ಗದಗ: ಶಾಲಾ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ನೀಡಬೇಕಾದ ಸರ್ಕಾರಿ ಯೋಜನೆಯಲ್ಲಿ ತೀವ್ರ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಮಧ್ಯಾಹ್ನದ ಬಿಸಿಊಟ ಸೇವಿಸಿ ನೂರಕ್ಕೂ (Tragedy) ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆ ಪಾಲಾಗಿರುವ ದೂಷಾರ್ಹ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬೀಡನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಅಡುಗೆಯಲ್ಲಿ ಹಲ್ಲಿ ಬಿದ್ದಿರುವುದು ತಿಳಿಯದೆ ಆಹಾರ ವಿತರಿಸಿದ್ದೇ ಈ ಬೃಹತ್ ದುರಂತಕ್ಕೆ ಕಾರಣವಾಗಿದೆ.
ಮಧ್ಯಾಹ್ನದ ಊಟದ ಬಳಿಕ ಸಾಲು ಸಾಲು ಮಕ್ಕಳು ಅಸ್ವಸ್ಥ
ಶಾಲೆಯಲ್ಲಿ ಎಂದಿನಂತೆ ಮಧ್ಯಾಹ್ನದ ಬಿಸಿಊಟದ ಸಮಯಕ್ಕೆ ಮಕ್ಕಳಿಗೆ ಆಹಾರ ವಿತರಿಸಲಾಗಿತ್ತು. ಆದರೆ ಊಟ ಮುಗಿಸಿದ ಕೆಲವೇ ಸಮಯದಲ್ಲಿ ವಿದ್ಯಾರ್ಥಿಗಳಿಗೆ ದಿಢೀರನೇ ಭಾರಿ ಹೊಟ್ಟೆನೋವು, ತಲೆಸುತ್ತು, ವಾಂತಿ ಹಾಗೂ ಭೇದಿ ಕಾಣಿಸಿಕೊಂಡಿದೆ. ಒಂದರ ಮೇಲೊಂದರಂತೆ ಸಾಲು ಸಾಲು ಮಕ್ಕಳು ತೀವ್ರ ಅಸ್ವಸ್ಥಗೊಂಡು ಶಾಲೆಯ ಆವರಣದಲ್ಲೇ ಕುಸಿದುಬಿದ್ದಾಗ ಶಿಕ್ಷಕರು ಮತ್ತು ಸಿಬ್ಬಂದಿ ಆತಂಕಗೊಂಡರು. ತಕ್ಷಣವೇ ಆಹಾರ ತಪಾಸಣೆ ನಡೆಸಿದಾಗ ಬಿಸಿಊಟ ತಯಾರಿಸಿದ್ದ ಪಾತ್ರೆಯಲ್ಲಿ ಸತ್ತ ಹಲ್ಲಿ ಬಿದ್ದಿರುವುದು ಕಂಡುಬಂದಿದೆ ಎನ್ನಲಾಗಿದೆ.
ಅಸ್ವಸ್ಥರಾದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸ್ಥಳೀಯ ವಾಹನಗಳು ಹಾಗೂ ಆಂಬುಲೆನ್ಸ್ಗಳ ಮೂಲಕ ತಕ್ಷಣವೇ ಮುಂಡರಗಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು. ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಶುಶ್ರೂಷಕರು ತುರ್ತು ಚಿಕಿತ್ಸಾ ಘಟಕ ತೆರೆದು ಮಕ್ಕಳಿಗೆ ಗ್ಲೂಕೋಸ್ ಮತ್ತು ಅಗತ್ಯ ಔಷಧಗಳನ್ನು ನೀಡಿ ತೀವ್ರ ನಿಗಾದಲ್ಲಿ ಚಿಕಿತ್ಸೆ ಮುಂದುವರಿಸಿದ್ದಾರೆ.
ಆಸ್ಪತ್ರೆ ಆವರಣದಲ್ಲಿ ಪೋಷಕರ ಕಣ್ಣೀರು ಮತ್ತು ಆಕ್ರೋಶ
ವಿಷಪೂರಿತ ಆಹಾರ ಸೇವಿಸಿ ಶಾಲಾ ಮಕ್ಕಳು ಅಸ್ವಸ್ಥಗೊಂಡಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ, ಕಂಗಾಲಾದ ಪೋಷಕರು ಮತ್ತು ಗ್ರಾಮಸ್ಥರು ಅತ್ತ ಶಾಲೆಯತ್ತ ಹಾಗೂ ಇತ್ತ ಮುಂಡರಗಿ ಆಸ್ಪತ್ರೆಯತ್ತ ದೌಡಾಯಿಸಿದರು. ಆಸ್ಪತ್ರೆಯ ಹಾಸಿಗೆಗಳ ಮೇಲೆ ಮಕ್ಕಳು ಚಿಕಿತ್ಸೆಗೆ ಸ್ಪಂದಿಸುತ್ತಾ ನರಳುತ್ತಿರುವುದನ್ನು ಕಂಡು ಪೋಷಕರು ಕಣ್ಣೀರಿಟ್ಟ ದೃಶ್ಯ ಎದೆಕಲಕುವಂತಿತ್ತು.
ಶಾಲೆಗಳಲ್ಲಿ ಮಕ್ಕಳಿಗೆ ಸುರಕ್ಷಿತ ಹಾಗೂ ನೈರ್ಮಲ್ಯಯುತ ಆಹಾರ ಒದಗಿಸುವಲ್ಲಿ ಪದೇ ಪದೇ ಆಡಳಿತ ವ್ಯವಸ್ಥೆ ಎಡವುತ್ತಿದೆ ಎಂದು ಗ್ರಾಮಸ್ಥರು ತೀವ್ರ ಕಿಡಿಕಾರಿದ್ದಾರೆ. ಅಡುಗೆ ತಯಾರಿಸುವಾಗ ಮತ್ತು ವಿತರಿಸುವಾಗ ಕನಿಷ್ಠ ವಹಿಸಬೇಕಾದ ಮುನ್ನೆಚ್ಚರಿಕೆಯನ್ನು ಗಾಳಿಗೆ ತೂರಿದ ಬಿಸಿಊಟ ಸಿಬ್ಬಂದಿ ಹಾಗೂ ಸಂಬಂಧಪಟ್ಟ ಶಾಲಾ ಮುಖ್ಯಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಸ್ಪತ್ರೆ ಆವರಣದಲ್ಲಿ ಬಿಗಿ ಪಟ್ಟು ಹಿಡಿದಿದ್ದಾರೆ.
ತನಿಖೆಗೆ ಸಾರ್ವಜನಿಕರ ಆಗ್ರಹ
ಸರ್ಕಾರಿ ಶಾಲೆಗಳಲ್ಲಿ ನೀಡಲಾಗುವ ಬಿಸಿಊಟದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತು ಶಿಕ್ಷಣ ಇಲಾಖೆ ಹಾಗೂ ತಾಲೂಕು ಆಡಳಿತ ಸೂಕ್ತ ನಿಗಾವಹಿಸದಿರುವುದೇ ಇಂತಹ ಘಟನೆಗಳಿಗೆ ಪ್ರಮುಖ ಕಾರಣ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಡಳಿತವು ಸಮಗ್ರ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಗ್ರಾಮೀಣ ಧ್ವನಿಗೆ ಯುವ ಶಕ್ತಿ: ‘ವಿದ್ಯಾರ್ಥಿ ವಾಣಿ’ ಪತ್ರಿಕೆಯ ಯಶಸ್ವಿ ಎರಡು ವರ್ಷಗಳ ಸಾರ್ಥಕ ಪಯಣ
