TOP NEWS

Citizenship: “ನಾನು ಭಾರತೀಯಳಾಗಿಯೇ ಸಾಯಬೇಕು”: ತಾಯ್ನಾಡಿನ ಮಮಕಾರಕ್ಕೆ ಒಲಿದು ಅಮೆರಿಕ ಪೌರತ್ವ ತೊರೆದ 94 ವರ್ಷದ ವೃದ್ಧೆ!

94 years old want Indian Citizenship now

ಬಾಪಟ್ಲಾ (ಆಂಧ್ರಪ್ರದೇಶ): ಇಂದಿನ ದಿನಗಳಲ್ಲಿ ಉದ್ಯೋಗ ಅಥವಾ ಉನ್ನತ ಜೀವನ ಮಟ್ಟಕ್ಕಾಗಿ ಅಮೆರಿಕ, ಕೆನಡಾದಂತಹ ವಿದೇಶಗಳಿಗೆ ವಲಸೆ ಹೋಗುವುದು ಮತ್ತು ಅಲ್ಲಿನ ಪೌರತ್ವ (Citizenship) ಪಡೆಯುವುದು ದೊಡ್ಡ ಸಾಧನೆ ಎಂದು ಅನೇಕರು ಭಾವಿಸುತ್ತಾರೆ. ಆದರೆ, ಶತಾಯುಷಿಯ ಹತ್ತಿರವಿರುವ ವೃದ್ಧೆಯೊಬ್ಬರು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ತಾಯ್ನಾಡಿನ ಗುರುತಿಗಿಂತ ದೊಡ್ಡದು ಯಾವುದೂ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. “ನನ್ನ ಕೊನೆಯ ದಿನಗಳನ್ನು ನಾನು ಭಾರತೀಯಳಾಗಿಯೇ ಕಳೆಯಬೇಕು ಮತ್ತು ಹೆತ್ತ ಕರುಳಿನ ಮಣ್ಣಿನಲ್ಲೇ ನನ್ನ ಅಂತ್ಯಕ್ರಿಯೆ ನಡೆಯಬೇಕು” ಎಂದು ಆಶಿಸಿರುವ ೯೪ ವರ್ಷದ ಕೊಂಡ್ರಗುಂಟ ಮಹಾಲಕ್ಷ್ಮಮ್ಮ ಎಂಬ ವೃದ್ಧೆ, ತಮ್ಮ ಅಮೆರಿಕದ ಪೌರತ್ವವನ್ನು ಸ್ವಯಂಪ್ರೇರಿತರಾಗಿ ತ್ಯಜಿಸಿ ಮತ್ತೆ ಭಾರತದ ಪೌರತ್ವ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಎರಡು ದಶಕಗಳ ಕಾಲ ಅಮೆರಿಕಾದಲ್ಲಿದ್ದ ವೃದ್ಧೆ

ಮೂಲತಃ ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ಚಿನಗಂಜಾಂ ಮಂಡಲದ ಚಿಂತಗುಂಪಲ ಗ್ರಾಮದವರಾದ ಮಹಾಲಕ್ಷ್ಮಮ್ಮ, ತಮ್ಮ ಪತಿ ನಾಗಭೂಷಣಂ ಅವರ ನಿಧನದ ನಂತರ ಅಮೆರಿಕದಲ್ಲಿದ್ದ ಮಗ, ಪ್ರಸಿದ್ಧ ಕ್ಯಾನ್ಸರ್ ರೋಗ ತಜ್ಞ (Oncologist) ಡಾ. ಕೆ. ಬುಚ್ಚಯ್ಯ ಚೌಧರಿ ಅವರ ಬಳಿಗೆ ತೆರಳಿದ್ದರು. ಅಲ್ಲಿ ಸುಮಾರು ಎರಡು ದಶಕಗಳ ಕಾಲ ನೆಲೆಸಿದ್ದ ಅವರು ಜುಲೈ ೨೦೦೦ ರಲ್ಲಿ ಅಮೆರಿಕದ ಪೌರತ್ವವನ್ನೂ ಪಡೆದುಕೊಂಡಿದ್ದರು. ಆದರೆ, ವಯಸ್ಸಾಗುತ್ತಿದ್ದಂತೆ ತಾಯ್ನಾಡಿನ ನೆನಪು ತೀವ್ರವಾಗಿ ಕಾಡಿದ ಹಿನ್ನೆಲೆಯಲ್ಲಿ, ಕಳೆದ ೨೦೧೮ ರಲ್ಲಿಯೇ ಅಮೆರಿಕದಿಂದ ಭಾರತಕ್ಕೆ ವಾಪಸ್ ಬಂದು ತಮ್ಮ ಹಳೆಯ ಹಳ್ಳಿಯಲ್ಲೇ ವಾಸಿಸುತ್ತಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾವುಕ ಕ್ಷಣ: ತೆಲುಗಿನಲ್ಲಿ ಪ್ರಮಾಣ ವಚನ ಸ್ವೀಕಾರ

ಪ್ರಸ್ತುತ ಒಸಿಐ (OCI – ಓವರ್‌ಸೀಸ್ ಸಿಟಿಜನ್ ಆಫ್ ಇಂಡಿಯಾ) ಕಾರ್ಡ್ ಹೊಂದಿರುವ ಮಹಾಲಕ್ಷ್ಮಮ್ಮ, ಭಾರತದ ಕಾನೂನುಬದ್ಧ ಪೌರತ್ವ ಮರುಸ್ಥಾಪನೆಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಈ ಪ್ರಕ್ರಿಯೆಯ ಭಾಗವಾಗಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ವಿ. ವಿನೋದ್ ಕುಮಾರ್ ಅವರ ಸಮ್ಮುಖದಲ್ಲಿ ವಿಶೇಷ ಸಭೆ ನಡೆಯಿತು. ವಯೋಸಹಜ ಅಶಕ್ತತೆಯ ನಡುವೆಯೂ ಮಗನ ಸಹಾಯದೊಂದಿಗೆ ಕಚೇರಿಗೆ ಆಗಮಿಸಿದ್ದ ವೃದ್ಧೆಗೆ ಅಧಿಕಾರಿಗಳು ತೆಲುಗು ಭಾಷೆಯಲ್ಲಿದ್ದ ನಿಷ್ಠಾವಂತ ಪ್ರಮಾಣ ವಚನದ ಪ್ರತಿಯನ್ನು ನೀಡಿದರು. ಅಧಿಕಾರಿಗಳ ಮಾರ್ಗದರ್ಶನದಂತೆ ತೆಲುಗಿನಲ್ಲೇ ಭಾರತದ ಸಂವಿಧಾನಕ್ಕೆ ಬದ್ಧರಾಗಿರುವುದಾಗಿ ಹಾಗೂ ನಾಗರಿಕ ಕರ್ತವ್ಯಗಳನ್ನು ಪಾಲಿಸುವುದಾಗಿ ಅವರು ಗಟ್ಟಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಅಧಿಕೃತ ದಾಖಲೆಗಳ ಪರಿಶೀಲನೆ ಮತ್ತು ಸಹಿ ಪ್ರಕ್ರಿಯೆ ಮುಗಿದ ನಂತರ, ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಪೌರತ್ವದ ಪ್ರಮಾಣ ವಚನ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಘೋಷಿಸಿದರು. ಈ ಸಂದರ್ಭದಲ್ಲಿದ್ದ ಅಧಿಕಾರಿಗಳೊಂದಿಗೆ ಮಾತನಾಡಿದ ಮಹಾಲಕ್ಷ್ಮಮ್ಮ, “ನನ್ನ ಬದುಕಿನ ಕೊನೆಯ ದಿನಗಳು ಹತ್ತಿರ ಬರುತ್ತಿವೆ ಎನಿಸುತ್ತಿದೆ. ಅದಕ್ಕಾಗಿಯೇ ನನ್ನ ದೇಶದ ಮಣ್ಣಿನಲ್ಲಿ ಭಾರತೀಯಳಾಗಿ ಸಾಯಬೇಕು ಎನ್ನುವುದು ನನ್ನ ಕೊನೆಯ ಆಸೆ” ಎಂದು ಭಾವುಕರಾಗಿ ನುಡಿದರು. ಈ ದೃಶ್ಯ ಅಲ್ಲಿದ್ದ ಜಿಲ್ಲಾಧಿಕಾರಿ ಸೇರಿದಂತೆ ಇಡೀ ಸಿಬ್ಬಂದಿಯ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿತ್ತು.

ಸದ್ಯ ವೃದ್ಧೆಯ ಸಂಪೂರ್ಣ ವರದಿ ಹಾಗೂ ಅರ್ಜಿಯನ್ನು ಮುಂದಿನ ಕಾನೂನು ಅನುಮೋದನೆಗಾಗಿ ಕೇಂದ್ರ ಗೃಹ ಸಚಿವಾಲಯಕ್ಕೆ (Ministry of Home Affairs) ಕಳುಹಿಸಿಕೊಡಲಾಗಿದೆ. ಭಾರತದ ಪೌರತ್ವ ಕಾಯ್ದೆಗಳ ಪ್ರಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಶೀಘ್ರವಾಗಿ ತೆಗೆದುಕೊಳ್ಳಲಾಗುತ್ತಿದ್ದು, ಕೇಂದ್ರ ಸರ್ಕಾರದಿಂದ ಒಪ್ಪಿಗೆ ಸಿಗುತ್ತಿದ್ದಂತೆ ಇವರಿಗೆ ಅಧಿಕೃತವಾಗಿ ಭಾರತದ ಪೌರತ್ವ ಸಿಗಲಿದೆ ಎಂದು ಜಿಲ್ಲಾಧಿಕಾರಿ ವಿನೋದ್ ಕುಮಾರ್ ತಿಳಿಸಿದ್ದಾರೆ. ವಿದೇಶದ ಐಷಾರಾಮಿ ಬದುಕನ್ನು ಬಿಟ್ಟು ತಾಯ್ನಾಡಿನ ಮಣ್ಣಿಗಾಗಿ ಹಂಬಲಿಸಿದ ಈ ಹಿರಿಯ ಜೀವದ ದೇಶಪ್ರೇಮಕ್ಕೆ ಸದ್ಯ ಎಲ್ಲೆಡೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಶಿಕ್ಷಣ ಸಚಿವ ಪ್ರಧಾನ್‌ಗೆ ಸಹಿ ಹಾಕಿ ಕೊಡಿ, ನಾವೇ ರಾಜೀನಾಮೆ ಪತ್ರ ಕಳುಹಿಸುತ್ತೇವೆ: ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ

Leave a Reply

Your email address will not be published. Required fields are marked *