TOP NEWS

Mysuru: ಗಂಡನ ಮನೆಯವರ ಕಿರುಕುಳ, ನೇಣಿಗೆ ಶರಣಾದ ಯುವತಿ: ಆರೋಪಿಗಳ ರಕ್ಷಣೆಗೆ ಮುಂದಾಯ್ತ ಖಾಕಿ?

mysuru women suicide

ಮೈಸೂರು: ಗಂಡನ ಮನೆಯವರ ಕಿರುಕುಳದಿಂದ ಬೇಸತ್ತು ಗೃಹಿಣಿ ನೇಣಿಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ (Mysuru) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಈ ಪ್ರಕರಣದಲ್ಲಿ ಪೊಲೀಸರೇ ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ ಎನ್ನುವ ಆರೋಪ ಸಹ ಕೇಳಿ ಬಂದಿದೆ.

ಏನಿದು ಘಟನೆ?
ಮೈಸೂರಿನ ದಟ್ಟಗಳ್ಳಿ ನಿವಾಸಿಯಾದ ಸಹದೇವ್‌ ಅವರ ಮಗಳು 28 ವರ್ಷದ ಸಂಪ್ರೀತ ಆತ್ಮಹತ್ಯೆ ಮಾಡಿಕೊಂಡ ಯುವತಿ ಆಗಿದ್ದು, ಆರೋಪಿಗಳ ಜೊತೆ ಪೊಲೀಸರು ಶಾಮೀಲಾಗಿದ್ದಾರೆ ಎನ್ನುವ ಆರೋಪ ಇದೀಗ ಕೇಳಿ ಬಂದಿದೆ.

ಮಾಹಿತಿಗಳ ಪ್ರಕಾರ, ಮೈಸೂರು ಮೂಲದ ಯುವತಿ ದಕ್ಷಿಣ ಕೊಡಗಿನ ಕಳತ್ಮಾಡು ಗ್ರಾಮದ ಎಂ.ಯು.ವಸಂತ್ ಅವರ ಪುತ್ರ ಮುಕ್ಕಾಟಿ ಕುಶಾಲ್ ಎನ್ನುವವರನ್ನ ಪ್ರೀತಿಸಿ ಮದುವೆ ಆಗಿದ್ದಾರೆ. ಕುಶಾಲ್ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಕ್ವಾಂಟಿಫೈ ಅನಾಲಿಟಿಕ್ಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಸೈಬರ್ ಸೆಕ್ಯುರಿಟಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಇನ್ನು ಈ ಮದುವೆ ಯುವಕನ ಪೋಷಕರಿಗೆ ಇಷ್ಟ ಇರಲಿಲ್ಲ. ಆ ಯುವತಿಗೆ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದರು. ಮನೆಯಲ್ಲಿ ಟೈಲ್ಸ್‌ ಹಾಳಾಗಿದೆ ಅದನ್ನ ಸರಿ ಮಾಡಿಸಲು ಮನೆಯಿಂದ 1 ಲಕ್ಷ ಹಣ ತೆಗೆದುಕೊಂಡು ಬಾ ಎಂದೆಲ್ಲಾ ಹಿಂಸೆ ನೀಡಲು ಆರಭ ಮಾಡಿದ್ದರು. ಸಂಪ್ರೀತ ಅವರ ತಂದೆ ಬ್ರಾಹ್ಮಣರಾಗಿದ್ದು, ಅಡುಗೆ ಕೆಲಸ ಮಾಡುತ್ತಿದ್ದು, ಸಹೋದರ ಪೌರೋಹಿತ್ಯ ಮಾಡಿಕೊಂಡು ಜೀವನ ನಡೆಸುತ್ತಾರೆ. ಸಂಪ್ರೀತ ಕುಟುಂಬದವರಿಗೆ ಹಣ ನೀಡುವ ಶಕ್ತಿ ಇಲ್ಲ. ಇದಲ್ಲದೇ, ಒಂದೆಲ್ಲಾ ಒಂದು ಕಾರಣ ಇಟ್ಟುಕೊಂಡು ಯುವತಿಗೆ ಹಿಂಸೆ ನೀಡುತ್ತಿದ್ದರು.

ಇದರ ಜೊತೆಗೆ ಗರ್ಭಿಣಿ ಆಗಿದ್ದ ಸಂಪ್ರೀತಾಳಿಗೆ ಬಲವಂತದಿಂದ ಗರ್ಭಪಾತ ಸಹ ಮಾಡಿಸಿದ್ದರು. ಮಾನಸಿಕವಾಗಿ ಕಿರುಕುಳ ನೀಡಲು ಆರಂಭ ಮಾಡಿದ್ದರು. ಇದಲ್ಲದೇ, ಸಂಸಾರ ಸರಿ ಮಾಡುತ್ತೇವೆ ಎಂದು ಹೇಳಿ ಕೌನ್ಸಿಲಿಂಗ್‌ಗೆ ಕಳುಹಿಸಿದ್ದಾರೆ. ಆದರೆ ಆ ಕೌನ್ಸಿಲಿಂಗ್‌ಗಳಿಗೆ ಸಹ ಗಂಡ ಕುಶಾಲ್‌ ಸರಿಯಾಗಿ ಹೋಗಿಲ್ಲ. ಅದರ ಬದಲು ಅಲ್ಲಿ ಸಹ ಆಕೆಯ ಮಾನಸಿಕ ಸ್ಥಿತಿ ಸರಿ ಇಲ್ಲ ಎಂದು ಸಾಬೀತು ಮಾಡಲು ಪ್ರಯತ್ನ ಮಾಡಿದ್ದಾರೆ.

ಹಾಗೆಯೇ, ಯುವತಿಗೆ ಕಾಟ ಕೊಟ್ಟು ಮನೆಯಿಂದ ಸಹ ಹೊರಹಾಕಲಾಗಿತ್ತು.ಅದರ ನಂತರ ಗಂಡ ಕುಶಾಲ್‌ ನಾಪತ್ತೆ ಸಹ ಆಗಿದ್ದು, ಸಂಪರ್ಕಕ್ಕೆ ಸಿಗಲಿಲ್ಲ. ಇದರಿಂದ ನೊಂದ ಯುವತಿ ತಂದೆಯ ಮನೆಯವರಿಗೆ ಎಲ್ಲಾ ವಿಚಾರ ತಿಳಿಸಿದ್ದಾಳೆ. ಅಲ್ಲದೇ, ಆಕೆ ತಂದೆಯ ಮನೆಗೆ ಬಂದ ಕೆಲವೇ ದಿನಗಳಲ್ಲಿ ಗಂಡ ಆಕೆಗೆ ಡಿವೋರ್ಸ್‌ ನೋಟೀಸ್‌ ಕಳುಹಿಸಿದ್ದಾರೆ. ಡಿವೋರ್ಸ್‌ ನೋಟೀಸ್‌ನಲ್ಲಿ ಸಹ ಆಕೆಯ ಮಾನಸಿಕ ಸ್ಥಿತಿ ಸರಿ ಇಲ್ಲ ಎಂದು ಹೇಳಲಾಗಿದೆ. ಇದರಿಂದ ಆಕೆ ತುಂಬಾ ಮನನೊಂದಿದ್ದರು. ಡಿವೋರ್ಸ್‌ ನೋಟೀಸ್‌ ಬಂದ ಕೇವಲ 4 ದಿನದಲ್ಲಿ ಡಿಸೆಂಬರ್ 10, 2025 ರಂದು ಮಹಿಳೆಗೆ ಮನೆಯಲ್ಲಿ ಎಲ್ಲರೂ ಇರುವ ಸಂದರ್ಭದಲ್ಲಿ ನೇಣಿಗೆ ಶರಣಾಗಿದ್ದಾರೆ.

ಸಿಕ್ಕಿತ್ತಾ ಡೆತ್‌ ನೋಟ್‌? ಆರೋಪಿಗಳ ರಕ್ಷಣೆ ಮಾಡ್ತಿದ್ದಾರಾ ಪೊಲೀಸ್‌?
ಪೋಷಕರು ನೀಡಿರುವ ಮಾಹಿತಿ ಪ್ರಕಾರ, ಮೈಸೂರಿನ ಕುವೆಂಪು ನಗರ ಪೊಲೀಸರಿಗೆ ಯುವತಿಯ ಬಳಿ ಡೆತ್‌ನೋಟ್‌ ಸಿಕ್ಕಿದೆ. ಅದರಲ್ಲಿ ಆಕೆ ಗಂಡ, ಅತ್ತೆ, ಮಾವ ಹಾಗೂ ನಾದಿನಿಯ ಹೆಸರನ್ನ ಬರೆದಿದ್ದು, ತನ್ನ ಸಾವಿಗೆ ಕಾರಣ ಏನು ಎಂಬುದನ್ನ ಸಹ ತಿಳಿಸಿದ್ದಾರೆ. ಆದರೆ ಮೈಸೂರಿನ ಕುವೆಂಪು ನಗರ ಪೊಲೀಸರು ಮಾತ್ರ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸದೇ ಆರೋಪಿಗಳ ರಕ್ಷಣೆ ಮಾಡುತ್ತಿದ್ದಾರಾ? ಎನ್ನುವ ಗುಮಾನಿ ಈಗ ಎದುರಾಗಿದೆ.


ಮೃತ ಯುವತಿ ಪೋಷಕರು ಮಾಡಿರುವ ಆರೋಪದ ಪ್ರಕಾರ, ಆತ್ಮಹತ್ಯೆ ವಿಚಾರವನ್ನ ಪೊಲೀಸರಿಗೆ ತಿಳಿಸಿದಾಗ ಕೇವಲ ಒಬ್ಬರೇ ಪೇದೆ ಬಂದು ಎಲ್ಲಾ ಮಾಹಿತಿಗಳನ್ನ ಸಂಗ್ರಹ ಮಾಡಿಕೊಂಡು ಹೋಗಿದ್ದಾರೆ, ಬೇರೆ ಯಾವುದೇ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿಲ್ಲ. ಮುಖ್ಯವಾಗಿ ಎಫ್‌ಐಆರ್‌ ದಾಖಲು ಮಾಡಲು ಸಹ ತುಂಬಾ ನಿಧಾನ ಮಾಡಿದ್ದಾರೆ ಎನ್ನಲಾಗಿದೆ. ಹಾಗೆಯೇ, ಎಫ್‌ಐಆರ್‌ನಲ್ಲಿ ಕೇವಲ ಮೃತಳ ಗಂಡ ಕುಶಾಲ್ ಹಾಗೂ ಅತ್ತೆ ರೇಣುಕಾ ಮುಕ್ಕಾಟಿ ಹೆಸರು ದಾಖಲು ಮಾಡಲಾಗಿದ್ದು, ನಾದಿನಿ ತೃಪ್ತಿ ಹಾಗೂ ಮಾವನ ವಿರುದ್ಧ ಯಾವುದೇ ಪ್ರಕರಣ ದಾಖಲು ಮಾಡಲಾಗಿಲ್ಲ. ಇದಿಷ್ಟೇ ಅಲ್ಲದೇ, ಎರಡು ತಿಂಗಳಾದರೂ ಸಹ ಆರೋಪಿಗಳನ್ನ ಬಂಧನ ಮಾಡಲಾಗಿಲ್ಲ, ಇದು ಅನೇಕ ಅನುಮಾನಗಳನ್ನ ಹುಟ್ಟುಹಾಕಿದೆ.

ಪೊಲೀಸರು ಈ ರೀತಿ ವರ್ತನೆ ಮಾಡಲು ಕಾರಣ, ಆರೋಪಿ ಗಂಡನ ತಂದೆ ಮಾಜಿ ಪೊಲೀಸ್‌ ಅಧಿಕಾರಿ ಎನ್ನಲಾಗುತ್ತಿದೆ. ಮಾಜಿ ಪೊಲೀಸ್‌ ರಕ್ಷಣೆ ಮಾಡಲು ಆರೋಪಿಗಳನ್ನ ಬಂಧನ ಮಾಡಿಲ್ಲವಾ? ಪೋಷಕರು ಈ ವಿಚಾರವಾಗಿ ಪ್ರಶ್ನೆ ಮಾಡಿದರೆ ನಾಪತ್ತೆ ಎಂದು ಉತ್ತರ ಹೇಳುತ್ತಾರೆ. ಆದರೆ ಆರೋಪಿಗಳಿಗೆ ಜಾಮೀನು ಸಿಗುವ ತನಕ ಬಂಧನ ಮಾಡದಿರಲು ಪೊಲೀಸರು ಹುನ್ನಾರ ಮಾಡಿದ್ದಾರಾ? ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿದೆ. ಇದಕ್ಕೆಲ್ಲಾ ಪೊಲೀಸರೇ ಉತ್ತರ ಕೊಡಬೇಕಿದ್ದು, ಆರೋಪಿಗಳನ್ನ ಯಾವಾಗ ಬಂಧನ ಮಾಡುತ್ತಾರೆ ಎಂದು ಕಾದುನೋಡಬೇಕಿದೆ.

Leave a Reply

Your email address will not be published. Required fields are marked *