TOP NEWS

Actor Ravichandran: ಶಾಂತಿ ಕ್ರಾಂತಿ’ ರೀ-ರಿಲೀಸ್‌ಗೆ ಅಭಿಮಾನಿಗಳ ಭಾರಿ ಡಿಮ್ಯಾಂಡ್: ಸಮಸ್ಯೆ ತೆರೆದಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್!

Huge Demand to Re Release Shanti Kranti Actor Ravichandran Honestly Reveals the Big Hurdles Ahead

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಹಳೆಯ ಕ್ಲಾಸಿಕ್ ಸಿನಿಮಾಗಳು ಮರು ಬಿಡುಗಡೆಯಾಗಿ ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ಪಡೆಯುತ್ತಿವೆ. ಇದೇ ಹಾದಿಯಲ್ಲಿ ಕನಸುಗಾರ ರವಿಚಂದ್ರನ್ ನಿರ್ದೇಶಿಸಿ, ಅಭಿನಯಿಸಿದ್ದ ಭಾರತದ ಮೊದಲ ‘ಪ್ಯಾನ್ ಇಂಡಿಯಾ’ ಹೆಗ್ಗಳಿಕೆಯ ‘ಶಾಂತಿ ಕ್ರಾಂತಿ’ ಸಿನಿಮಾವನ್ನು ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬೇಕು ಎನ್ನುವ ಬೇಡಿಕೆ ಅಭಿಮಾನಿಗಳಿಂದ ತೀವ್ರವಾಗಿ ಕೇಳಿಬರುತ್ತಿದೆ. ಅಂದು ಬಾಕ್ಸ್ ಆಫೀಸ್‌ನಲ್ಲಿ ಸೋತಿದ್ದ ಈ ಸಾಹಸಮಯ ಸಿನಿಮಾವನ್ನು ಇಂದು ಪ್ರೇಕ್ಷಕರು ಕೊಂಡಾಡುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಮರು ಬಿಡುಗಡೆಗಾಗಿ ದೊಡ್ಡ ಅಭಿಯಾನವೇ ನಡೆಯುತ್ತಿದೆ. ಆದರೆ, ಈ ಸಿನಿಮಾ ಮರು ಬಿಡುಗಡೆ ಮಾಡಲು ಇರುವ ತಾಂತ್ರಿಕ ಹಾಗೂ ಆರ್ಥಿಕ ಸವಾಲುಗಳ ಕುರಿತು ನಟ ರವಿಚಂದ್ರನ್ (Actor Ravichandran) ಮುಕ್ತವಾಗಿ ಮಾತನಾಡಿದ್ದಾರೆ.

ಕನಿಷ್ಠ 2 ರಿಂದ 3 ಕೋಟಿ ರೂಪಾಯಿ ಬಂಡವಾಳ ಬೇಕು

ಖಾಸಗಿ ಕಾರ್ಯಕ್ರಮವೊಂದರಲ್ಲಿ ಈ ಕುರಿತು ಮಾತನಾಡಿದ ರವಿಚಂದ್ರನ್, “ಸಿನಿಮಾ ಮರು ಬಿಡುಗಡೆ ಮಾಡುವುದು ನನ್ನ ಕೈಯಲ್ಲಿಲ್ಲ, ಅದು ಸಂಪೂರ್ಣವಾಗಿ ನನ್ನ ಸಹೋದರ ಬಾಲಾಜಿ ನಿರ್ಧಾರಕ್ಕೆ ಸೇರಿದ್ದು, ಏಕೆಂದರೆ ಅವರೇ ಈ ಚಿತ್ರದ ಮಾಲೀಕರು. ಇದರ ಜೊತೆಗೆ ತಾಂತ್ರಿಕವಾಗಿ ದೊಡ್ಡ ಸಮಸ್ಯೆಯೊಂದಿದೆ. ಪ್ರಸಾದ್ ಲ್ಯಾಬ್‌ನಲ್ಲಿದ್ದ ಈ ಸಿನಿಮಾದ ಮೂಲ ನೆಗೆಟಿವ್‌ಗಳು 25 ವರ್ಷಗಳಿಗಿಂತಲೂ ಹಳೆಯದಾದ ಕಾರಣ ಕರಗಿ ಹಾಳಾಗಿವೆ” ಎಂದು ತಿಳಿಸಿದ್ದಾರೆ. ಈಗ ಬೇರೆ ಎಲ್ಲಾದರೂ ಲಭ್ಯವಿರುವ ನೆಗೆಟಿವ್‌ಗಳನ್ನು ಹುಡುಕಿ, ಆಧುನಿಕ ತಂತ್ರಜ್ಞಾನ ಬಳಸಿ ಅದನ್ನು ಮರುಸೃಷ್ಟಿಸಬೇಕಿದೆ. ಅಲ್ಲದೆ, ರೀ-ಮಾಸ್ಟರಿಂಗ್ ಮಾಡಲು, ಹೊಸ ಆರ್ಕೆಸ್ಟ್ರಾ ಮೂಲಕ ಹಿನ್ನೆಲೆ ಸಂಗೀತ ಮತ್ತು ಧ್ವನಿ ಮುದ್ರಣವನ್ನು ನವೀಕರಿಸಲು ಕನಿಷ್ಠ 2 ರಿಂದ 3 ಕೋಟಿ ರೂಪಾಯಿ ಹೆಚ್ಚುವರಿ ಬಂಡವಾಳ ಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಒಂದು ವರ್ಷದ ಸುದೀರ್ಘ ಸಮಯ ಹಿಡಿಯತ್ತೆ ಎಂದ ಬಾಲಾಜಿ

ರವಿಚಂದ್ರನ್ ಅವರ ಸಹೋದರ ಬಾಲಾಜಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಅಭಿಮಾನಿಗಳ ಬೇಡಿಕೆಗೆ ಸ್ಪಂದಿಸಿ ರೀ-ರಿಲೀಸ್‌ ಕೆಲಸಗಳನ್ನು ಈಗಾಗಲೇ ಆರಂಭಿಸಿದ್ದೇವೆ. ಆದರೆ ಇಂದಿನ ಪ್ರೇಕ್ಷಕರಿಗೆ ತಕ್ಕಂತೆ ಅತ್ಯುನ್ನತ 4K ಗುಣಮಟ್ಟದಲ್ಲಿ ಸಿನಿಮಾ ತರಬೇಕಾದರೆ ಕನಿಷ್ಠ ಒಂದು ವರ್ಷದ ಸುದೀರ್ಘ ಸಮಯ ಹಿಡಿಯುತ್ತದೆ” ಎಂದಿದ್ದಾರೆ.

1991ರಲ್ಲಿ ತೆರೆಕಂಡಿದ್ದ ‘ಶಾಂತಿ ಕ್ರಾಂತಿ’ ಚಿತ್ರವನ್ನು ರವಿಚಂದ್ರನ್ ಅವರು ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಪ್ರತ್ಯೇಕವಾಗಿ ಶೂಟಿಂಗ್ ಮಾಡಿ ನಿರ್ಮಿಸಿದ್ದರು. ಆ ಕಾಲಕ್ಕೇ ಬರೋಬ್ಬರಿ 18 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಈ ಚಿತ್ರದ ಒಂದು ದಿನದ ಶೂಟಿಂಗ್ ವೆಚ್ಚವೇ 6 ಲಕ್ಷ ರೂಪಾಯಿ ಆಗುತ್ತಿತ್ತು. ಪ್ರತಿಯೊಂದು ಶೂಟಿಂಗ್ ದಿನದಲ್ಲೂ ಸುಮಾರು 5,000 ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿತ್ತು. ಅಂದಿನ ಕಾಲಘಟ್ಟಕ್ಕೆ ತಾಂತ್ರಿಕವಾಗಿ ಹಾಗೂ ಆರ್ಥಿಕವಾಗಿ ಹೊಸ ದಾಖಲೆ ಬರೆದಿದ್ದ ಈ ಸಿನಿಮಾ ಅಂದು ಚಿತ್ರಮಂದಿರಗಳಲ್ಲಿ ಹಿನ್ನಡೆ ಅನುಭವಿಸಿದರೂ, ಇಂದು ಭಾರತೀಯ ಚಿತ್ರರಂಗದ ಅದ್ಭುತ ಪ್ರಯೋಗವಾಗಿ ನೆನಪಿನಲ್ಲಿ ಉಳಿದಿದೆ.

ಇದನ್ನೂ ಓದಿ: ನೀವು ಊಹಿಸದ ಬಿರುಗಾಳಿ ಬರಲಿದೆ!: ‘ಮೈಸಾ’ ಪೋಸ್ಟರ್ ಶೇರ್ ಮಾಡಿ ಮಾಸ್ ಅಪ್‌ಡೇಟ್ ಕೊಟ್ಟ ರಶ್ಮಿಕಾ!

Leave a Reply

Your email address will not be published. Required fields are marked *