು ಆರು ವಾಹನಗಳು ಗಂಭೀರವಾಗಿ ಹಾನಿಗೊಳಗಾಗಿವೆ. ಮಧ್ಯರಾತ್ರಿ ವೇಳೆ ಸಂಭವಿಸಿದ ಈ ಘಟನೆಯಿಂದಾಗಿ ಏರ್ಪೋರ್ಟ್ ರಸ್ತೆಯ ಫ್ಲೈಓವರ್ನಲ್ಲಿ ಕೆಲಕಾಲ ಭಾರಿ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು.
ಅಪಘಾತದ ಸುದ್ದಿ ತಿಳಿದ ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದ ಚಿಕ್ಕಜಾಲ ಹಾಗೂ ಯಲಹಂಕ ಸಂಚಾರ ವಿಭಾಗದ ಪೊಲೀಸರು ರಸ್ತೆಗೆ ಅಡ್ಡಲಾಗಿ ನಿಂತಿದ್ದ ಅಪಘಾತಕ್ಕೀಡಾದ ವಾಹನಗಳನ್ನು ಕ್ರೇನ್ ನೆರವಿನಿಂದ ತೆರವುಗೊಳಿಸಿದರು. ತಕ್ಷಣವೇ ಕಾರ್ಯಾಚರಣೆ ನಡೆಸಿದ ಪೊಲೀಸರು ವಾಹನ ಸಂಚಾರವನ್ನು ಸುಗಮಗೊಳಿಸಿದರು. ಸರಣಿ ಅಪಘಾತ ಸಂಭವಿಸಿದರೂ ಯಾವುದೇ ಪ್ರಾಣಹಾನಿ ಸಂಭವಿಸದಿರುವುದು ಪ್ರಯಾಣಿಕರು ಹಾಗೂ ಪೊಲೀಸರು ನಿಟ್ಟುಸಿರು ಬಿಡುವಂತೆ ಮಾಡಿದೆ. ಈ ಸಂಬಂಧ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ: ಪುಸ್ತಕ ತಂದಿಲ್ಲವೆಂದು ಕ್ರೂರ ಶಿಕ್ಷೆ: ದೆಹಲಿಯಲ್ಲಿ ಸುಡುವ ಬಿಸಿಲಿಗೆ ನಿಂತು 10 ವರ್ಷದ ಬಾಲಕಿ ಸಾ*ವು!
