TOP NEWS

Bollywood: ಮದುವೆಯಾದ 5 ತಿಂಗಳಿಗೇ ಶಾಕ್ ಕೊಟ್ಟ ಕಪಲ್!: ಡಿವೋರ್ಸ್ ವದಂತಿಗೆ ಅಧಿಕೃತ ಮುದ್ರೆ ಒತ್ತಿದ ಬಾದ್‌ಶಾ-ಈಶಾ ರಿಖಿ

Bollywood Trouble in Paradise Singer Badshah and Isha Rikhi Call It Quits 5 Months After Wedding

ಮುಂಬೈ: ಪ್ರಸಿದ್ಧ ರಾಪರ್ ಹಾಗೂ ಗಾಯಕ ಬಾದ್‌ಶಾ ಮತ್ತು ಪಂಜಾಬಿ ನಟಿ ಈಶಾ ರಿಖಿ ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ಇವರ ವಿಚ್ಛೇದನದ ವದಂತಿಗಳಿಗೆ ಸ್ವತಃ ದಂಪತಿಯೇ ತೆರೆ ಎಳೆದಿದ್ದು, ಮದುವೆಯಾದ ಕೇವಲ 5 ತಿಂಗಳಲ್ಲೇ ಪರಸ್ಪರ (Bollywood) ಸಮ್ಮತಿಯಿಂದ ಬೇರೆಯಾಗುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಆಗಸ್ಟ್ 31ರಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಜಂಟಿ ಹೇಳಿಕೆ ಹಂಚಿಕೊಳ್ಳುವ ಮೂಲಕ ಈ ಇಬ್ಬರೂ ತಾವೀಗ ಪ್ರತ್ಯೇಕ ಹಾದಿ ತುಳಿದಿರುವುದನ್ನು ಬಹಿರಂಗಪಡಿಸಿದ್ದಾರೆ.

ಪರಸ್ಪರ ಗೌರವದಿಂದಲೇ ಬೇರೆಯಾಗುವ ನಿರ್ಧಾರ

ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಈಶಾ ಮತ್ತು ಬಾದ್‌ಶಾ “ನಾವು ಪರಸ್ಪರ ಗೌರವದಿಂದಲೇ ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದೇವೆ. ನಮ್ಮಿಬ್ಬರ ಮುಂದಿನ ಜೀವನದ ಹಾದಿಗಳು ಬೇರೆಯಾಗಿರಲಿದ್ದು, ಈ ಕಷ್ಟದ ಸಮಯದಲ್ಲಿ ಪ್ರತಿಯೊಬ್ಬರೂ ನಮ್ಮ ಖಾಸಗಿತನವನ್ನು ಗೌರವಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಈ ವಿಷಯದಲ್ಲಿ ಇನ್ಮುಂದೆ ಯಾವುದೇ ರೀತಿಯ ಊಹಾಪೋಹಗಳಿಗೆ ಅಥವಾ ವದಂತಿಗಳಿಗೆ ಅವಕಾಶ ನೀಡಬಾರದು. ಇದು ನಮ್ಮ ಕಡೆಯಿಂದ ಬರುವ ಅಂತಿಮ ಹೇಳಿಕೆಯಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಸುಮಾರು ನಾಲ್ಕು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಈ ಜೋಡಿ ಮಾರ್ಚ್ 2026ರಲ್ಲಿ ಅತ್ಯಂತ ಆಪ್ತರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಈಶಾ ಅವರ ತಾಯಿ ಪೂನಂ ರಿಖಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಂಡಾಗಷ್ಟೇ ಈ ವಿಚಾರ ಹೊರಬಿದ್ದಿತ್ತು. ಬಳಿಕ ಜೂನ್‌ನಲ್ಲಿ ಈಶಾ ಸ್ವತಃ ತಮ್ಮ ಮದುವೆಯನ್ನು ಖಚಿತಪಡಿಸಿದ್ದರು. ಆದರೆ ಜುಲೈ ತಿಂಗಳಿನಿಂದಲೇ ಇವರ ವೈವಾಹಿಕ ಜೀವನದಲ್ಲೇನೋ ಸರಿ ಇಲ್ಲ ಎಂಬ ವದಂತಿಗಳು ಕಾಲಿವುಡ್ ಹಾಗೂ ಬಾಲಿವುಡ್ ಅಂಗಳದಲ್ಲಿ ಹರಿದಾಡಲು ಶುರುವಾಗಿದ್ದವು.

ಡಿವೋರ್ಸ್‌ ಮಧ್ಯೆ ಸಾಂಗ್‌ ರಿಲೀಸ್‌ ಮಾಡಿದ ಬಾದ್‌ಶಾ

ಜುಲೈ ಅಂತ್ಯದಲ್ಲಿ ಈಶಾ ರಿಖಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದ ಸಾಲುಗಳು ಈ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿದ್ದವು. “ಕೆಲವು ಹೋರಾಟಗಳು ಯಾವುದೇ ಗಾಯಗಳನ್ನು ಬಿಡುವುದಿಲ್ಲ. ಭಯದಿಂದಾಗಿ ನಾನು ಇಷ್ಟು ದಿನ ಮೌನವಾಗಿದ್ದೆ, ಆದರೆ ಆ ಮೌನ ಒಪ್ಪಿಗೆಯಾಗಿರಲಿಲ್ಲ. ಬದಲಿಗೆ ಬದುಕುವ ಹಠವಾಗಿತ್ತು. ಈಗ ನಾನು ಧೈರ್ಯವಾಗಿ ಮುನ್ನಡೆಯುತ್ತಿದ್ದೇನೆ” ಎಂದು ಬರೆದುಕೊಂಡಿದ್ದರು. ಇದೇ ವೇಳೆ ಅವರ ತಾಯಿ ಕೂಡ ಕರ್ಮದ ಕುರಿತು ಸಾಲುಗಳನ್ನು ಪೋಸ್ಟ್ ಮಾಡಿದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ಅಂದಹಾಗೆ ಬಾದ್‌ಶಾ ಅವರಿಗೆ ಇದು ಎರಡನೇ ವಿಚ್ಛೇದನವಾಗಿದೆ. 2012ರಲ್ಲಿ ಜಾಸ್ಮಿನ್ ಮಸಿಹ್ ಅವರನ್ನು ಮದುವೆಯಾಗಿದ್ದ ಬಾದ್‌ಶಾ, 2020ರಲ್ಲಿ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದರು. ಈ ದಂಪತಿಗೆ ಜೆಸ್ಸೆಮಿ ಗೇಸ್ ಎಂಬ ಮಗಳಿದ್ದಾಳೆ. ಪ್ರಸ್ತುತ ಈಶಾ ರಿಖಿ ಅವರು ಸಲ್ಮಾನ್ ಖಾನ್ ನಿರೂಪಣೆಯ ‘ಬಿಗ್ ಬಾಸ್ 20’ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಹೋಗಲಿದ್ದಾರೆ ಎಂಬ ವದಂತಿಗಳೂ ಜೋರಾಗಿವೆ. ಮತ್ತೊಂದೆಡೆ, ವಿಚ್ಛೇದನದ ಸುದ್ದಿ ಹೊರಬಿದ್ದ ಬೆನ್ನಲ್ಲೇ ಬಾದ್‌ಶಾ ತಮ್ಮ ಮೊದಲ ಮರಾಠಿ ಹಿಪ್-ಹಾಪ್ ‘ಚಿಮ್ನಾ’ ಸಾಂಗ್ ರಿಲೀಸ್ ಮಾಡಿ ಸಂಗೀತ ಪ್ರಿಯರ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ಶಾಂತಿ ಕ್ರಾಂತಿ’ ರೀ-ರಿಲೀಸ್‌ಗೆ ಅಭಿಮಾನಿಗಳ ಭಾರಿ ಡಿಮ್ಯಾಂಡ್: ಸಮಸ್ಯೆ ತೆರೆದಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್!

Leave a Reply

Your email address will not be published. Required fields are marked *