ಚೆನ್ನೈ: ತಮಿಳುನಾಡಿನ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ವಾರ ಕಳೆದರೂ ಸರ್ಕಾರ ರಚನೆಯ ಕಸರತ್ತು ಇನ್ನೂ ಅಂತ್ಯಗೊಂಡಿಲ್ಲ. ಏಪ್ರಿಲ್ 23 ರಂದು ಚುನಾವಣೆ ನಡೆದು ಮೇ 4 ರಂದು ಮ್ಯಾಜಿಕ್ (Tamil Nadu) ನಂಬರ್ ದಾಟಿದ್ದ ದಳಪತಿ ವಿಜಯ್ (Vijay) ಅವರ ಟಿವಿಕೆ (TVK) ಪಕ್ಷಕ್ಕೆ ಈಗ ಅನಿರೀಕ್ಷಿತ ಹಿನ್ನಡೆಯಾಗಿದೆ. ಐಯುಎಂಎಲ್ (IUML) ಪಕ್ಷವು ಕೊನೆ ಕ್ಷಣದಲ್ಲಿ ತನ್ನ ಬೆಂಬಲವನ್ನು ಹಿಂಪಡೆದಿರುವುದು ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ. ಇದರಿಂದಾಗಿ ಬಹುಮತವಿದ್ದರೂ ವಿಜಯ್ ಅವರ ಮುಖ್ಯಮಂತ್ರಿ ಪಟ್ಟಾಭಿಷೇಕ ವಿಳಂಬವಾಗುತ್ತಿದೆ. ಈಗಾಗಲೇ ಮೂರು ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿರುವ ವಿಜಯ್, ಸರ್ಕಾರ ರಚಿಸಲು ಹಕ್ಕು ಮಂಡಿಸಿ ಮುಂದಿನ ನಡೆಗಾಗಿ ಕಾಯುತ್ತಿದ್ದಾರೆ.
ಗೂಗಲ್‌ನಲ್ಲೂ ವಿಜಯ್ ಅಬ್ಬರ
ರಾಜ್ಯದ ಈ ರಾಜಕೀಯ ಬೆಳವಣಿಗೆಗಳು ಕೇವಲ ತಮಿಳುನಾಡಿಗಷ್ಟೇ ಸೀಮಿತವಾಗದೆ, ಇಡೀ ದೇಶದ ಗಮನ ಸೆಳೆದಿರುವುದು ಈಗ ಗೂಗಲ್ ಟ್ರೆಂಡ್ಸ್‌ನಿಂದ ಸಾಬೀತಾಗಿದೆ. ಕಳೆದ ಕೆಲವು ದಿನಗಳಿಂದ ಗೂಗಲ್ ಸರ್ಚ್‌ನಲ್ಲಿ ವಿಜಯ್ ಅವರದ್ದೇ ಅಬ್ಬರ. ತಮಿಳುನಾಡಿನ ಮುಂದಿನ ಸಾರಥಿ ಯಾರು? ವಿಜಯ್ ಚುನಾವಣೆಯಲ್ಲಿ ಜಯಗಳಿಸಿದ್ದಾರೆಯೇ? ಅವರ ಪಕ್ಷದ ಹಿನ್ನೆಲೆ ಏನು? ಹೀಗೆ ಹತ್ತಾರು ಪ್ರಶ್ನೆಗಳನ್ನು ಜನರು ಇಂಟರ್ನೆಟ್‌ನಲ್ಲಿ ಜಾಲಾಡುತ್ತಿದ್ದಾರೆ. ದಕ್ಷಿಣ ಭಾರತ ಮಾತ್ರವಲ್ಲದೆ ಉತ್ತರ ಭಾರತ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ಕೂಡ ‘ದಳಪತಿ’ಯ ರಾಜಕೀಯ ಎಂಟ್ರಿ ಬಗ್ಗೆ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.
ತಮಿಳು ನಾಡಿನಲ್ಲಿ ರಾಜಕೀಯ ಬಿಕ್ಕಟ್ಟು
ವಿಜಯ್ ಅವರ ಈ ಯಶಸ್ಸಿನ ಹಿಂದೆ ಅವರ ಬಲಿಷ್ಠ ಸಂಘಟನಾ ಶಕ್ತಿಯಿದೆ. ಮೊದಲ ಚುನಾವಣೆಯಲ್ಲೇ ದೊಡ್ಡ ಮಟ್ಟದ ಮತಗಳನ್ನು ಗಳಿಸಲು ಅವರ ಬೂತ್ ಮಟ್ಟದ ಅಭಿಮಾನಿ ಬಳಗದ ಕೆಲಸವೇ ಕಾರಣ. ಸಿನಿಮಾ ಸ್ಟಾರ್ ಆಗಿದ್ದರೂ ತಳಮಟ್ಟದಲ್ಲಿ ಸಮಾಜ ಸೇವೆ ಮಾಡುವ ಮೂಲಕ ಜನರ ಮನಗೆದ್ದ ವಿಜಯ್, ಈ ಬಾರಿ ದಾಖಲೆ ಪ್ರಮಾಣದ ಮತದಾನವಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯದ ರಾಜಕೀಯ ಬಿಕ್ಕಟ್ಟು ಯಾವಾಗ ತಿಳಿಯಾಗಲಿದೆ ಮತ್ತು ವಿಜಯ್ ಅವರು ಯಾವಾಗ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂಬುದು ಈಗ ಇಡೀ ದೇಶ ಕಾತರದಿಂದ ಕಾಯುತ್ತಿರುವ ವಿಚಾರವಾಗಿದೆ.
ಇದನ್ನೂ ಓದಿ: ಬಂಗಾಳದ ಚುಕ್ಕಾಣಿ ಹಿಡಿದ ಸುವೇಂದು ಅಧಿಕಾರಿ: ನುಸುಳುವಿಕೆ ತಡೆಗೆ ಅಮಿತ್ ಶಾ ಭರವಸೆ
