ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಮತ್ತು ಜಾಗತಿಕ ತೈಲ ಪೂರೈಕೆ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಮೇ 1ರಿಂದ ಎಲ್‌ಪಿಜಿ (LPG) ಸಿಲಿಂಡರ್ ಬುಕ್ಕಿಂಗ್ ಮತ್ತು ವಿತರಣಾ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಜಾರಿಗೆ ತರಲು ತೈಲ ಕಂಪನಿಗಳು ನಿರ್ಧರಿಸಿವೆ. ಕಳ್ಳಸಂತೆಯನ್ನು ತಡೆಗಟ್ಟಿ, ಪಾರದರ್ಶಕತೆಯನ್ನು ಹೆಚ್ಚಿಸುವುದು ಈ ಹೊಸ ನಿಯಮಗಳ ಮುಖ್ಯ ಉದ್ದೇಶವಾಗಿದೆ.
ಸಿಲಿಂಡರ್ ಬುಕ್ಕಿಂಗ್‌ನಲ್ಲಿ ಹೊಸ ನಿರ್ಬಂಧ ಇನ್ಮುಂದೆ ಗ್ರಾಹಕರು ಇಷ್ಟಬಂದಾಗ ಸಿಲಿಂಡರ್ ಬುಕ್ ಮಾಡುವಂತಿಲ್ಲ. ನಗರ ಪ್ರದೇಶದ ಗ್ರಾಹಕರು ಒಂದು ಸಿಲಿಂಡರ್ ಪಡೆದ 20 ರಿಂದ 25 ದಿನಗಳ ನಂತರವಷ್ಟೇ ಮುಂದಿನ ಸಿಲಿಂಡರ್‌ಗೆ ಬುಕ್ ಮಾಡಬಹುದು. ಗ್ರಾಮೀಣ ಪ್ರದೇಶದಲ್ಲಿ ಈ ಕನಿಷ್ಠ ಅವಧಿಯನ್ನು 45 ದಿನಗಳೆಂದು ನಿಗದಿಪಡಿಸಲಾಗಿದೆ. ನಿಗದಿತ ದಿನಗಳಿಗಿಂತ ಮೊದಲೇ ಬುಕ್ ಮಾಡಿದರೆ, ಆ ಅರ್ಜಿಗಳು ಸ್ವಯಂಚಾಲಿತವಾಗಿ ರದ್ದಾಗಲಿವೆ.
ಒಟಿಪಿ (OTP) ಕಡ್ಡಾಯ ಸಿಲಿಂಡರ್ ಪಡೆಯುವ ಪ್ರಕ್ರಿಯೆಯಲ್ಲಿ ಹೆಚ್ಚಿನ ಭದ್ರತೆಗಾಗಿ ಒಟಿಪಿ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಇನ್ಮುಂದೆ ಡೆಲಿವರಿ ಸಿಬ್ಬಂದಿ ಮನೆಗೆ ಬಂದಾಗ, ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ಅವರಿಗೆ ನೀಡಲೇಬೇಕು. ಒಟಿಪಿ ಪರಿಶೀಲನೆಯಾಗದ ಹೊರತು ಸಿಲಿಂಡರ್ ವಿತರಣೆ ಮಾಡಲಾಗುವುದಿಲ್ಲ.
ಇ-ಕೆವೈಸಿ (e-KYC) ಪ್ರಕ್ರಿಯೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದಿರುವವರು ಕಡ್ಡಾಯವಾಗಿ ಆಧಾರ್ ಆಧಾರಿತ ಇ-ಕೆವೈಸಿ ಮಾಡಿಸಿಕೊಳ್ಳಬೇಕು. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ ಸಬ್ಸಿಡಿ ಮೊತ್ತದಲ್ಲಿ ವ್ಯತ್ಯಯವಾಗಬಹುದು ಅಥವಾ ಗ್ಯಾಸ್ ಪೂರೈಕೆಯಲ್ಲಿ ಸಮಸ್ಯೆ ಎದುರಾಗಬಹುದು.
ಪಿಎನ್‌ಜಿ (PNG) ಇದ್ದರೆ ಎಲ್‌ಪಿಜಿ ಇಲ್ಲ ಯಾವ ಮನೆಗಳಲ್ಲಿ ಈಗಾಗಲೇ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಸಂಪರ್ಕವಿದೆಯೋ, ಅಂತಹವರಿಗೆ ಎಲ್‌ಪಿಜಿ ಸಿಲಿಂಡರ್ ಸಿಗುವುದಿಲ್ಲ. ತಮ್ಮ ಪ್ರದೇಶದಲ್ಲಿ ಪಿಎನ್‌ಜಿ ಸೌಲಭ್ಯವಿದ್ದರೆ, ಗ್ರಾಹಕರು ಸಿಲಿಂಡರ್ ಸಂಪರ್ಕವನ್ನು ಬಿಟ್ಟು ಪಿಎನ್‌ಜಿಗೆ ಬದಲಾಗಬೇಕಾಗುತ್ತದೆ. ಅಲ್ಲದೆ, ಹಳೆಯ ಎಲ್‌ಪಿಜಿ ಸಂಪರ್ಕವನ್ನು ಬೇರೆಯವರಿಗೆ ವರ್ಗಾಯಿಸುವುದನ್ನೂ ನಿಷೇಧಿಸಲಾಗಿದೆ.
ಬೆಲೆ ಏರಿಕೆಯ ಭೀತಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಅಸ್ಥಿರತೆಯಿಂದಾಗಿ ಈಗಾಗಲೇ ಎಲ್‌ಪಿಜಿ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಮೇ 1ರಂದು ತೈಲ ಕಂಪನಿಗಳು ಹೊಸ ದರಪಟ್ಟಿ ಪ್ರಕಟಿಸಲಿದ್ದು, ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಭಾರತವು ತನ್ನ ಅಗತ್ಯದ ಅರ್ಧದಷ್ಟು ಎಲ್‌ಪಿಜಿಗಾಗಿ ಆಮದನ್ನು ಅವಲಂಬಿಸಿರುವುದರಿಂದ, ಪೂರೈಕೆಯಲ್ಲಿ ಶಿಸ್ತು ಕಾಪಾಡಿಕೊಳ್ಳಲು ಈ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಜೀವನದಲ್ಲಿ ಅತಿದೊಡ್ಡ ರಿಸ್ಕ್ ಯಾವುದು?”: ರಾಹುಲ್ ಗಾಂಧಿಗೆ ವಿದ್ಯಾರ್ಥಿನಿ ನೀಡಿದ ಅಚ್ಚರಿಯ ಉತ್ತರ!
