Operation Sindoor: ಉಗ್ರರ ರಕ್ಷಣೆಗೆ ನಿಂತ ಚೀನಾಕ್ಕೆ ಭಾರತದ ಛೀಮಾರಿ: ‘ಜವಾಬ್ದಾರಿಯುತ ದೇಶಗಳ ನಡವಳಿಕೆ ಹೀಗಿರಬಾರದು’ ಎಂದ ವಿದೇಶಾಂಗ ಇಲಾಖೆ!

india gives strong warning to china regarding Operation Sindoor

ನವದೆಹಲಿ: ಕಳೆದ ವರ್ಷ ನಡೆದ ‘ಆಪರೇಷನ್ ಸಿಂಧೂರ್’ (Operation Sindoor) ಕಾರ್ಯಾಚರಣೆಯ ವೇಳೆ ಪಾಕಿಸ್ತಾನಕ್ಕೆ ಚೀನಾ ತಾಂತ್ರಿಕ ನೆರವು ನೀಡಿದೆ ಎಂಬ ಮಾಹಿತಿ ಹೊರಬರುತ್ತಿದ್ದಂತೆಯೇ ಭಾರತವು ಚೀನಾಕ್ಕೆ ಕಟು ಶಬ್ದಗಳಲ್ಲಿ ಎಚ್ಚರಿಕೆ ನೀಡಿದೆ. “ತಮ್ಮನ್ನು ತಾವು ಜವಾಬ್ದಾರಿಯುತ ರಾಷ್ಟ್ರಗಳೆಂದು ಕರೆದುಕೊಳ್ಳುವವರು, ಭಯೋತ್ಪಾದನೆಯನ್ನು ಬೆಂಬಲಿಸುವ ಇಂತಹ ಕ್ರಮಗಳು ತಮ್ಮ ಜಾಗತಿಕ ಸ್ಥಾನಮಾನದ ಮೇಲೆ ಎಂತಹ ಪರಿಣಾಮ ಬೀರಬಹುದು ಎಂಬುದನ್ನು ಯೋಚಿಸಲಿ” ಎಂದು ಭಾರತ ತಿರುಗೇಟು ನೀಡಿದೆ.

ಏನಿದು ಚೀನಾದ ಗುಪ್ತ ಕಾರ್ಯಾಚರಣೆ?

ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲು ‘ಆಪರೇಷನ್ ಸಿಂಧೂರ್’ ನಡೆಸಿತ್ತು. ಈ ಸಂಘರ್ಷದ ವೇಳೆ ಪಾಕಿಸ್ತಾನದ ವಾಯುನೆಲೆಗಳನ್ನು ರಕ್ಷಿಸಲು ಮತ್ತು ತಾಂತ್ರಿಕ ಬೆಂಬಲ ನೀಡಲು ಚೀನಾ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಸಹಾಯ ಮಾಡಿದ್ದರು ಎಂದು ಇತ್ತೀಚಿನ ವರದಿಗಳು ತಿಳಿಸಿವೆ. ಸ್ವತಃ ಚೀನಾದ ಅಧಿಕಾರಿಯೊಬ್ಬರೇ ಈ ತಾಂತ್ರಿಕ ಹಸ್ತಕ್ಷೇಪವನ್ನು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಭಾರತವನ್ನು ಕೆರಳಿಸಿದೆ.

ಚೀನಾಕ್ಕೆ ಚಾಟಿ ಬೀಸಿದ ವಿದೇಶಾಂಗ ಇಲಾಖೆ

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಈ ಕುರಿತು ಪ್ರತಿಕ್ರಿಯಿಸಿದ್ದು, “ಆಪರೇಷನ್ ಸಿಂಧೂರ್ ಎಂಬುದು ನಮ್ಮ ದೇಶದ ಮೇಲೆ ನಡೆದ ದಾಳಿಗೆ ನೀಡಿದ ವ್ಯವಸ್ಥಿತ ಮತ್ತು ನಿಖರ ಉತ್ತರವಾಗಿತ್ತು. ಭಯೋತ್ಪಾದನೆಯ ಮೂಲಸೌಕರ್ಯಗಳನ್ನು ರಕ್ಷಿಸಲು ಮುಂದಾಗುವುದು ಯಾವುದೇ ನಾಗರಿಕ ರಾಷ್ಟ್ರಕ್ಕೆ ಶೋಭೆ ತರುವುದಿಲ್ಲ” ಎಂದು ನೇರವಾಗಿಯೇ ಚೀನಾಕ್ಕೆ ಚಾಟಿ ಬೀಸಿದ್ದಾರೆ.

ಭಾರತದ ರಕ್ಷಣಾ ನೀತಿಯಲ್ಲಿ ಮಹತ್ವದ ಹೆಜ್ಜೆ

ಭಾರತವು ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳು ಮತ್ತು 11 ಏರ್‌ಬೇಸ್‌ಗಳನ್ನು ಧ್ವಂಸಗೊಳಿಸುವ ಮೂಲಕ ತನ್ನ ಶಕ್ತಿ ಪ್ರದರ್ಶನ ಮಾಡಿತ್ತು. ಈ ಕಾರ್ಯಾಚರಣೆಯ ಯಶಸ್ಸು ಭಾರತದ ರಕ್ಷಣಾ ನೀತಿಯಲ್ಲಿ ಒಂದು ಮೈಲಿಗಲ್ಲಾಗಿದೆ. ಆದರೆ, ಜಾಗತಿಕವಾಗಿ ಭಯೋತ್ಪಾದನೆಯ ವಿರುದ್ಧ ಮಾತನಾಡುವ ಚೀನಾ, ತೆರೆಮರೆಯಲ್ಲಿ ಪಾಕಿಸ್ತಾನದ ಉಗ್ರರ ರಕ್ಷಣೆಗೆ ನಿಂತಿರುವುದು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜಾಗತಿಕ ಶಾಂತಿ ಬಯಸುವ ದೇಶಗಳು ಇಂತಹ ದ್ವಂದ್ವ ನೀತಿಯನ್ನು ಬಿಡಬೇಕು ಎಂಬುದು ಭಾರತದ ಸ್ಪಷ್ಟ ಸಂದೇಶವಾಗಿದೆ.

ಇದನ್ನೂ ಓದಿ: ನೀಟ್ ಪರೀಕ್ಷೆ ರದ್ದು: ನಾಸಿಕ್‌ನಿಂದ ಹಬ್ಬಿತ್ತು ಪೇಪರ್ ಲೀಕ್ ದಂಧೆ, ಆರು ರಾಜ್ಯಗಳಲ್ಲಿ ಸಿಬಿಐ ಬಲೆ!

Leave a Reply

Your email address will not be published. Required fields are marked *