ನವದೆಹಲಿ: ತಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಹಾಗೂ ತಮ್ಮದೇ ಹೋಲಿಕೆಯ ತಂತ್ರಜ್ಞಾನ ಆಧಾರಿತ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ ಎಂದು ಆರೋಪಿಸಿ ಬಾಲಿವುಡ್ ನಟಿ ಜಾನ್ವಿ ಕಪೂರ್ (Janhvi Kapoor) ಸಲ್ಲಿಸಿದ್ದ ‘ವ್ಯಕ್ತಿತ್ವದ ಹಕ್ಕು’ (Personality Rights) ರಕ್ಷಣೆ ಕೋರಿದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನಡೆಸಿದೆ. ಇಂಟರ್ನೆಟ್ನಲ್ಲಿ ಜಾನ್ವಿ ಕಪೂರ್ ಅವರ ಹೆಸರಿನಲ್ಲಿರುವ ಸಾವಿರಾರು ಲಿಂಕ್ಗಳನ್ನು ಏಕಾಏಕಿ ನಿಷೇಧಿಸಲು ಹೈಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದ್ದು, ಕೇವಲ ಅಶ್ಲೀಲ ಮತ್ತು ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗಿರುವ ಲಿಂಕ್ಗಳನ್ನು ಮಾತ್ರ ಪಟ್ಟಿ ಮಾಡಿ ನೀಡುವಂತೆ ನಟಿಗೆ ಸೂಚನೆ ನೀಡಿದೆ.
ನಟಿಯ ಹೆಸರಿನಲ್ಲಿ ನಕಲಿ ಖಾತೆ
ನ್ಯಾಯಾಲಯದಲ್ಲಿ ಜಾನ್ವಿ ಕಪೂರ್ ಪರ ವಕೀಲರು ವಾದ ಮಂಡಿಸಿ, ನಟಿಯ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಲಾಗುತ್ತಿದೆ, ಎಐ ತಂತ್ರಜ್ಞಾನದ ಮೂಲಕ ಅಶ್ಲೀಲ ಚಿತ್ರಗಳನ್ನು ತಯಾರಿಸಿ ಹರಿಬಿಡಲಾಗುತ್ತಿದೆ ಮತ್ತು ಅವರ ಫೋಟೋಗಳನ್ನು ತಪ್ಪು ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ ಎಂದು ಕೋರ್ಟ್ ಗಮನಕ್ಕೆ ತಂದರು. ಅಲ್ಲದೆ, ಜಾನ್ವಿ ಕಪೂರ್ ಹೆಸರಿರುವ ಸಾವಿರಾರು ಸೋಶಿಯಲ್ ಮೀಡಿಯಾ ಲಿಂಕ್ಗಳು ಹಾಗೂ ಅಭಿಮಾನಿಗಳ ಪೇಜ್ಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಆದರೆ ಈ ರೀತಿಯ ವ್ಯಾಪಕ ನಿಷೇಧದ ಮನವಿಯನ್ನು ನ್ಯಾಯಮೂರ್ತಿ ಭಾಂಬ್ಹಾನಿ ಅವರಿದ್ದ ಪೀಠವು ತಳ್ಳಿಹಾಕಿತು. ಇಂಟರ್ನೆಟ್ನಲ್ಲಿ ನಟಿಯ ಹೆಸರಿರುವ ಸಾವಿರಾರು ಲಿಂಕ್ಗಳಲ್ಲಿ ಅಭಿಮಾನಿಗಳ ಪುಟಗಳೂ (Fan Pages) ಸೇರಿವೆ. ಅಭಿಮಾನಿಗಳ ಪುಟಗಳು ಸೆಲೆಬ್ರಿಟಿಗಳನ್ನು ಬೆಂಬಲಿಸಬಹುದು, ಟೀಕಿಸಬಹುದು ಅಥವಾ ಕೇವಲ ಅಭಿಮಾನದಿಂದಲೂ ಸೃಷ್ಟಿಸಿರಬಹುದು. ಹೀಗಿರುವಾಗ ಎಲ್ಲ ಲಿಂಕ್ಗಳನ್ನು ಒಂದೇ ರೀತಿ ನೋಡಿ ಬ್ಯಾನ್ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು. ಸಿನಿಮಾ, ಜಾಹೀರಾತು ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ಸೆಲೆಬ್ರಿಟಿಗಳು ಈಗಾಗಲೇ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿರುತ್ತಾರೆ. ಆದ್ದರಿಂದ ಅವರ ಫೋಟೋ ಬಳಸಿದ ತಕ್ಷಣವೇ ಅದು ಹಕ್ಕುಗಳ ಉಲ್ಲಂಘನೆ ಎಂದು ಹೇಳಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಮೆಟಾ ಸಂಸ್ಥೆಯ ವಕೀಲರು ಹೇಳಿದ್ದೇನು?
ಇದೇ ವೇಳೆ ಮೆಟಾ ಸಂಸ್ಥೆಯ ಪರ ವಕೀಲ ವರುಣ್ ಪಾಠಕ್ ವಾದ ಮಂಡಿಸಿ, ಸಾವಿರಾರು ಲಿಂಕ್ಗಳನ್ನು ಬ್ಲಾಕ್ ಮಾಡುವುದು ಪ್ರಾಯೋಗಿಕವಾಗಿ ಅಸಾಧ್ಯ. ಇದರಲ್ಲಿ ಯಾವುದೇ ಹಾನಿ ಮಾಡದ ಸಾಮಾನ್ಯ ಲಿಂಕ್ಗಳೂ ಇವೆ ಮತ್ತು ಎಐ ಮೂಲಕ ಚಿತ್ರಗಳನ್ನು ರಚಿಸುವುದು ಕಾನೂನುಬಾಹಿರವೇನಲ್ಲ. ಹೀಗಾಗಿ ಪ್ರತಿಯೊಂದು ಲಿಂಕ್ ಅನ್ನು ಮ್ಯಾನುಯಲ್ ಆಗಿ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಲು ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಸಾಧ್ಯವಿಲ್ಲ ಎಂದು ಕೋರ್ಟ್ಗೆ ತಿಳಿಸಿದರು.
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು, ಇತ್ತೀಚಿನ ದಿನಗಳಲ್ಲಿ ಈ ವ್ಯಕ್ತಿತ್ವದ ಹಕ್ಕುಗಳ (Personality Rights) ವ್ಯಾಪ್ತಿ ಮಿತಿ ಮೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿತು. ಒಳ್ಳೆಯ ಉದ್ದೇಶದಿಂದ ಆರಂಭವಾದ ಈ ಕಾನೂನನ್ನು ಅಭಿವ್ಯಕ್ತಿ ಸ್ವಾತಂತ್ರ್ಯ, ನ್ಯಾಯಸಮ್ಮತ ವಿಮರ್ಶೆ ಮತ್ತು ಅಭಿಮಾನಿಗಳ ಚಟುವಟಿಕೆಗಳನ್ನು ಹತ್ತಿಕ್ಕಲು ಬಳಸಬಾರದು ಎಂದು ಎಚ್ಚರಿಸಿತು.
ಆದಾಗ್ಯೂ, ನಟಿಯ ಹೆಸರಿನಲ್ಲಿ ಸೃಷ್ಟಿಸಲಾಗಿರುವ ಅಶ್ಲೀಲ ಮತ್ತು ಪೋರ್ನೋಗ್ರಫಿ ಕಂಟೆಂಟ್ಗಳನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಡಿಜಿಟಲ್ ಪ್ಲಾಟ್ಫಾರ್ಮ್ಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಕೇವಲ ಅಶ್ಲೀಲವಾಗಿರುವ, ನಟಿಯ ಮುಖ ಮತ್ತು ಹೆಸರನ್ನು ಬಳಸಿ ಕಾನೂನುಬಾಹಿರವಾಗಿ ಹಣ ಗಳಿಸುತ್ತಿರುವ ಹಾಗೂ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಲಿಂಕ್ಗಳನ್ನು ಮಾತ್ರ ಒಂದು ಕೋಷ್ಟಕದ (Tabular Form) ರೂಪದಲ್ಲಿ ಪ್ರತ್ಯೇಕಿಸಿ ನೀಡುವಂತೆ ಜಾನ್ವಿ ಕಪೂರ್ ಪರ ವಕೀಲರಿಗೆ ಹೈಕೋರ್ಟ್ ಸೂಚಿಸಿದೆ. ಅಂತಹ ನಿರ್ದಿಷ್ಟ ಲಿಂಕ್ಗಳ ವಿರುದ್ಧ ಕ್ರಮ ಕೈಗೊಳ್ಳಲು ಪರಿಗಣಿಸುವುದಾಗಿ ತಿಳಿಸಿರುವ ಕೋರ್ಟ್, ವಿಚಾರಣೆಯನ್ನು ಆಗಸ್ಟ್ 17ಕ್ಕೆ ಮುಂದೂಡಿದೆ.
ಇದನ್ನೂ ಓದಿ: ದರ್ಶನ್ ಖುದ್ದು ಹಾಜರಾತಿಗೆ ಎಸ್ಪಿಪಿ ಆಕ್ಷೇಪ, ಕೋರ್ಟ್ನಲ್ಲಿ ವಕೀಲ ಹಷ್ಮತ್ ಪಾಷಾ ವಾಗ್ವಾದ!
