TOP NEWS

Namma Metro: ಹಳಿಗೆ ಜಿಗಿದು ಆತ್ಮಹತ್ಯೆ ತಡೆಗೆ ಬಿಎಂಆರ್‌ಸಿಎಲ್ ಮಹತ್ವದ ಹೆಜ್ಜೆ!

BMRCL new step to control suicide cases in namma metro station

ಬೆಂಗಳೂರು: ರಾಜಧಾನಿಯ ಸಂಚಾರದ ಹೆಮ್ಮೆಯ ಸಂಕೇತವಾಗಿರುವ ‘ನಮ್ಮ ಮೆಟ್ರೋ’ (Namma Metro) ನಿಲ್ದಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಹಳಿಗಳ ಮೇಲೆ ಜಿಗಿದು ಪ್ರಾಣ ಕಳೆದುಕೊಳ್ಳುವ ಹಾಗೂ ಆತ್ಮಹತ್ಯೆಗೆ ಯತ್ನಿಸುವ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ. ಇಂತಹ ದುರ್ಘಟನೆಗಳಿಂದಾಗಿ ಅಮೂಲ್ಯ ಜೀವಗಳು ನಷ್ಟವಾಗುವುದರ ಜೊತೆಗೆ, ಲಕ್ಷಾಂತರ ನಿತ್ಯ ಪ್ರಯಾಣಿಕರ ಸಂಚಾರ ವ್ಯವಸ್ಥೆಯೂ ಗಂಟೆಗಟ್ಟಲೆ ಸ್ಥಗಿತಗೊಂಡು ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಗಂಭೀರ ಪರಿಸ್ಥಿತಿಗೆ ಬ್ರೇಕ್ ಹಾಕಲು ನಿರ್ಧರಿಸಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL), ಪ್ರಯಾಣಿಕರ ಸುರಕ್ಷತೆ ಕಾಯ್ದುಕೊಳ್ಳಲು ಹಾಗೂ ತೀವ್ರ ಮಾನಸಿಕ ನೊಂದವರಿಗೆ ಧೈರ್ಯ ತುಂಬಲು ದೇಶದ ಪ್ರತಿಷ್ಠಿತ ‘ನಿಮ್ಹಾನ್ಸ್’ (NIMHANS) ಆಸ್ಪತ್ರೆಯೊಂದಿಗೆ ಕೈಜೋಡಿಸಿ ವಿಶೇಷ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದೆ.

ಮೆಟ್ರೋ ಹಳಿಗಳ ಬಳಿ ಭರವಸೆಯ ಬೆಳಕು: ಮನ ಪರಿವರ್ತಿಸುವ ವಿಶೇಷ ಬೋರ್ಡ್‌ಗಳು

ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಕನಿಷ್ಠ ೧೧ಕ್ಕೂ ಹೆಚ್ಚು ಬಾರಿ ಜನರು ಹಳಿಗೆ ಜಿಗಿದಿರುವ ಘಟನೆಗಳು ವರದಿಯಾಗಿದ್ದು, ಇವರಲ್ಲಿ ಮೂವರು ಸಾವನ್ನಪ್ಪಿ, ಐದಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಇಂತಹ ದುಡುಕಿನ ನಿರ್ಧಾರಗಳನ್ನು ತಡೆಯಲು ಮೆಜೆಸ್ಟಿಕ್ ಮತ್ತು ಕಬ್ಬನ್ ಪಾರ್ಕ್ ನಂತಹ ಅತಿ ಹೆಚ್ಚು ಜನದಟ್ಟಣೆ ಇರುವ ನಿಲ್ದಾಣಗಳ ಪ್ಲಾಟ್‌ಫಾರ್ಮ್ ಹಾಗೂ ಟ್ರ್ಯಾಕ್‌ಗಳ ಪಕ್ಕದಲ್ಲಿ ವಿಶೇಷ ಡಿಜಿಟಲ್ ಡಿಸ್ಪ್ಲೇ ಮತ್ತು ಸೈನ್ ಬೋರ್ಡ್‌ಗಳನ್ನು ಅಳವಡಿಸಲಾಗಿದೆ. ಈ ಫಲಕಗಳಲ್ಲಿ ನಿಲ್ದಾಣಕ್ಕೆ ಬರುವವರಿಗೆ ಸ್ಪಷ್ಟವಾಗಿ ಕಾಣುವಂತೆ ‘‘ಯೋಚನೆ ಬೇಡ, ಚಿಂತೆ ಬಿಡಿ, ಮಾತ್ನಾಡಿ’’ ಮತ್ತು ‘‘ದಣಿವಾಗೋದು ಸಹಜ, ಸಹಾಯ ಕೇಳೋದು ಸಹಜ’’ ಎಂಬ ಭಾವನಾತ್ಮಕ ಸಾಲುಗಳನ್ನು ಬರೆಯಲಾಗಿದ್ದು, ತೀವ್ರ ಹತಾಶೆಯಲ್ಲಿರುವವರಲ್ಲಿ ಬದುಕಿನ ಆಸೆ ಮೂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ.

‘ಟೆಲಿಮನಸ್’ (Tele-MANAS) ಸಹಾಯವಾಣಿ ಮೂಲಕ ಜೀವ ಉಳಿಸುವ ಕಾಯಕ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಟೆಲಿಮನಸ್’ ಯೋಜನೆಯಡಿ ನಿಮ್ಹಾನ್ಸ್ ಸಂಸ್ಥೆಯ ಆರ್ಥಿಕ ಹಾಗೂ ತಾಂತ್ರಿಕ ನೆರವಿನೊಂದಿಗೆ ಈ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಮೆಟ್ರೋ ನಿಲ್ದಾಣಗಳ ಪ್ರಮುಖ ಭಾಗಗಳಲ್ಲಿ ಉಚಿತ ಮಾನಸಿಕ ಆರೋಗ್ಯ ಸಹಾಯವಾಣಿ ಸಂಖ್ಯೆಗಳನ್ನು ಪ್ರದರ್ಶಿಸಲಾಗಿದೆ. ಜೀವನದಲ್ಲಿ ತೀವ್ರ ಮಾನಸಿಕ ಒತ್ತಡ, ಖಿನ್ನತೆಯಿಂದ ಬಳಲುತ್ತಿರುವವರು ಅಥವಾ ಕ್ಷಣಿಕ ಆವೇಶದಲ್ಲಿ ಪ್ರಾಣ ಕಳೆದುಕೊಳ್ಳುವ ಆಲೋಚನೆ ಹೊಂದಿರುವ ಯಾರೇ ಆದರೂ ತಕ್ಷಣ ಈ ಸಂಖ್ಯೆಗಳಿಗೆ ಕರೆ ಮಾಡಿ, ತಜ್ಞ ವೈದ್ಯರಿಂದ ಸಂಪೂರ್ಣ ಉಚಿತವಾದ ಆಪ್ತ ಸಮಾಲೋಚನೆ ಹಾಗೂ ತುರ್ತು ಮಾನಸಿಕ ಚಿಕಿತ್ಸೆಯ ನೆರವು ಪಡೆಯಬಹುದಾಗಿದೆ.

ದುರಂತಗಳನ್ನು ತಪ್ಪಿಸಲು ಹಾಗೂ ಮಾನಸಿಕ ಆರೋಗ್ಯದ ಮಹತ್ವ ಸಾರಲು ಬಿಎಂಆರ್‌ಸಿಎಲ್ ಮತ್ತು ನಿಮ್ಹಾನ್ಸ್ ಜಂಟಿಯಾಗಿ ಹಮ್ಮಿಕೊಂಡಿರುವ ಈ ಸಮಯೋಚಿತ ಹಾಗೂ ಮಾನವೀಯ ಹೆಜ್ಜೆಗೆ ಬೆಂಗಳೂರಿನ ಸಾರ್ವಜನಿಕ ವಲಯ ಹಾಗೂ ಮೆಟ್ರೋ ಪ್ರಯಾಣಿಕರಿಂದ ವ್ಯಾಪಕ ಬೆಂಬಲ ಮತ್ತು ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ಪ್ರಾಮಾಣಿಕರಿಗೆ ತೊಂದರೆ ಬೇಡ, ತೆರಿಗೆ ಕಳ್ಳರಿಗೆ ದಯೆ ಇಲ್ಲ: ವಾಣಿಜ್ಯ ಇಲಾಖೆ ಸಭೆಯಲ್ಲಿ ಸಿಎಂ ಖಡಕ್ ಸೂಚನೆ

Leave a Reply

Your email address will not be published. Required fields are marked *