ಅಹಮದಾಬಾದ್: ಗುಜರಾತ್ನ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು, ಬಿಜೆಪಿ )BJP) ಅಭೂತಪೂರ್ವ ಮುನ್ನಡೆ ಸಾಧಿಸಿದೆ. ರಾಜ್ಯದಾದ್ಯಂತ ಒಟ್ಟು 9,200ಕ್ಕೂ ಹೆಚ್ಚು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ, ಈವರೆಗೆ ಬಿಜೆಪಿ 3,750ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ.
410 ಸ್ಥಾನಗಳಲ್ಲಿ ಬಿಜೆಪಿ ಗೆಲುವು
ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಬಿಜೆಪಿ 410 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಕೇವಲ 20 ಸ್ಥಾನಗಳಿಗೆ ಸೀಮಿತವಾಗಿದೆ. ಇನ್ನುಳಿದಂತೆ ಪುರಸಭೆಗಳಲ್ಲಿ ಬಿಜೆಪಿ 1,105 ಸ್ಥಾನಗಳನ್ನು ಪಡೆದಿದ್ದರೆ, ಕಾಂಗ್ರೆಸ್ 192 ಮತ್ತು ಇತರರು 1,158 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಬಿಜೆಪಿ 439 ಮತ್ತು ತಾಲೂಕು ಪಂಚಾಯತ್ಗಳಲ್ಲಿ 1,803 ಸ್ಥಾನಗಳನ್ನು ಬಾಚಿಕೊಂಡಿದೆ. ತಾಲೂಕು ಪಂಚಾಯತ್ ವಿಭಾಗದಲ್ಲಿ ಕಾಂಗ್ರೆಸ್ 409 ಸ್ಥಾನಗಳನ್ನು ಗೆದ್ದಿದ್ದರೆ, ಆಮ್ ಆದ್ಮಿ ಪಕ್ಷ ಸೇರಿದಂತೆ ಇತರರು 194 ಸ್ಥಾನಗಳನ್ನು ಪಡೆದಿದ್ದಾರೆ.
ಒಟ್ಟು 15 ಮಹಾನಗರ ಪಾಲಿಕೆಗಳು, 84 ಪುರಸಭೆಗಳು, 34 ಜಿಲ್ಲಾ ಪಂಚಾಯತ್ ಮತ್ತು 260 ತಾಲೂಕು ಪಂಚಾಯತ್ಗಳಿಗೆ ನಡೆದ ಈ ಚುನಾವಣೆ ರಾಜಕೀಯವಾಗಿ ಅತ್ಯಂತ ಮಹತ್ವದ್ದಾಗಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದಂತಹ ಪ್ರಮುಖ ಪಕ್ಷಗಳಲ್ಲದೆ ಸ್ವತಂತ್ರ ಅಭ್ಯರ್ಥಿಗಳೂ ಕಣದಲ್ಲಿದ್ದ ಈ ಚುನಾವಣೆ, ತಳಮಟ್ಟದ ರಾಜಕೀಯ ಬಲವನ್ನು ನಿರ್ಧರಿಸುವ ನಿಟ್ಟಿನಲ್ಲಿ ನಿರ್ಣಾಯಕ ಎಂದು ಪರಿಗಣಿಸಲಾಗಿದೆ. ಮತ ಎಣಿಕೆ ಮುಂದುವರಿದಿದ್ದು, ಅಂತಿಮ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.
ಇದನ್ನೂ ಓದಿ: ಮೇ 1ರಿಂದ ಜಾರಿಯಾಗಲಿವೆ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ನ ಹೊಸ ನಿಯಮಗಳು
