TOP NEWS

CJP: ಶಿಕ್ಷಣ ಸಚಿವ ಪ್ರಧಾನ್‌ಗೆ ಸಹಿ ಹಾಕಿ ಕೊಡಿ, ನಾವೇ ರಾಜೀನಾಮೆ ಪತ್ರ ಕಳುಹಿಸುತ್ತೇವೆ: ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ

CJP protest day 7 wishes Dharmendra Pradhan on birthday and asks gifts

ನವದೆಹಲಿ: ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿರುವ ‘ನೀಟ್’ (NEET) ಪರೀಕ್ಷಾ ಅಕ್ರಮ ಮತ್ತು ಪೇಪರ್ ಲೀಕ್ ಹಗರಣವನ್ನು ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಶುಕ್ರವಾರ7 ನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದಿಪ್ಕೆ, ಶುಕ್ರವಾರ ಸಚಿವರ ಜನ್ಮದಿನದಂದೇ ಅವರಿಗೆ ವಿನೂತನವಾಗಿ ಟಾಂಗ್ ನೀಡಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿದ್ದ ವೈಟ್‌ಬೋರ್ಡ್ ಮೇಲೆ “ಹ್ಯಾಪಿ ಬರ್ತ್‌ಡೇ ಪ್ರಧಾನ್, ದಯವಿಟ್ಟು ರಾಜೀನಾಮೆ ಕೊಡಿ” ಎಂದು ಬರೆಯುವ ಮೂಲಕ ಸಚಿವರಿಗೆ ನೇರ ಸಂದೇಶ ರವಾನಿಸಿದ್ದಾರೆ. ಈ ವೇಳೆ ಅವರ ಬೆಂಬಲಿಗರು ಹಿನ್ನೆಲೆಯಲ್ಲಿ ಜನ್ಮದಿನದ ಗೀತೆಯನ್ನು ಹಾಡಿ ಆಕ್ರೋಶ ಹೊರಹಾಕಿದ್ದಾರೆ.

ಈ ವೇಳೆ ಮಾತನಾಡಿದ ಅಭಿಜೀತ್ ದಿಪ್ಕೆ, “ಧರ್ಮೇಂದ್ರ ಪ್ರಧಾನ್ ಅವರೇ, ನಿಮಗೆ ಜನ್ಮದಿನದ ಶುಭಾಶಯಗಳು. ದೇಶದ ವಿದ್ಯಾರ್ಥಿಗಳಿಗೆ ಒಂದು ಉಪಕಾರ ಮಾಡಿ ತಕ್ಷಣ ರಾಜೀನಾಮೆ ನೀಡಿ. ನಿಮಗೆ ಕಷ್ಟವಾಗುವುದಾದರೆ ನಾವೇ ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿ ಕಳುಹಿಸಿಕೊಡುತ್ತೇವೆ, ನೀವು ಕೇವಲ ನಿಮ್ಮ ಹೆಬ್ಬೆರಳಿನ ಗುರುತು ಒತ್ತಿದರೆ ಸಾಕು” ಎಂದು ತೀವ್ರವಾಗಿ ವ್ಯಂಗ್ಯವಾಡಿದ್ದಾರೆ. ಪರೀಕ್ಷಾ ಅಕ್ರಮಗಳಿಂದಾಗಿ ದೇಶದಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಇದಕ್ಕೆಲ್ಲಾ ಶಿಕ್ಷಣ ಸಚಿವರೇ ನೇರ ಹೊಣೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ತರಾಟೆಗೆ ತೆಗೆದುಕೊಂಡ ದಿಪ್ಕೆ, “ರಷ್ಯಾ-ಉಕ್ರೇನ್ ಯುದ್ಧವನ್ನೇ ನಿಲ್ಲಿಸಿದೆ ಎಂದು ಹೇಳಿಕೊಳ್ಳುವ ಪ್ರಧಾನಿ ಮೋದಿಗೆ ದೇಶದಲ್ಲಿ ಒಂದು ಪರೀಕ್ಷೆಯ ಪೇಪರ್ ಲೀಕ್ ಆಗುವುದನ್ನು ತಡೆಯಲು ಸಾಧ್ಯವಿಲ್ಲವೇ? ಒಬ್ಬ ಸಚಿವರಿಂದ ರಾಜೀನಾಮೆ ಪಡೆಯಲು ಇವರಿಂದ ಆಗುತ್ತಿಲ್ಲ” ಎಂದು ಕಿಡಿಕಾರಿದ್ದಾರೆ.

“ನಾವು ಭಯೋತ್ಪಾದಕರಲ್ಲ, ತೆರಿಗೆದಾರರು”: ಸರ್ಕಾರಕ್ಕೆ ಸಿಜೆಪಿ ತರಾಟ

ಇತ್ತೀಚೆಗಷ್ಟೇ ಸಿಜೆಪಿ ಸಂಘಟನೆಯ ‘ಎಕ್ಸ್’ (X) ಸಾಮಾಜಿಕ ಜಾಲತಾಣದ ಖಾತೆಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದ್ದರ ವಿರುದ್ಧ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಸಮಿತಿಯ ಮುಂದೆ ಹಾಜರಾಗಿದ್ದ ಅಭಿಜೀತ್ ದಿಪ್ಕೆ, ಅಲ್ಲಿನ ಅಧಿಕಾರಿಗಳನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ. “ನಮ್ಮ ಖಾತೆಯನ್ನು ಏಕೆ ತಡೆಹಿಡಿಯಲಾಗಿದೆ ಎನ್ನುವುದಕ್ಕೆ ಇಲಾಖೆಯ ಬಳಿ ಉತ್ತರವಿಲ್ಲ, ಎಲ್ಲವನ್ನೂ ಅತ್ಯಂತ ಗೌಪ್ಯ ಎಂದು ಹೇಳುತ್ತಾರೆ. ಇಷ್ಟೊಂದು ಗೌಪ್ಯತೆಯನ್ನು ನೀವು ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ವಿಷಯದಲ್ಲಿ ಕಾಪಾಡಿದ್ದರೆ ಇಂದು ದೇಶದಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರ ತಮ್ನೊಂದಿಗೆ ಮಾತುಕತೆಗೆ ಮುಂದಾಗದೆ, ನ್ಯಾಯ ಕೇಳುತ್ತಿರುವ ವಿದ್ಯಾರ್ಥಿಗಳನ್ನು ‘ಭಯೋತ್ಪಾದಕರು’ ಎಂದು ಕರೆಯುತ್ತಿದೆ. ನಾವು ಮತ್ತು ನಮ್ಮ ಪೋಷಕರು ಈ ದೇಶದ ಪ್ರಾಮಾಣಿಕ ತೆರಿಗೆದಾರರು, ನಮಗೆ ನ್ಯಾಯ ಕೇಳಲು ಹಕ್ಕಿದೆ, ನಮ್ಮನ್ನು ಉಗ್ರರು ಎನ್ನಲು ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಅವರು ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ಸೋನಂ ವಾಂಗ್ಚುಕ್: ಜೂನ್ ೨೮ ರಿಂದ ಉಪವಾಸ ಸತ್ಯಾಗ್ರಹ

ಇದೇ ವೇಳೆ ಈ ವಿದ್ಯಾರ್ಥಿ ಆಂದೋಲನಕ್ಕೆ ಜಾಗತಿಕ ಮಟ್ಟದಲ್ಲಿ ದೊಡ್ಡ ಬೆಂಬಲ ಸಿಕ್ಕಿದೆ. ಖ್ಯಾತ ಪರಿಸರ ಮತ್ತು ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರು ನೀಟ್ ಹಗರಣದ ವಿರುದ್ಧ ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದ್ದು, ಸರ್ಕಾರ ಜೂನ್ ೨೭ ರ ಒಳಗಾಗಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜೂನ್ ೨೮ ರಿಂದ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಘೋಷಿಸಿದ್ದಾರೆ. ಪ್ರಸ್ತುತ ಜಿನೇವಾದಲ್ಲಿರುವ ಅವರು, ವಿಶ್ವಸಂಸ್ಥೆಯ ಕಚೇರಿ ಮುಂಭಾಗದ ಪ್ರಸಿದ್ಧ ‘ಬ್ರೋಕನ್ ಚೇರ್’ ಸ್ಮಾರಕದ ಬಳಿ ನಿಂತು ವೀಡಿಯೊ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿನ ಜವಾಬ್ದಾರಿ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳುವುದು ಇಂದಿನ ತುರ್ತು ಅಗತ್ಯ ಎಂದಿರುವ ವಾಂಗ್ಚುಕ್, ಆರಂಭದಿಂದಲೂ ಅಭಿಜೀತ್ ದಿಪ್ಕೆ ನೇತೃತ್ವದ ಈ ಹೋರಾಟವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಶನಿವಾರದೊಳಗೆ ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳ ಬೇಡಿಕೆಗೆ ಪೂರಕವಾದ ಸ್ಪಂದನೆ ಸಿಗದಿದ್ದರೆ, ಜಿನೇವಾದಿಂದ ಮರಳಿ ನೇರವಾಗಿ ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ತಾವೂ ಉಪವಾಸ ಸತ್ಯಾಗ್ರಹಕ್ಕೆ ಕೂರುವುದಾಗಿ ಕಡಕ್ ಎಚ್ಚರಿಕೆ ನೀಡಿದ್ದಾರೆ. ಇದರಿಂದಾಗಿ ಕೇಂದ್ರ ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ಹೆಚ್ಚಾದಂತಾಗಿದೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ನೀಡಿದ್ದ 4 ಕೆಜಿ ಬೆಳ್ಳಿ ಇಟ್ಟಿಗೆ ನಾಪತ್ತೆ? ಸಂಜಯ್ ರಾವುತ್ ಗಂಭೀರ ಆರೋಪ!

Leave a Reply

Your email address will not be published. Required fields are marked *