TOP NEWS

Eshwar Khandre: ಮಂಗಳೂರು ಕೆಆರ್‌ಐಡಿಎಲ್‌ನಲ್ಲಿ 7% ಕಮಿಷನ್ ಆರೋಪ: 7 ದಿನಗಳಲ್ಲಿ ವರದಿ ಸಲ್ಲಿಸಲು ಸಚಿವ ಖಂಡ್ರೆ ಆದೇಶ

Corruption Shock in Mangaluru KRIDL Eshwar Khandre Orders 7 Day Inquiry Into 7 percent Commission Scandal

ಬೆಂಗಳೂರು: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (KRIDL) ಮಂಗಳೂರು ವಿಭಾಗದಲ್ಲಿ ಬೃಹತ್ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದು, ಉಸ್ತುವಾರಿ ಹಾಗೂ ಇಲಾಖೆ ಸಚಿವರ ಹೆಸರಿನಲ್ಲೇ ಶೇಕಡಾ 7ರಷ್ಟು ಕಮಿಷನ್ ವಸೂಲಿ ಮಾಡಲಾಗುತ್ತಿದೆ ಎಂಬ ಗಂಭೀರ ದೂರನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಅಕ್ರಮದ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ ಮುಂದಿನ 7 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಸಚಿವ ಈಶ್ವರ್ ಬಿ. ಖಂಡ್ರೆ (Eshwar Khandre) ಅವರು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಶಾಸಕ ಅಶೋಕ್ ಕುಮಾರ್ ರೈ ದೂರು:

ಮಂಗಳೂರು ಕೆಆರ್‌ಐಡಿಎಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯನಿರ್ವಾಹಕ ಇಂಜಿನಿಯರ್ (EE) ಹಾಗೂ ಕಿರಿಯ ಇಂಜಿನಿಯರ್‌ಗಳು (JE) ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಮಗಾರಿಗಳ ಬಿಲ್ ಪಾವತಿ ಮತ್ತು ಗುತ್ತಿಗೆ ನೀಡುವ ವಿಷಯದಲ್ಲಿ ಗುತ್ತಿಗೆದಾರರಿಗೆ ಬೆದರಿಕೆ ಒಡ್ಡಿ, ಸಚಿವರ ಹೆಸರಿನಲ್ಲಿ ಕಮಿಷನ್ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಪುತ್ತೂರು ಶಾಸಕ ಕೆ.ಎ. ಅಶೋಕ್ ಕುಮಾರ್ ರೈ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತನಿಖೆಗೆ ಒತ್ತಾಯಿಸಿದ್ದರು. ಈ ಕುರಿತು ಮಾಧ್ಯಮಗಳಲ್ಲೂ ಸರಣಿ ವರದಿಗಳು ಪ್ರಕಟಗೊಂಡು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬೆನ್ನಲ್ಲೇ ಕಾರ್ಯಪ್ರವೃತ್ತರಾಗಿರುವ ಸಚಿವ ಈಶ್ವರ್ ಖಂಡ್ರೆ, ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಅಧಿಕೃತ ಟಿಪ್ಪಣಿ ರವಾನಿಸಿ ತನಿಖೆಗೆ ಆದೇಶಿಸಿದ್ದಾರೆ.

ತ್ರಿಸದಸ್ಯ ಸಮಿತಿ ರಚಿಸಿ 7 ದಿನಗಳ ಗಡುವು:

ಪ್ರಕರಣದ ಆಳ-ಅಗಲವನ್ನು ಪರಿಶೀಲಿಸಲು ಸೂಪರಿಂಟೆಂಡೆಂಟ್ ಇಂಜಿನಿಯರ್ (SE) ದರ್ಜೆಯ ಹಿರಿಯ ಅಧಿಕಾರಿಯ ನೇತೃತ್ವದಲ್ಲಿ ತ್ರಿಸದಸ್ಯ ತನಿಖಾ ತಂಡವನ್ನು ತಕ್ಷಣವೇ ರಚಿಸುವಂತೆ ನಿರ್ದೇಶಿಸಲಾಗಿದೆ. ಶಾಸಕರು ಮಾಡಿರುವ ಆರೋಪಗಳಲ್ಲಿ ಎಷ್ಟು ಸತ್ಯಾಂಶವಿದೆ, ಇಂಜಿನಿಯರ್‌ಗಳು ಕಮಿಷನ್ ದಂಧೆಯಲ್ಲಿ ಭಾಗಿಯಾಗಿದ್ದಾರೆಯೇ ಮತ್ತು ಯಾರ್ಯಾರು ಈ ಅಕ್ರಮದಲ್ಲಿದ್ದಾರೆ ಎಂಬುದನ್ನು ಸಂಪೂರ್ಣವಾಗಿ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೈಗೊಳ್ಳಬೇಕಾದ ಶಿಸ್ತುಕ್ರಮದ ವಿವರವಾದ ಶಿಫಾರಸಿನೊಂದಿಗೆ ವರದಿ ಸಲ್ಲಿಸಲು ಒಂದು ವಾರದ ಸಮಯ ನೀಡಲಾಗಿದೆ.

ಹೆಸರು ದುರ್ಬಳಕೆ ಮಾಡಿಕೊಂಡರೆ ಜೈಲು ಶಿಕ್ಷೆ ಖಚಿತ:

ಇಲಾಖೆಯ ಯಾವುದೇ ಹಂತದ ಅಧಿಕಾರಿಗಳು ಅಥವಾ ಸಿಬ್ಬಂದಿ ಸಚಿವರ ಹಾಗೂ ಸರ್ಕಾರದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹಣ ವಸೂಲಿ ಮಾಡಲು ಯತ್ನಿಸಿದರೆ ಅಂತಹವರ ವಿರುದ್ಧ ಕರುಣೆ ಇಲ್ಲದೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಮ್ಮ ಆದೇಶದಲ್ಲಿ ಎಚ್ಚರಿಸಿದ್ದಾರೆ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದು ನಮ್ಮ ಆದ್ಯತೆಯಾಗಿದ್ದು, ಸಾರ್ವಜನಿಕರ ಹಣವನ್ನು ಲೂಟಿ ಮಾಡುವ ಇಂಜಿನಿಯರ್‌ಗಳಿಗೆ ಯಾವುದೇ ಕಾರಣಕ್ಕೂ ರಕ್ಷಣೆ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಕುಡಿದು ಗಲಾಟೆ ಮಾಡಿದವನಿಗೆ ಜೈಲಲ್ಲ, 50 ಗಿಡ ನೆಡುವ ಶಿಕ್ಷೆ!: ಚಿಕ್ಕೋಡಿ ಕೋರ್ಟ್‌ನ ಸೂಪರ್ ತೀರ್ಪು!

Leave a Reply

Your email address will not be published. Required fields are marked *