ನವದೆಹಲಿ: ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಸಂಸ್ಥೆಗೆ ಸುಪ್ರೀಂ ಕೋರ್ಟ್(Supreme Court) ನಿಂದ ಬಹುದೊಡ್ಡ ಸಮಾಧಾನಕರ ಸುದ್ದಿ ಸಿಕ್ಕಿದೆ. ದೆಹಲಿಯ ಯಮುನಾ ನದಿ ಪಾತ್ರದಲ್ಲಿ 2016ರಲ್ಲಿ ಆಯೋಜಿಸಲಾಗಿದ್ದ ವಿಶ್ವ ಸಾಂಸ್ಕೃತಿಕ ಉತ್ಸವದ ವೇಳೆ ಪರಿಸರ ಹಾನಿಯಾಗಿದೆ ಎಂದು ವಿಧಿಸಲಾಗಿದ್ದ 5 ಕೋಟಿ ರೂಪಾಯಿ ದಂಡದ ಮೊತ್ತವನ್ನು ಹಿಂತಿರುಗಿಸುವಂತೆ ಸರ್ವೋಚ್ಚ ನ್ಯಾಯಾಲಯ ಶನಿವಾರ ಮಹತ್ವದ ಆದೇಶ ನೀಡಿದೆ.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವ್ಯಾಪ್ತಿಗೆ ಒಳಪಡುವ ‘ವ್ಯಕ್ತಿ ವಿಕಾಸ ಕೇಂದ್ರ’ ಎಂಬ ಸಾರ್ವಜನಿಕ ಚಾರಿಟೇಬಲ್ ಟ್ರಸ್ಟ್ ಈ ದಂಡದ ಹಣವನ್ನು ಪಾವತಿಸಿತ್ತು. ಈ ಬೃಹತ್ ಸಾಂಸ್ಕೃತಿಕ ಕಾರ್ಯಕ್ರಮದಿಂದ ಯಮುನಾ ನದಿಯ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ನೇರವಾಗಿ ಯಾವುದೇ ಹಾನಿಯಾಗಿದೆ ಎಂಬುದಕ್ಕೆ ಸೂಕ್ತ ಮತ್ತು ನೇರ ಸಾಕ್ಷ್ಯಾಧಾರಗಳಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಹೀಗಾಗಿ ಸಂಸ್ಥೆ ಪಾವತಿಸಿದ್ದ ಸಂಪೂರ್ಣ 5 ಕೋಟಿ ರೂಪಾಯಿ ದಂಡವನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರವು (ಡಿಡಿಎ) ತಕ್ಷಣವೇ ಮರುಪಾವತಿ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.
ಈ ಪ್ರಕರಣದ ಹಿನ್ನೆಲೆಯನ್ನು ನೋಡುವುದಾದರೆ, ಮಾರ್ಚ್ 2016ರಲ್ಲಿ ಯಮುನಾ ನದಿ ತೀರದಲ್ಲಿ ನಡೆದಿದ್ದ ಬೃಹತ್ ‘ವಿಶ್ವ ಸಾಂಸ್ಕೃತಿಕ ಉತ್ಸವ’ದ ತಯಾರಿ ಮತ್ತು ಆಯೋಜನೆಯಿಂದ ನದಿ ಪಾತ್ರಕ್ಕೆ ಭಾರಿ ಹಾನಿಯಾಗಿದೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ್ದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು (ಎನ್‌ಜಿಟಿ) 2017ರ ಡಿಸೆಂಬರ್‌ನಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯನ್ನು ತಪ್ಪಿತಸ್ಥ ಎಂದು ಪರಿಗಣಿಸಿ 5 ಕೋಟಿ ರೂಪಾಯಿ ದಂಡ ವಿಧಿಸಿತ್ತು.
2016ರ ಮಾರ್ಚ್ 11 ರಿಂದ 13 ರವರೆಗೆ ನಡೆದ ಈ ಕಾರ್ಯಕ್ರಮಕ್ಕೆ ಎನ್‌ಜಿಟಿ ಆರಂಭದಲ್ಲೇ ಅನುಮತಿ ನೀಡಿತ್ತಾದರೂ, ದಂಡದ ಸಂಪೂರ್ಣ ಮೊತ್ತವನ್ನು ಪಾವತಿಸುವ ಷರತ್ತು ವಿಧಿಸಿತ್ತು. ಕಾರ್ಯಕ್ರಮದ ಮೊದಲ ದಿನವಾದ ಮಾರ್ಚ್ 11 ರಂದು ಸಂಸ್ಥೆಯು ದಂಡ ಪಾವತಿಸಲು ನಾಲ್ಕು ವಾರಗಳ ಕಾಲಾವಕಾಶ ಕೋರಿ ಎನ್‌ಜಿಟಿ ಮೆಟ್ಟಿಲೇರಿತ್ತು. ಆಗ ಆರಂಭಿಕ ಕಂತಾಗಿ 25 ಲಕ್ಷ ರೂಪಾಯಿ ಪಾವತಿಸಲು ಸೂಚಿಸಿದ್ದ ಹಸಿರು ನ್ಯಾಯಾಧಿಕರಣ, ಬಾಕಿ ಮೊತ್ತ ಪಾವತಿಗೆ ಮೂರು ವಾರಗಳ ಕಾಲಾವಕಾಶ ನೀಡಿತ್ತು.
ಬಳಿಕ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಬಾಕಿ ಇದ್ದ 4.75 ಕೋಟಿ ರೂಪಾಯಿಯನ್ನು ನೇರ ದಂಡವೆಂದು ಪರಿಗಣಿಸುವ ಬದಲು ಬ್ಯಾಂಕ್ ಗ್ಯಾರಂಟಿಯಾಗಿ ಸ್ವೀಕರಿಸಬೇಕು ಮತ್ತು ಆ ಹಣವನ್ನು ಅದೇ ಭಾಗದಲ್ಲಿ ಜೀವವೈವಿಧ್ಯ ಉದ್ಯಾನವನ ಅಭಿವೃದ್ಧಿಪಡಿಸಲು ಬಳಸಬೇಕು ಎಂದು ವಿನಂತಿಸಿತ್ತು. ಅಂತಿಮವಾಗಿ ದಂಡದ ಮೊತ್ತವನ್ನು ಪೂರ್ಣವಾಗಿ ಪಾವತಿಸಿದರೂ, ಎನ್‌ಜಿಟಿ ನೀಡಿದ್ದ ಈ ದಂಡದ ತೀರ್ಪನ್ನು ಸವಾಲು ಮಾಡಿ ಸಂಸ್ಥೆಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಸುದಿರ್ಘ ಕಾನೂನು ಹೋರಾಟದ ನಂತರ ಇದೀಗ ಸುಪ್ರೀಂ ಕೋರ್ಟ್‌ನಿಂದ ಸಂಸ್ಥೆಗೆ ನ್ಯಾಯ ಸಿಕ್ಕಂತಾಗಿದೆ.
ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್
ಇದೇ ವೇಳೆ, ಯಮುನಾ ನದಿ ಪಾತ್ರವನ್ನು ರಕ್ಷಿಸುವಲ್ಲಿ ದೆಹಲಿ ಅಭಿವೃದ್ಧಿ ಪ್ರಾಧಿಕಾರವೇ (ಡಿಡಿಎ) ತನ್ನ ಕರ್ತವ್ಯದಲ್ಲಿ ವಿಫಲವಾಗಿದೆ ಎಂದು ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಎನ್‌ಜಿಟಿ ಹಿಂದೆ ನೀಡಿದ್ದ ನಿರ್ದೇಶನದಂತೆ ಯಮುನಾ ನದಿ ತೀರದ ಪುನರುಜ್ಜೀವನ ಮತ್ತು ಸೌಂದರ್ಯೀಕರಣ ಕಾರ್ಯಗಳನ್ನು ಡಿಡಿಎ ಬಾಧ್ಯತೆಯಿಂದ ಮುಂದುವರಿಸಬೇಕು ಎಂದು ಆದೇಶಿಸಿದೆ.
ಇದನ್ನೂ ಓದಿ: ನವಜಾತ ಶಿಶುಗಳಿಗೆ ‘ಥೈ ಮಾಮನ್’ ಚಿನ್ನದ ಉಂಗುರ ಕೊಡುಗೆ
