ನವದೆಹಲಿ: ನೀಟ್ ಹಾಗೂ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸಿದ್ದ ಬೃಹತ್ ಪ್ರತಿಭಟನೆಗಳ ವೇಳೆ ಯುವಜನತೆ ಮತ್ತು ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿದ್ದ ನೂರಾರು ಎಫ್ಐಆರ್ಗಳನ್ನು (FIR) ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ಸಂಪೂರ್ಣವಾಗಿ ರದ್ದುಗೊಳಿಸಿದೆ. ದೆಹಲಿ ಸೇರಿದಂತೆ ಬಿಹಾರ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಗಳಿಗೆ ಇದರಿಂದ ಮುಕ್ತಿ ಸಿಕ್ಕಂತಾಗಿದೆ.
142ನೇ ವಿಧಿಯನ್ವಯ ಎಫ್ಐಆರ್ ರದ್ದು
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್, ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ತ್ರಿಪೀಠವು ಈ ಮಹತ್ವದ ತೀರ್ಪು ನೀಡಿದೆ. ಕೇಂದ್ರ ಸರ್ಕಾರ ಹಾಗೂ ಸಂಬಂಧಪಟ್ಟ ವಿವಿಧ ರಾಜ್ಯ ಸರ್ಕಾರಗಳು ಈ ಪ್ರಕರಣಗಳನ್ನು ಕೈಬಿಡುವಂತೆ ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿದ ನ್ಯಾಯಪೀಠವು, ಭಾರತೀಯ ಸಂವಿಧಾನದ 142ನೇ ವಿಧಿಯನ್ವಯ ತಮಗಿರುವ ವಿಶೇಷ ಪರಮಾಧಿಕಾರವನ್ನು ಬಳಸಿಕೊಂಡು ಈ ಎಲ್ಲಾ ಎಫ್ಐಆರ್ಗಳನ್ನು ರದ್ದುಗೊಳಿಸಿ ಆದೇಶಿಸಿದೆ.
ಯುವ ಸಮುದಾಯದ ಭವಿಷ್ಯ ಹಾಳಾಗಬಾರದು
“ಹೋರಾಟದಲ್ಲಿ ಪಾಲ್ಗೊಂಡಿದ್ದ ಯುವ ಸಮುದಾಯದ ಭವಿಷ್ಯ ಹಾಳಾಗಬಾರದು ಹಾಗೂ ಅವರಿಗೆ ಪರಿಪೂರ್ಣ ನ್ಯಾಯ ಒದಗಿಸಬೇಕು ಎಂಬ ಉದ್ದೇಶದಿಂದ ನಾವು ಸಂವಿಧಾನದ 142ನೇ ವಿಧಿಯಡಿ ಈ ಕ್ರಮ ಕೈಗೊಳ್ಳುತ್ತಿದ್ದೇವೆ” ಎಂದು ಉನ್ನತ ನ್ಯಾಯಾಲಯ ಸ್ಪಷ್ಟಪಡಿಸಿದೆ. ಇದರೊಂದಿಗೆ, ಈ ಐದು ರಾಜ್ಯಗಳು ಮಾತ್ರವಲ್ಲದೆ ದೇಶದ ಯಾವುದೇ ಭಾಗದಲ್ಲೂ ಈ ಚಳವಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್ಐಆರ್ಗಳ ತನಿಖೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಮತ್ತು ಆ ಪ್ರಕರಣಗಳನ್ನು ಪೂರ್ಣವಾಗಿ ಮುಕ್ತಾಯಗೊಳಿಸಲಾಗಿದೆ ಎಂದು ಪರಿಗಣಿಸಬೇಕು ಎಂದು ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಜೊತೆಗೆ ಜುಲೈ 20ರಿಂದ 25ರ ನಡುವೆ ನಡೆದ ಧರಣಿ, ಪ್ರತಿಭಟನೆಗಳಿಗೆ ಸಂಬಂಧಿಸಿ ಇನ್ಮುಂದೆ ಯಾವುದೇ ಹೊಸ ದೂರು ಅಥವಾ ಎಫ್ಐಆರ್ ದಾಖಲಿಸುವಂತಿಲ್ಲ ಎಂದೂ ಆದೇಶಿಸಿದೆ.
ಇನ್ನೊಂದೆಡೆ, ಪ್ರತಿಭಟನೆಯ ವೇಳೆ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದ ಅಥವಾ ಗಂಭೀರ ಅಪರಾಧ ಹಿನ್ನೆಲೆ ಹೊಂದಿರುವ ದೆಹಲಿಯ 2,873 ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಮುಂದುವರಿಯಲಿದೆ ಎಂದು ಕೇಂದ್ರ ಸರ್ಕಾರ ಕೋರ್ಟ್ಗೆ ಸ್ಪಷ್ಟಪಡಿಸಿದೆ. ಇಂತಹ ವ್ಯಕ್ತಿಗಳ ವಿರುದ್ಧ ಕೇವಲ ದೈಹಿಕ ಹಲ್ಲೆ ಅಥವಾ ಸಾರ್ವಜನಿಕ ಆಸ್ತಿಗೆ ಹಾನಿ ಉಂಟುಮಾಡಿದ ಆರೋಪಕ್ಕೆ ಸೀಮಿತವಾಗಿ ಒಂದೇ ಹೊಸ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಪ್ರತಿಭಟನಾಕಾರರ ಮೇಲಿನ ಪ್ರಕರಣ ರದ್ದುಗೊಳಿಸಲು ಕೇಂದ್ರ ಸಮ್ಮತಿ: ಸೆ.5ರ ‘ದೆಹಲಿ ಚಲೋ’ ಹಿಂಪಡೆದ ಸಿಜೆಪಿ!
ನವದೆಹಲಿ:
ವಿದ್ಯಾರ್ಥಿ ಹೋರಾಟಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ವಿವಿಧ ಕ್ರಿಮಿನಲ್ ದೂರು ಹಾಗೂ ಎಫ್ಐಆರ್ಗಳನ್ನು ವಾಪಸ್ ಪಡೆಯಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿರುವ ಬೆನ್ನಲ್ಲೇ, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಪ್ರತಿಭಟನಾ ನಿರ್ಧಾರದಿಂದ ಹಿಂದೆ ಸರಿದಿದೆ. ಸೆಪ್ಟೆಂಬರ್ 5ರಂದು ದೆಹಲಿಯ ಇಂಡಿಯಾ ಗೇಟ್ನಿಂದ ಪೊಲೀಸ್ ಪ್ರಧಾನ ಕಚೇರಿಯವರೆಗೆ ಆಯೋಜಿಸಲಾಗಿದ್ದ ಬೃಹತ್ ಪಾದಯಾತ್ರೆಯನ್ನು ರದ್ದುಗೊಳಿಸಲಾಗಿದೆ ಎಂದು ಸಿಜೆಪಿ ಸಹ-ಸಂಚಾಲಕ ಸೌರವ್ ದಾಸ್ ತಿಳಿಸಿದ್ದಾರೆ. ಸರ್ಕಾರದ ಈ ಧನಾತ್ಮಕ ಸ್ಪಂದನೆ ಹಾಗೂ ಸುಪ್ರೀಂ ಕೋರ್ಟ್ ನೀಡಿದ ಮಾರ್ಗದರ್ಶನಕ್ಕೆ ಗೌರವ ನೀಡಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ ಸಿಜೆಐ ಸೂರ್ಯ ಕಾಂತ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು, ಎರಡೂ ಪಾಳಯಗಳು ತೋರಿಸಿದ ಸಹಕಾರ ಮನೋಭಾವವನ್ನು ಶ್ಲಾಘಿಸಿದೆ. ಪರಸ್ಪರ ನಂಬಿಕೆ ಮತ್ತು ಸೌಹಾರ್ದತೆ ಇದ್ದರೆ ಎಂತಹ ಜಟಿಲ ಸಮಸ್ಯೆಯನ್ನಾದರೂ ಸಂವಾದದ ಮೂಲಕವೇ ಬಗೆಹರಿಸಿಕೊಳ್ಳಬಹುದು ಎಂದು ಕೋರ್ಟ್ ಹೇಳಿದೆ. ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮಾತನಾಡಿ, ಬಿಹಾರ, ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿದ್ದ ಎಫ್ಐಆರ್ಗಳನ್ನು ವಜಾಗೊಳಿಸಲು ಅರ್ಜಿ ಸಲ್ಲಿಸಲಾಗಿದೆ. ಅಲ್ಲದೆ ಜುಲೈ 20ರಿಂದ 25ರ ನಡುವೆ ನಡೆದ ಚಳವಳಿಗೆ ಸಂಬಂಧಿಸಿದಂತೆ ಇನ್ಮುಂದೆ ಹೊಸ ಪ್ರಕರಣಗಳನ್ನು ದಾಖಲಿಸುವುದಿಲ್ಲ ಎಂದು ಭರವಸೆ ಇತ್ತಿದ್ದಾರೆ.
ಇದರ ಜೊತೆಗೆ, ನೀಟ್ ಅಕ್ರಮದಿಂದಾಗಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬಸ್ಥರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮುಂದಿನ ಮೂರು ತಿಂಗಳೊಳಗೆ ಸ್ಪಷ್ಟ ನೀತಿಯೊಂದನ್ನು ರೂಪಿಸುವುದಾಗಿ ಕೇಂದ್ರ ಸರ್ಕಾರ ಉನ್ನತ ನ್ಯಾಯಾಲಯಕ್ಕೆ ತಿಳಿಸಿದೆ. ಹಿಂದೆ ನೀಡಿದ್ದ ಭರವಸೆಗಳು ಈಡೇರಿಲ್ಲ ಎಂದು ಆರೋಪಿಸಿ ಅಭಿಜೀತ್ ದೀಪ್ಕೆ ನೇತೃತ್ವದ ಸಿಜೆಪಿ ಈ ಮೆರವಣಿಗೆಗೆ ಕರೆ ನೀಡಿತ್ತು. ಮೃತರ ಕುಟುಂಬಸ್ಥರೇ ಈ ಪಾದಯಾತ್ರೆಯ ಮುಂಚೂಣಿಯಲ್ಲಿರಬೇಕಿತ್ತು, ಆದರೆ ಈಗ ಸರ್ಕಾರ ಕಾನೂನಾತ್ಮಕವಾಗಿ ಧನಾತ್ಮಕವಾಗಿ ಸ್ಪಂದಿಸಿರುವುದರಿಂದ ಪ್ರತಿಭಟನೆಯನ್ನು ಕೈಬಿಡಲಾಗಿದೆ.
ಸಿಜೆಪಿ ಯುವ ನಾಯಕರ ರಾಜಕೀಯ ಆಸೆಗೆ ವಾಂಗ್ಚುಕ್ ಬೆಂಬಲ:
ಇನ್ನೊಂದೆಡೆ, ಖ್ಯಾತ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ಯೂಟ್ಯೂಬ್ ಸಂದರ್ಶನವೊಂದರಲ್ಲಿ ಸಿಜೆಪಿ ಮುಖಂಡ ಅಭಿಜೀತ್ ದೀಪ್ಕೆ ಹಾಗೂ ಯುವ ನಾಯಕರ ರಾಜಕೀಯ ನಡೆಗಳನ್ನು ಬೆಂಬಲಿಸಿದ್ದಾರೆ. ಯುವಜನರು ಹಿಂದೆ ಯಾವುದೋ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡಿದ್ದರೆ ಅದನ್ನು ತಪ್ಪಾಗಿ ನೋಡುವ ಅಗತ್ಯವಿಲ್ಲ ಎಂದಿರುವ ಅವರು, ಸಮಾಜ ಬದಲಾವಣೆಗೆ ಹೊರಟಿರುವ ಯುವಕರಲ್ಲಿ ರಾಜಕೀಯ ಮಹತ್ವಾಕಾಂಕ್ಷೆ ಇರುವುದು ತೀರಾ ಸಹಜ ಮತ್ತು ಸಮಂಜಸ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ದೆಹಲಿ ಚಲೋ ದಿಢೀರ್ ರದ್ದು: ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ಗೆ ಕೇಂದ್ರ ಒಪ್ಪಿಗೆ, ಸಿಜೆಪಿ ನಿರ್ಧಾರ!
