ತುಮರಿ: ಗಾಂಧಿ ಜಯಂತಿಯ ಶುಭ ಸಂದರ್ಭದಲ್ಲಿ ಪರಿಸರ ಕಾಳಜಿ ಮೆರೆಯಲು ತುಮರಿಯ (Gandhi Jayanti) ಅರಣ್ಯ ಇಲಾಖೆ ಹಾಗೂ ವಿವಿಧ ಸಂಘಸಂಸ್ಥೆಗಳು ಮುಂದಾಗಿವೆ. ದಿನಾಂಕ 02-10-2026ರ ಶುಕ್ರವಾರದಂದು ಬೆಳಿಗ್ಗೆ 9 ಗಂಟೆಗೆ ಸಿಗಂದೂರು ಸೇತುವೆಯಿಂದ ತುಮರಿಯವರೆಗೆ ಮತ್ತು ತುಮರಿಯಿಂದ ಹೊಳೆಬಾಗಿಲವರೆಗಿನ ರಸ್ತೆಬದಿಯ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳನ್ನು ತೆರವುಗೊಳಿಸುವ ಬೃಹತ್ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಜಾಗೃತಿ ಮೂಡಿಸಲು ಶ್ರಮದಾನ
ಈ ಸಮಾಜಮುಖಿ ಕಾರ್ಯಕ್ರಮವನ್ನು ರಾಜ್ಯ ಅರಣ್ಯ ಇಲಾಖೆ, ಗ್ರಾಮ ಅರಣ್ಯ ಸಮಿತಿ, ತುಮರಿ ಗ್ರಾಮ ಪಂಚಾಯತಿ, ಸ್ಥಳೀಯ ಗಣಪತಿ ಸಂಘಗಳು, ಮಹಿಳಾ ಸಂಘಗಳು, ವಿವಿಧ ಸ್ಥಳೀಯ ಸಂಘಸಂಸ್ಥೆಗಳು ಹಾಗೂ ನಿಟ್ಟೂರಿನ ಶೋಧ ರೈತ ಉತ್ಪಾದಕ ಸಂಸ್ಥೆಯ ಜಂಟಿ ಸಹಯೋಗದಲ್ಲಿ ಆಯೋಜಿಸಲಾಗಿದೆ. ರಸ್ತೆಬದಿಯಲ್ಲಿ ಹೆಚ್ಚುತ್ತಿರುವ ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ಶ್ರಮದಾನದ ಮುಖ್ಯ ಉದ್ದೇಶವಾಗಿದೆ.
ನಾಡಿನ ರಕ್ಷಣೆ ಮತ್ತು ಗ್ರಾಮದ ಅಂದವನ್ನು ಹೆಚ್ಚಿಸುವ ಈ ಕಾರ್ಯದಲ್ಲಿ ಭಾಗವಹಿಸುವ ಸ್ವಯಂಸೇವಕರು ಮತ್ತು ಸಾರ್ವಜನಿಕರ ದಾಹ ತಣಿಸಲು ವಿಶೇಷ ವ್ಯವಸ್ಥೆಯನ್ನೂ ಮಾಡಲಾಗಿದೆ. ಶ್ರಮದಾನದಲ್ಲಿ ಪಾಲ್ಗೊಳ್ಳುವವರಿಗೆ ಮಜ್ಜಿಗೆ ವಿತರಿಸಲು ನಿರ್ಧರಿಸಲಾಗಿದ್ದು, ಗ್ರಾಮಸ್ಥರು ತಮ್ಮ ಮನೆಯಲ್ಲಿ ಲಭ್ಯವಿರುವ ಮಜ್ಜಿಗೆಯನ್ನು ಅಂದು ಬೆಳಿಗ್ಗೆಯೇ ಸ್ಥಳೀಯ ದೇವಾಲಯಕ್ಕೆ ತಲುಪಿಸಿ ಸಹಕರಿಸಬೇಕಾಗಿ ವಿನಂತಿಸಲಾಗಿದೆ.
ಪರಿಸರ ನೈರ್ಮಲ್ಯ ಕಾಪಾಡುವ ಈ ಮಹತ್ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈಜೋಡಿಸುವುದು ಅಗತ್ಯವಾಗಿದ್ದು, ಊರಿನ ಸಮಸ್ತ ನಾಗರಿಕರು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಅರಣ್ಯ ಇಲಾಖೆಯ ಅಧಿಕಾರಿ ರಾಘವೇಂದ್ರ ಕೋರಿದ್ದಾರೆ.
ವರದಿ: ಪ್ರಶಾಂತ್ ಭಟ್
ಇದನ್ನೂ ಓದಿ: ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಆಗಮನ: ಡಿಕೆ ಶಿವಕುಮಾರ್ ಪತ್ರಕ್ಕೆ ಮೋದಿ ಸ್ಪಂದನೆ
