ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ನ್ಯಾಯಾಲಯದ ವಿಚಾರಣೆಯಲ್ಲಿ ಆರೋಪಿಗಳ ಖುದ್ದು ಹಾಜರಾತಿ ಮತ್ತು ಮಾಫಿ ಸಾಕ್ಷಿ ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ (ಆಗಸ್ಟ್ 12) ನಗರದ ಸಿಸಿಎಚ್ 59 ನ್ಯಾಯಾಲಯದಲ್ಲಿ ತೀವ್ರ ಹಗ್ಗಜಗ್ಗಾಟ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್ (Actor Darshan) ಹಾಗೂ ಪವಿತ್ರಾ ಗೌಡ ಅವರು ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ (ವಿಸಿ) ಮೂಲಕ ವಿಚಾರಣೆಗೆ ಹಾಜರಾಗಿದ್ದರೆ, ಉಳಿದ ಆರೋಪಿಗಳನ್ನು ಖುದ್ದಾಗಿ ಕೋರ್ಟ್ಗೆ ಕರೆತರಲಾಗಿತ್ತು.
ದರ್ಶನ್ ಬಂದರೆ ಉಸಿರಾಡಲು ಕಷ್ಟ ಎಂದ ಪ್ರಾಸಿಕ್ಯೂಷನ್ ಪ್ರಕರಣದ 19ನೇ ಸಾಕ್ಷಿಯ ಪಾಟೀಸವಾಲು ನಡೆಯುತ್ತಿರುವುದರಿಂದ ನಟ ದರ್ಶನ್ ಅವರನ್ನು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಅನುಮತಿ ನೀಡಬೇಕು ಎಂದು ಅವರ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅರ್ಜಿ ಸಲ್ಲಿಸಿದ್ದರು. ಈ ಮನವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ (ಎಸ್ಪಿಪಿ) ಪ್ರಸನ್ನ ಕುಮಾರ್, “ಪ್ರಕರಣದ ಪ್ರಮುಖ ಸಾಕ್ಷಿಗಳ ವಿಚಾರಣೆ ನಡೆಯುತ್ತಿದೆ. ದರ್ಶನ್ ಅವರನ್ನು ನ್ಯಾಯಾಲಯಕ್ಕೆ ಕರೆತಂದರೆ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸುತ್ತಾರೆ. ಕಳೆದ ಬಾರಿ ಅವರನ್ನು ಕೋರ್ಟ್ಗೆ ತಂದಾಗ ಇಡೀ ಆವರಣ ಕಿಕ್ಕಿರಿದು ತುಂಬಿ ಯಾರಿಗೂ ಉಸಿರಾಡಲು ಜಾಗವಿಲ್ಲದಂತಹ ಸ್ಥಿತಿ ನಿರ್ಮಾಣವಾಗಿತ್ತು. ಕಾನೂನು ಸುವ್ಯವಸ್ಥೆ ಮತ್ತು ಭದ್ರತೆಯ ಹಿತದೃಷ್ಟಿಯಿಂದ ದರ್ಶನ್ ಖುದ್ದು ಹಾಜರಾತಿಗೆ ಅವಕಾಶ ನೀಡಬಾರದು” ಎಂದು ಬಲವಾಗಿ ವಾದಿಸಿದರು.
ಸೆಲೆಬ್ರಿಟಿ ಎಂದು ಹಕ್ಕು ನಿರಾಕರಿಸಬೇಡಿ: ಹಷ್ಮತ್ ಪಾಷಾ ಕೌಂಟರ್ ಪ್ರಾಸಿಕ್ಯೂಷನ್ ವಾದಕ್ಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿವಾದ ಮಂಡಿಸಿದ ಹಷ್ಮತ್ ಪಾಷಾ, “ನ್ಯಾಯಯುತ ಮತ್ತು ಪಾರದರ್ಶಕ ವಿಚಾರಣೆಯ ಹಕ್ಕು ಪ್ರತಿಯೊಬ್ಬ ಆರೋಪಿಗೂ ಇದೆ. ಸಾಕ್ಷಿಗಳು ನ್ಯಾಯಾಲಯದಲ್ಲಿ ಹೇಳಿಕೆ ನೀಡುವಾಗ, ತಕ್ಷಣವೇ ಆರೋಪಿಯಿಂದ ಅಗತ್ಯ ಮಾಹಿತಿ ಪಡೆದು ಕ್ರಾಸ್ ಎಕ್ಸಾಮಿನೇಷನ್ (ಮರು ವಿಚಾರಣೆ) ಮಾಡಬೇಕಾಗುತ್ತದೆ. ಜೈಲಿಗೆ ಹೋಗಿ ಭೇಟಿಯಾದಾಗ ಇವೆಲ್ಲವನ್ನೂ ಮುಂಚಿತವಾಗಿ ಚರ್ಚಿಸಲು ಸಾಧ್ಯವಿಲ್ಲ. ಕೇವಲ ಸೆಲೆಬ್ರಿಟಿ ಎಂಬ ಕಾರಣಕ್ಕೆ ಅವರ ಈ ಕಾನೂನಾತ್ಮಕ ಹಕ್ಕನ್ನು ಕಸಿದುಕೊಳ್ಳುವುದು ಸರಿಯಲ್ಲ” ಎಂದು ಕಿಡಿಕಾರಿದರು.
ಮುಂದುವರಿದು ವಾದಿಸಿದ ಅವರು, “ವಿಡಿಯೋ ಕಾನ್ಫರೆನ್ಸ್ನಲ್ಲಿ ಆರೋಪಿ ಕೇವಲ ವಿಚಾರಣೆಯನ್ನು ನೋಡಬಹುದೇ ಹೊರತು ತನ್ನ ವಕೀಲರೊಂದಿಗೆ ರಹಸ್ಯವಾಗಿ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ. ಆರೋಪಿ ಜೈಲಿನ ಕಸ್ಟಡಿಯಲ್ಲಿದ್ದಾಗ ವಿಚಾರಣೆಯ ವೇಳೆ ಖುದ್ದು ಹಾಜರಿರುವುದು ಅಗತ್ಯ ಎಂದು ಕಾನೂನಿನಲ್ಲೇ ಇದೆ. ಪ್ರಾಸಿಕ್ಯೂಷನ್ಗೆ ಭದ್ರತೆಯ ಆತಂಕವಿದ್ದರೆ ಅದಕ್ಕೆ ಸೂಕ್ತ ಪೊಲೀಸ್ ವ್ಯವಸ್ಥೆ ಮಾಡಿಕೊಳ್ಳಲಿ” ಎಂದು ಪಟ್ಟು ಹಿಡಿದರು.
ಪ್ರದೋಶ್ ಮಾಫಿ ಸಾಕ್ಷಿಗೆ ಇತರ ಆರೋಪಿಗಳ ಆಕ್ಷೇಪ ನಿರಾಕರಣೆ ಇದೇ ವೇಳೆ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಪ್ರದೋಶ್ ತಾನು ಮಾಫಿ ಸಾಕ್ಷಿ (ಅಪ್ರೂವರ್) ಆಗುವುದಾಗಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಈಗಾಗಲೇ ಎರಡು ಬಾರಿ ರಹಸ್ಯ ವಿಚಾರಣೆ ನಡೆದಿದೆ. ಈ ನಿರ್ಧಾರಕ್ಕೆ ದರ್ಶನ್ ಸೇರಿದಂತೆ ಉಳಿದ ಸಹ ಆರೋಪಿಗಳು ಆಕ್ಷೇಪಣೆ ಸಲ್ಲಿಸಲು ಮುಂದಾಗಿದ್ದರು. ಆದರೆ, ಸೆಷನ್ಸ್ ನ್ಯಾಯಾಲಯವು ಇತರ ಆರೋಪಿಗಳಿಗೆ ಮಾಫಿ ಸಾಕ್ಷಿ ಪ್ರಕ್ರಿಯೆಯ ವಿರುದ್ಧ ಆಕ್ಷೇಪ ಎತ್ತಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿ ಅವರ ಮನವಿಯನ್ನು ತಳ್ಳಿಹಾಕಿದೆ.
ಇದನ್ನೂ ಓದಿ: ಸ್ಯಾಂಡಲ್ವುಡ್ ಮಾದರಿ ಜೋಡಿ ಯಶ್-ರಾಧಿಕಾ ನಿಶ್ಚಿತಾರ್ಥಕ್ಕೆ ಹತ್ತು ವರ್ಷ: ಹಳೆಯ ನೆನಪು ಹಂಚಿಕೊಂಡ ನಟಿ
