TOP NEWS

America: ಸಹಪಾಠಿಯ ಭೀಕರ ಕೊಲೆ ಪ್ರಕರಣ: ಸುಪ್ರೀಂ ಕೋರ್ಟ್‌ನಲ್ಲೂ ಕ್ರಿಸ್ಟಾ ಪೈಕ್ ಗಲ್ಲು ಶಿಕ್ಷೆ ತಡೆ ಮನವಿ ವಜಾ

Supreme Court Denies Stay of Execution for Christa Gail Pike Ahead of Lethal Injection

ಅಮೆರಿಕ: ಟೆನ್ನೆಸ್ಸಿ ರಾಜ್ಯದಲ್ಲಿ ಕಳೆದ ಮೂರು ದಶಕಗಳ ಹಿಂದೆ ನಡೆದಿದ್ದ (America) ಅತ್ಯಂತ ಭೀಕರ ಹಾಗೂ ಸಮಾಜವನ್ನು ಬೆಚ್ಚಿಬೀಳಿಸಿದ್ದ ಕೊಲೆ ಪ್ರಕರಣವೊಂದರ ಅಪರಾಧಿಗೆ ಕೊನೆಗೂ ಗಲ್ಲು ಶಿಕ್ಷೆ ಜಾರಿಯಾಗುತ್ತಿದೆ. 1995ರಲ್ಲಿ ನಡೆದ ತಮ್ಮ ಸಹಪಾಠಿಯ ಬೃಶ ಹತ್ಯೆ ಪ್ರಕರಣದಲ್ಲಿ ದೋಷಿಯಾಗಿರುವ 50 ವರ್ಷದ ಕ್ರಿಸ್ಟಾ ಗೇಲ್ ಪೈಕ್ (Christa Gail Pike) ಎಂಬ ಮಹಿಳೆಯನ್ನು ನೆಶ್‌ವಿಲ್‌ನ ರೀವರ್‌ಬೆಂಡ್ ಮ್ಯಾಕ್ಸಿಮಮ್ ಸೆಕ್ಯುರಿಟಿ ಜೈಲಿನಲ್ಲಿ ಮರಣದಂಡನೆಗೆ ಗುರಿಪಡಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಟೆನ್ನೆಸ್ಸಿ ರಾಜ್ಯದ ಇತಿಹಾಸದಲ್ಲಿ ಕಳೆದ 200ಕ್ಕೂ ಹೆಚ್ಚು ವರ್ಷಗಳಲ್ಲಿ ಮಹಿಳೆಯೊಬ್ಬರಿಗೆ ಮರಣದಂಡನೆ ಜಾರಿಯಾಗುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

ಏನಿದು ಪ್ರಕರಣ?

ಈ ಭೀಕರ ಘಟನೆ ನಡೆದಾಗ ಕ್ರಿಸ್ಟಾಗೆ ಕೇವಲ 18 ವರ್ಷ ವಯಸ್ಸಾಗಿತ್ತು. ನಾಕ್ಸ್ ವಿಲ್‌ನಲ್ಲಿರುವ ಜಾಬ್ ಕಾರ್ಪ್ಸ್ ತರಬೇತಿ ಕೇಂದ್ರದಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ, ತನ್ನ ಪ್ರೇಮಿಯನ್ನು ಕಬಳಿಸಲು ಯತ್ನಿಸುತ್ತಿದ್ದಾಳೆ ಎಂಬ ಅನುಮಾನ ಹಾಗೂ ಈರ್ಷೆಯಿಂದ ತಮ್ಮ ಸಹಪಾಠಿಯಾಗಿದ್ದ 19 ವರ್ಷದ ಕೊಲೀನ್ ಸ್ಲೆಮ್ಮರ್ ಎಂಬ ಯುವತಿಯನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ಕ್ರಿಸ್ಟಾ ಹಾಗೂ ಆಕೆಯ ಗೆಳೆಯ ಸೇರಿ ಕೊಲೀನ್ ಅವರನ್ನು ಕಾಡಿನ ಪ್ರದೇಶಕ್ಕೆ ಕರೆದೊಯ್ದು ತೀವ್ರವಾಗಿ ಹಲ್ಲೆ ನಡೆಸಿ, ಕೊಲೆ ಮಾಡಿದ್ದರು. ಆ ಸಂದರ್ಭದಲ್ಲಿ ಸಂತ್ರಸ್ತೆಯ ದೇಹದ ಮೇಲೆ ಸೈತಾನಿ ಆರಾಧನೆಯ ಸಂಕೇತವಾದ ಪೆಂಟಾಗ್ರಾಮ್ (Pentagram) ಗುರುತನ್ನು ಕೆತ್ತಿದ್ದು ಇಡೀ ಅಮೆರಿಕಾದ್ಯಂತ ಭಾರಿ ಚರ್ಚೆಗೆ ಮತ್ತು ‘ಸೈತಾನಿಕ್ ಪ್ಯಾನಿಕ್’ ಎಂಬ ಭೀತಿಗೆ ಕಾರಣವಾಗಿತ್ತು.

ಪ್ರಕರಣದಲ್ಲಿ ಕ್ರಿಸ್ಟಾ ಪೈಕ್‌ಗೆ ಮರಣದಂಡನೆ ವಿಧಿಸಲಾಗಿದ್ದರೆ, ಆಕೆಯ ಪ್ರಿಯಕರ ಟಡಾರಿಲ್ ಶಿಪ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಈ ಶಿಕ್ಷೆಯನ್ನು ರದ್ದುಗೊಳಿಸುವಂತೆ ಅಥವಾ ಮರಣದಂಡನೆಯನ್ನು ತಡೆಹಿಡಿಯುವಂತೆ ಕೋರಿ ಕ್ರಿಸ್ಟಾ ಸಲ್ಲಿಸಿದ್ದ ಎಲ್ಲಾ ಮೇಲ್ಮನವಿಗಳನ್ನು ಅಮೆರಿಕದ ಸುಪ್ರೀಂ ಕೋರ್ಟ್ ಹಾಗೂ ರಾಜ್ಯದ ರಾಜ್ಯಪಾಲರು ವಜಾಗೊಳಿಸಿದ್ದಾರೆ. “ನಾನು ಆ ಸಂದರ್ಭದಲ್ಲಿ ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ 18 ವರ್ಷದ ಬಾಲಕಿಯಾಗಿದ್ದೆ. ನಾನು ಮಾಡಿದ ಘೋರ ಕೃತ್ಯದ ಅರಿವಾಗಲು ನನಗೆ ಹಲವು ವರ್ಷಗಳು ಬೇಕಾಯಿತು. ಒಬ್ಬರ ಮಗಳ, ಸಹೋದರಿಯ ಜೀವ ತೆಗೆದಿರುವುದಕ್ಕೆ ನನಗೆ ಈಗ ಅಸಹ್ಯವೆನಿಸುತ್ತಿದೆ” ಎಂದು ಕ್ರಿಸ್ಟಾ ಕ್ಷಮಾದಾನ ಅರ್ಜಿಯಲ್ಲಿ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಳು.

ಗಲ್ಲು ಶಿಕ್ಷೆ ನೋಡಲು ಹೋದ ಮೃತಳ ಫೋಷಕರು

ಆದರೆ, ಈ ಹತ್ಯೆಯಿಂದ ತನ್ನ ಮಗಳನ್ನು ಕಳೆದುಕೊಂಡ ತಾಯಿ ಮೇ ಮಾರ್ಟಿನೆಜ್, ಅಪರಾಧಿಗೆ ತಕ್ಷಣವೇ ಗಲ್ಲು ಶಿಕ್ಷೆಯಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ. “ನನ್ನ ಮಗಳು ಅನುಭವಿಸಿದ ಯಾತನೆ ಮತ್ತು ಜೀವ ಉಳಿಸಿಕೊಳ್ಳಲು ಆಕೆ ನಡೆಸಿದ ಹೋರಾಟವನ್ನು ನೆನೆಸಿಕೊಂಡರೆ ಈಗಲೂ ಕಣ್ಣೀರು ಬರುತ್ತದೆ” ಎಂದು ಹೇಳಿರುವ ಅವರು, ಶಿಕ್ಷೆ ಜಾರಿಯಾಗುವುದನ್ನು ಕಣ್ಣಾರೆ ವೀಕ್ಷಿಸಲು ತಮ್ಮ ಪತಿಯೊಂದಿಗೆ ತೆರಳಿದ್ದಾರೆ. ಕ್ರಿಸ್ಟಾಳ ಬಾಲ್ಯದ ದೌರ್ಜನ್ಯ ಮತ್ತು ಮಾನಸಿಕ ಸ್ಥಿತಿಯ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದರೂ, ನ್ಯಾಯಾಲಯದ ನಿರ್ಧಾರದಂತೆ ದಶಕಗಳ ಹಳೆಯ ಭೀಕರ ಕೊಲೆ ಪ್ರಕರಣಕ್ಕೆ ಕೊನೆಗೂ ತೆರೆಬೀಳುತ್ತಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್: 3ನೇ ದಿನವೂ ನ್ಯಾಯಾಲಯದಲ್ಲಿ ಮಾಫಿ ಸಾಕ್ಷಿ ಪ್ರದೋಷ್ ಮಹತ್ವದ ಹೇಳಿಕೆ!

Leave a Reply

Your email address will not be published. Required fields are marked *