ರಾಯಚೂರು: ಮದುವೆಗೆ ಕನ್ಯೆ ತೋರಿಸುವುದಾಗಿ ನಂಬಿಸಿ ಅಮಾಯಕರನ್ನು (Theft) ಲೂಟಿ ಮಾಡುತ್ತಿದ್ದ ಖತರ್ನಾಕ್ ಆರೋಪಿಯನ್ನು ಕವಿತಾಳ ಪೊಲೀಸರು ಬಂಧಿಸಿದ್ದಾರೆ. ಮಸ್ಕಿ ತಾಲೂಕಿನ ಬಳಗಾನೂರು ಗ್ರಾಮದ ದೊಡ್ಡಬಸವ ಬಂಧಿತ ಆರೋಪಿಯಾಗಿದ್ದು, ಈತನಿಂದ ₹8.40 ಲಕ್ಷ ಮೌಲ್ಯದ ಒಟ್ಟು 14 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜನರ ಅಸಹಾಯಕತೆಯೇ ಬಂಡವಾಳ
ಮದುವೆಯಾಗಲು ಹೆಣ್ಣು ಹುಡುಕುತ್ತಿರುವ ಯುವಕರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡಿದ್ದ ಈತ, ಮದುವೆ ದಲ್ಲಾಳಿಯಂತೆ ನಟಿಸುತ್ತಿದ್ದ. ಹೆಣ್ಣು ನೋಡಲು ಬರುವವರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕು ತೋರಿಸಿ ಬೆದರಿಸುತ್ತಿದ್ದ. ಬಳಿಕ ಅವರ ಬಳಿಯಿದ್ದ ನಗದು ಮತ್ತು ಬೈಕ್‌ಗಳನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದ. ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಶರಣಪ್ಪ ಎಂಬುವವರು ಹೆಣ್ಣು ನೋಡಲು ಬಂದಿದ್ದಾಗ, ಅವರಿಗೂ ಚಾಕು ತೋರಿಸಿ ಬೈಕ್ ಕಸಿದುಕೊಂಡು ಈತ ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಅನ್ವಯ ಪೊಲೀಸರು ತನಿಖೆ ಕೈಗೊಂಡು ಆರೋಪಿಯನ್ನು ಸೆರೆಹಿಡಿದಿದ್ದಾರೆ.
ಬಂಧಿತ ಆರೋಪಿಯ ಮನೆ ಮೇಲೆ ದಾಳಿ ನಡೆಸಿದಾಗ ವಿವಿಧ ಜಿಲ್ಲೆಗಳಿಂದ ಕಳವು ಮಾಡಿದ್ದ ಹಾಗೂ ಸುಲಿಗೆ ಮಾಡಿದ್ದ 14 ಬೈಕ್‌ಗಳು ಪತ್ತೆಯಾಗಿವೆ. ಈತ ಕೇವಲ ರಾಯಚೂರು ಮಾತ್ರವಲ್ಲದೆ ಬಳ್ಳಾರಿ, ಸಿರಗುಪ್ಪ, ಗಂಗಾವತಿ ಸೇರಿದಂತೆ ಹಲವೆಡೆ ಇಂತಹ ಕೃತ್ಯಗಳನ್ನು ಎಸಗಿರುವುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಅಪರಿಚಿತ ಮಧ್ಯವರ್ತಿಗಳ ಬಗ್ಗೆ ಎಚ್ಚರದಿಂದಿರುವಂತೆ ಪೊಲೀಸರು ಸಾರ್ವಜನಿಕರಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಗಂಡನ ಮನೆಯವರ ಕಿರುಕುಳ, ನೇಣಿಗೆ ಶರಣಾದ ಯುವತಿ: ಆರೋಪಿಗಳ ರಕ್ಷಣೆಗೆ ಮುಂದಾಯ್ತ ಖಾಕಿ?
