ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ ಬೆನ್ನಲ್ಲೇ, ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಸುವೇಂದು ಅಧಿಕಾರಿ ಅವರನ್ನು ಅಮಿತ್ ಶಾ (Amit Shah) ಘೋಷಿಸಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ಪಕ್ಷದ ಶಾಸಕರ ಸಭೆಯಲ್ಲಿ ಮಾತನಾಡಿದ ಅವರು, ಈ ಗೆಲುವು ಕೇವಲ ರಾಜಕೀಯ ವಿಜಯವಲ್ಲ, ಬದಲಿಗೆ ರಾಷ್ಟ್ರೀಯ ಭದ್ರತೆ ಮತ್ತು ರಾಜ್ಯದ ಆಡಳಿತ ಸುಧಾರಣೆಗೆ ಸಿಕ್ಕ ಜನಾದೇಶವಾಗಿದೆ ಎಂದು ಬಣ್ಣಿಸಿದರು.
ನುಸುಳುವಿಕೆಗೆ ಇನ್ಮೇಲೆ ಬ್ರೇಕ್
ಬಂಗಾಳದಲ್ಲಿ ದಶಕಗಳಿಂದಲೂ ರಾಷ್ಟ್ರೀಯ ಭದ್ರತೆಗೆ ದೊಡ್ಡ ಸವಾಲಾಗಿದ್ದ ಅಕ್ರಮ ನುಸುಳುವಿಕೆ ಮತ್ತು ಗೋವುಗಳ ಸಾಗಾಟಕ್ಕೆ ಇನ್ನು ಮುಂದೆ ಸಂಪೂರ್ಣವಾಗಿ ಬ್ರೇಕ್ ಬೀಳಲಿದೆ ಎಂದು ಅಮಿತ್ ಶಾ ಗುಡುಗಿದ್ದಾರೆ. “ಈ ಗೆಲುವು ನಮ್ಮ ಸಂಘಟನೆಯ ವಿಸ್ತರಣೆಯಷ್ಟೇ ಅಲ್ಲ, ದೇಶದ ಭದ್ರತಾ ವ್ಯವಸ್ಥೆಯಲ್ಲಿದ್ದ ದೊಡ್ಡ ರಂಧ್ರವನ್ನು ಮುಚ್ಚುವ ಪ್ರಯತ್ನವಾಗಿದೆ. ಇನ್ನು ಮುಂದೆ ಬಂಗಾಳದಲ್ಲಿ ಅಕ್ರಮ ನುಸುಳುವಿಕೆ ಅಸಾಧ್ಯ” ಎಂದು ಅವರು ಭರವಸೆ ನೀಡಿದರು.
ಕಳೆದ 15 ವರ್ಷಗಳಿಂದ ರಾಜ್ಯವನ್ನಾಳಿದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ಆಡಳಿತ ವ್ಯವಸ್ಥೆಯನ್ನು ರಾಜಕೀಯೀಕರಣಗೊಳಿಸಿ ರಾಜ್ಯದಲ್ಲಿ ಕ್ರಿಮಿನಲ್‌ಗಳ ಅಬ್ಬರಕ್ಕೆ ಅವಕಾಶ ನೀಡಲಾಗಿತ್ತು ಎಂದು ಆರೋಪಿಸಿದರು. ಆದರೆ ಈಗಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದ ಮತ್ತು ಅಪರಾಧ ಮುಕ್ತವಾದ ಆಡಳಿತವನ್ನು ಜನರಿಗೆ ನೀಡಲಾಗುವುದು ಎಂದು ಅವರು ವಾಗ್ದಾನ ಮಾಡಿದರು.
ಶೀಘ್ರದಲ್ಲಿ ಪ್ರಮಾಣ ವಚನ
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದ ಶಾ, ನೂತನವಾಗಿ ಆಯ್ಕೆಯಾದ ಎಲ್ಲಾ ಶಾಸಕರು ಸುವೇಂದು ಅಧಿಕಾರಿ ಅವರ ಹೆಸರನ್ನು ಸರ್ವಾನುಮತದಿಂದ ಬೆಂಬಲಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಟಿಎಂಸಿಯ 15 ವರ್ಷಗಳ ಸುದೀರ್ಘ ಆಡಳಿತ ಅಂತ್ಯಗೊಂಡಿದ್ದು, ಹೊಸ ಯುಗ ಆರಂಭವಾಗಿದೆ ಎಂದರು. ಹಲವು ವರ್ಷಗಳಿಂದ ರಾಜ್ಯದಲ್ಲಿ ಮನೆಮಾಡಿದ್ದ ಭಯದ ವಾತಾವರಣ ಮತ್ತು ರಾಜಕೀಯ ಹಿಂಸಾಚಾರದ ನಡುವೆಯೂ ಧೈರ್ಯದಿಂದ ಮತ ಚಲಾಯಿಸಿ ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಅವರು ಕೃತಜ್ಞತೆ ಸಲ್ಲಿಸಿದರು. ಶೀಘ್ರದಲ್ಲೇ ಪ್ರಮಾಣವಚನ ಸಮಾರಂಭ ನಡೆಯಲಿದ್ದು, ಬಂಗಾಳದ ಆಡಳಿತ ಶೈಲಿಯಲ್ಲಿ ದೊಡ್ಡ ಬದಲಾವಣೆಯಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: ತಮಿಳುನಾಡು ಸರ್ಕಾರ ರಚನೆ ವಿಳಂಬಕ್ಕೆ ಸ್ಟಾಲಿನ್ ಅಸಮಾಧಾನ: ರಾಜ್ಯಪಾಲರಿಗೆ ತುರ್ತು ಕ್ರಮಕ್ಕೆ ಆಗ್ರಹ
