TVK: ಕಾನೂನು ಸಮರದ ಸ್ವರೂಪದ ಪಡೆದ ಟಿವಿಕೆ ಮತ್ತು ಎಎಂಎಂಕೆ ಪಕ್ಷಗಳ ಸಂಘರ್ಷ

AMMK case against vijay tvk party

ಚೆನ್ನೈ: ನಟ ವಿಜಯ್ ನೇತೃತ್ವದ ಟಿವಿಕೆ (TVK) ಮತ್ತು ಎಎಂಎಂಕೆ ಪಕ್ಷಗಳ ನಡುವಿನ ರಾಜಕೀಯ ಸಂಘರ್ಷ ಈಗ ಕಾನೂನು ಸಮರದ ರೂಪ ಪಡೆದುಕೊಂಡಿದೆ. ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಕಸರತ್ತು ನಡೆಯುತ್ತಿರುವ ಬೆನ್ನಲ್ಲೇ, ವಿಜಯ್ ಅವರ ಪಕ್ಷದ ವಿರುದ್ಧ ಎಎಂಎಂಕೆ ಗಂಭೀರ ಆರೋಪಗಳನ್ನು ಹೊರಿಸಿ ದೂರು ನೀಡಿದೆ.

ನಕಲಿ ಪತ್ರ ಸೃಷ್ಟಿ ಆರೋಪ

ಸರ್ಕಾರ ರಚನೆಗೆ ಬೆಂಬಲ ನೀಡುವಂತೆ ಎಎಂಎಂಕೆ ಶಾಸಕ ಎಸ್. ಕಾಮರಾಜ್ ಅವರ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿಸಿ ರಾಜ್ಯಪಾಲರಿಗೆ ಸಲ್ಲಿಸಲಾಗಿದೆ ಎಂಬುದು ಎಎಂಎಂಕೆ ಮುಖ್ಯಸ್ಥ ಟಿಟಿವಿ ದಿನಕರನ್ ಅವರ ವಾದ. ಶಾಸಕ ಕಾಮರಾಜ್ ಕೂಡ ತಾವು ಯಾವುದೇ ಪತ್ರ ಬರೆದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಈ ಅಕ್ರಮದ ವಿರುದ್ಧ ಪೊಲೀಸ್ ಮೆಟ್ಟಿಲೇರಿದ್ದಾರೆ.

ಈ ವಿವಾದಕ್ಕೆ ಪ್ರತಿಯಾಗಿ ಟಿವಿಕೆ ಪಕ್ಷವು ಶಾಸಕರು ಬೆಂಬಲ ಸೂಚಿಸುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿತ್ತು. ಆದರೆ, ಇದು ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ ನಕಲಿ ವಿಡಿಯೋ ಎಂದು ದಿನಕರನ್ ಕಿಡಿಕಾರಿದ್ದಾರೆ. ಈ ಬೆಳವಣಿಗೆಗಳು ರಾಜ್ಯದ ರಾಜಕೀಯ ಬಿಕ್ಕಟ್ಟನ್ನು ಮತ್ತಷ್ಟು ಸಂಕೀರ್ಣಗೊಳಿಸಿವೆ.

ಇಷ್ಟೆಲ್ಲಾ ಗೊಂದಲಗಳ ನಡುವೆಯೂ ದಳಪತಿ ವಿಜಯ್ ಅವರ ಜನಪ್ರಿಯತೆ ಮಾತ್ರ ಕುಂದಿಲ್ಲ. ಕಳೆದ ಒಂದು ವಾರದಲ್ಲಿ ಗೂಗಲ್ ಸರ್ಚ್‌ನಲ್ಲಿ ವಿಜಯ್ ಅವರ ಕುರಿತಾದ ಮಾಹಿತಿಗಾಗಿ ಇಡೀ ದೇಶವೇ ಮುಗಿಬಿದ್ದಿದೆ. ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ? ವಿಜಯ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆಯೇ? ಎಂಬ ಪ್ರಶ್ನೆಗಳ ಬಗ್ಗೆ ಜನರು ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ಈ ರಾಜಕೀಯ ಜಿದ್ದಾಜಿದ್ದಿ ಈಗ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: ತಮಿಳುನಾಡು ರಾಜಕೀಯ ಹೈಡ್ರಾಮಾ ನಡುವೆ ಗೂಗಲ್‌ನಲ್ಲಿ ವಿಜಯ್‌ ಟ್ರೆಂಡಿಂಗ್

Leave a Reply

Your email address will not be published. Required fields are marked *