ಬೆಂಗಳೂರು: ಬೆಚ್ಚಿಬೀಳಿಸಿದ್ದ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ ತನಿಖೆಯಲ್ಲಿ ಅತ್ಯಂತ ಪ್ರಮುಖ ಮೈಲಿಗಲ್ಲಾಗಬಹುದಾದ ಮಾಫಿ ಸಾಕ್ಷಿ (Approver) ಪ್ರದೋಷ್ ರಾವ್ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆಯು ಸತತ ಮೂರನೇ ದಿನವೂ ಮುಂದುವರಿದಿದೆ. ಬೆಂಗಳೂರಿನ 59ನೇ ಸಿಸಿಎಚ್ (CCH) ನ್ಯಾಯಾಲಯದಲ್ಲಿ ನ್ಯಾಯಾಧೀಶರ ನೇರ ಸಮ್ಮುಖದಲ್ಲಿ ಪ್ರದೋಷ್ ತಮ್ಮ ಸುದೀರ್ಘ ಹೇಳಿಕೆಯನ್ನು ನೀಡುತ್ತಿದ್ದು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಹಲವು ಸ್ಫೋಟಕ ಹಾಗೂ ರಹಸ್ಯ ಮಾಹಿತಿಗಳು ಈಗ ಒಂದೊಂದಾಗಿ ಹೊರಬರುತ್ತಿವೆ.
ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದ ಪ್ರದೋಷ್
ನ್ಯಾಯಾಲಯದ ಮುಂದೆ ಹಾಜರಾದ ಪ್ರದೋಷ್ ರಾವ್, ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸುವ ಮೂಲಕ ತಮ್ಮ ಹೇಳಿಕೆ ದಾಖಲಾತಿ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ಇಂದಿನ ವಿಚಾರಣೆಯ ಸಂದರ್ಭದಲ್ಲಿ ಪ್ರಕರಣದ ಆರೋಪಿಗಳ ಶರಣಾಗತಿ, ರೇಣುಕಾಸ್ವಾಮಿಯ ಮೃತದೇಹವನ್ನು ವಿಲೇವಾರಿ ಮಾಡಿದ ರೀತಿ ಹಾಗೂ ಸಾಕ್ಷ್ಯಗಳನ್ನು ನಾಶಪಡಿಸಲು ನಡೆಸಿದ ಸಂಚು ಮತ್ತು ಪ್ರಯತ್ನಗಳ ಕುರಿತು ಪ್ರದೋಷ್ ವಿಸ್ತೃತವಾಗಿ ಮಾಹಿತಿ ನೀಡುತ್ತಿದ್ದಾರೆ. ಮಾಫಿ ಸಾಕ್ಷಿ ನೀಡುವ ಈ ಹೇಳಿಕೆಯು ಕಾನೂನು ಪ್ರಕ್ರಿಯೆಯಲ್ಲಿ ಅತ್ಯಂತ ಪ್ರಮುಖ ಸಾಕ್ಷ್ಯವಾಗಿ ಪರಿಗಣಿತವಾಗುವುದರಿಂದ, ಪ್ರತಿಯೊಂದು ವಿವರವನ್ನೂ ಅತ್ಯಂತ ಮುನ್ನೆಚ್ಚರಿಕೆಯಿಂದ ದಾಖಲಿಸಿಕೊಳ್ಳಲಾಗುತ್ತಿದೆ.
ವಿಶೇಷವೆಂದರೆ, ಈ ಸಾಕ್ಷಿ ನುಡಿ ದಾಖಲಾತಿ ಪ್ರಕ್ರಿಯೆಯು ‘ಇನ್ ಕ್ಯಾಮೆರಾ ಪ್ರೊಸೀಡಿಂಗ್ಸ್’ (ರಹಸ್ಯ ವಿಚಾರಣೆ) ಮಾದರಿಯಲ್ಲಿ ನಡೆಯುತ್ತಿರುವುದರಿಂದ ನ್ಯಾಯಾಲಯದ ಒಳಗಿನ ಮಾಹಿತಿಗಳು ಸಾರ್ವಜನಿಕವಾಗಿ ತಕ್ಷಣಕ್ಕೆ ಲಭ್ಯವಾಗುತ್ತಿಲ್ಲ. ವಿಚಾರಣೆಯ ವೇಳೆ ಕೇವಲ ಪ್ರಕರಣದ ಆರೋಪಿಗಳು ಹಾಗೂ ಅವರ ಪರ ವಕೀಲರಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಈ ಭೀಕರ ಕೃತ್ಯ ನಡೆಯುವ ಸಂದರ್ಭದಲ್ಲಿ ಯಾರೆಲ್ಲ ಭಾಗಿಯಾಗಿದ್ದರು ಮತ್ತು ನಂತರದಲ್ಲಿ ಶರಣಾಗತಿಗೆ ಯೋಜನೆ ರೂಪಿಸಿದ್ದು ಹೇಗೆ ಎಂಬಿತ್ಯಾದಿ ಪ್ರಮುಖ ಸಂಗತಿಗಳನ್ನು ಪ್ರದೋಷ್ ಬಿಚ್ಚಿಡುತ್ತಿದ್ದಾರೆ ಎನ್ನಲಾಗಿದೆ.
ಜೈಲಿನಿಂದ ಭಾಗಿಯಾದ ಪವಿತ್ರಾ-ದರ್ಶನ್
ಇನ್ನು ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳು ಜೈಲಿನಿಂದಲೇ ವೀಡಿಯೊ ಕಾನ್ಫರೆನ್ಸ್ (VC) ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದಾರೆ. ಪ್ರದೋಷ್ ನೀಡುತ್ತಿರುವ ಪ್ರತಿಯೊಂದು ಹೇಳಿಕೆಯನ್ನೂ ಆರೋಪಿಗಳು ವೀಡಿಯೊ ಕಾನ್ಫರೆನ್ಸ್ ಮೂಲಕವೇ ಆಲಿಸುತ್ತಿದ್ದಾರೆ. ಸಾಕ್ಷ್ಯ ನಾಶ ಮತ್ತು ಶವ ವಿಲೇವಾರಿಗೆ ಸಂಬಂಧಿಸಿದಂತೆ ಮಾಫಿ ಸಾಕ್ಷಿ ನೀಡುತ್ತಿರುವ ಈ ಮಾಹಿತಿಗಳು, ಮುಂಬರುವ ದಿನಗಳಲ್ಲಿ ಆರೋಪಿಗಳ ಕಾನೂನು ಹೋರಾಟ ಹಾಗೂ ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ.
ಇದನ್ನೂ ಓದಿ: ಶಾಲೆಯ ಅಡುಗೆ ಕೊಠಡಿಯಲ್ಲಿ ಸಿಲಿಂಡರ್ ಸ್ಫೋಟ: ಚಿಕಿತ್ಸೆ ಫಲಿಸದೆ ಅಡುಗೆ ಸಹಾಯಕಿ ಸಾವು
