TOP NEWS

Big News: ಲೋಕಸಭೆಯಲ್ಲಿ ಆಂಟಿ-ಪೇಪರ್ ಲೀಕ್ ಬಿಲ್ ಪಾಸ್

Big news Lok Sabha clears strict Public Examination Amendment Bill against paper leaks

ನವದೆಹಲಿ: ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿರುವ ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಂಡಿಸಿದ್ದ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ-2026’ಕ್ಕೆ (Public Examination Amendment Bill) ಲೋಕಸಭೆಯು ಬುಧವಾರ (Big News) ಅಂಗೀಕಾರ ನೀಡಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ನೀಡಿದ ಹೇಳಿಕೆ ಹಾಗೂ ಜುಲೈ 20 ರಂದು ಜಂತರ್ ಮಂತರ್‌ನಿಂದ ನಡೆದ ‘ಸಂಸತ್ ಚಲೋ’ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಫೈರಿಂಗ್ ನಡೆಸಲು ಗೃಹ ಸಚಿವರೇ ಆದೇಶಿಸಿದ್ದರು ಎಂಬ ಗಂಭೀರ ಆರೋಪಗಳ ನಡುವೆ, ತೀವ್ರ ಗದ್ದಲದ ಮಧ್ಯೆಯೇ ಈ ಪ್ರಮುಖ ಮಸೂದೆಯನ್ನು ಕೆಳಮನೆಯಲ್ಲಿ ಪಾಸ್ ಮಾಡಲಾಗಿದೆ.

ಕಿಚ್ಚು ಹೊತ್ತಿಸಿದ್ದ ಪ್ರಶ್ನೆ ಪತ್ರಿಕೆ ಸೋರಿಕೆ

ನೀಟ್ (NEET) ಪರೀಕ್ಷಾ ಅಕ್ರಮದ ವಿವಾದ ದೇಶಾದ್ಯಂತ ದೊಡ್ಡ ಕಿಚ್ಚು ಹೊತ್ತಿಸಿತ್ತು. ಇದರ ಬೆನ್ನಲ್ಲೇ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ, ಅಂದರೆ ಕಳೆದ ಸೋಮವಾರವಷ್ಟೇ ಕೇಂದ್ರ ಸರ್ಕಾರ ಈ ತಿದ್ದುಪಡಿ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಿತ್ತು. ಪ್ರಸ್ತುತ ಜಾರಿಯಲ್ಲಿರುವ ಸಾರ್ವಜನಿಕ ಪರೀಕ್ಷಾ ಕಾಯ್ದೆಗೆ ಮತ್ತಷ್ಟು ಬಲ ತುಂಬುವುದು ಈ ಹೊಸ ಮಸೂದೆಯ ಮುಖ್ಯ ಉದ್ದೇಶವಾಗಿದೆ. ಇನ್ನು ಮುಂದೆ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಯಾವುದೇ ರೀತಿಯ ಸಂಘಟಿತ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗುವ ತಪ್ಪಿತಸ್ಥರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಬರೋಬ್ಬರಿ 50 ಲಕ್ಷ ರೂಪಾಯಿಗಳವರೆಗೆ ಭಾರಿ ದಂಡ ವಿಧಿಸುವ ಕಠಿಣ ಕಾನೂನು ನಿಯಮಗಳನ್ನು ಈ ತಿದ್ದುಪಡಿಯಲ್ಲಿ ಅಳವಡಿಸಲಾಗಿದೆ.

ಸಂಸತ್‌ನಲ್ಲಿ ಭಾರೀ ಗದ್ದಲ

ಜುಲೈ 20 ರಿಂದ ಆರಂಭವಾಗಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ನೀಟ್ ಪೇಪರ್ ಲೀಕ್ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ನಿರಂತರವಾಗಿ ಸರ್ಕಾರದ ವಿರುದ್ಧ ಮುಗಿಬೀಳುತ್ತಿವೆ. ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆ ಮತ್ತು ಗದ್ದಲದಿಂದಾಗಿ ಸಂಸತ್ತಿನ ಕಲಾಪಗಳು ಪದೇ ಪದೇ ಸ್ಥಗಿತಗೊಳ್ಳುತ್ತಿದ್ದು, ಈ ನಡುವೆ ಕೇವಲ ಎರಡು ಪ್ರಮುಖ ಮಸೂದೆಗಳನ್ನು ಮಂಡಿಸುವುದಕ್ಕಷ್ಟೇ ಶಾಸಕಾಂಗದ ಕಲಾಪಗಳು ಸೀಮಿತವಾಗಿದ್ದವು. ಈ ಎಲ್ಲಾ ರಾಜಕೀಯ ಜಿದ್ದಾಜಿದ್ದಿನ ನಡುವೆಯೂ ಪೇಪರ್ ಲೀಕ್ ದಂಧೆಗೆ ಬ್ರೇಕ್ ಹಾಕುವ ದಿಸೆಯಲ್ಲಿ ಈ ಕಠಿಣ ಕಾನೂನು ತಿದ್ದುಪಡಿ ವಿಧೇಯಕವನ್ನು ಲೋಕಸಭೆಯಲ್ಲಿ ಯಶಸ್ವಿಯಾಗಿ ಅಂಗೀಕರಿಸಲಾಗಿದೆ.

ಇದನ್ನೂ ಓದಿ: ಹೋಟೆಲ್‌ನಲ್ಲಿ ಅಭ್ಯರ್ಥಿಗಳನ್ನು ಕೂಡಿಹಾಕಿ ಉತ್ತರ ಬಾಯಿಪಾಠ ಮಾಡಿಸಿದ್ದ ವೈದ್ಯ!; ಬಿಪಿಎಸ್‌ಸಿ ಪರೀಕ್ಷಾ ದಂಧೆಯ ರೋಚಕ ಕಥೆ ಬಿಚ್ಚಿಟ್ಟ ಪೊಲೀಸರು!

Leave a Reply

Your email address will not be published. Required fields are marked *