ಬೆಂಗಳೂರು: ಗ್ರಾಮ ಪಂಚಾಯತಿ ಕಚೇರಿಗಳಿಗೆ ಕೆಲಸದ ನಿಮಿತ್ತ ಬರುವ ಸಾರ್ವಜನಿಕರಿಗೆ ಅಧಿಕಾರಿಗಳು ಸಿಗುತ್ತಿಲ್ಲ ಎಂಬ ದೂರುಗಳಿಗೆ ಇತಿಶ್ರೀ ಹಾಡಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ (New Rules) ಕೈಗೊಂಡಿದೆ. ಇನ್ಮುಂದೆ ಪಂಚಾಯತಿ ಅಧಿಕಾರಿಗಳು ತಮ್ಮ ಕರ್ತವ್ಯದ ಸಮಯದಲ್ಲಿ ಕಚೇರಿಯಲ್ಲೇ ಇರುವುದನ್ನು ಖಚಿತಪಡಿಸಿಕೊಳ್ಳಲು ಪಂಚಾಯತ್ ರಾಜ್ ಇಲಾಖೆಯು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಬಯೋಮೆಟ್ರಿಕ್ ಕಡ್ಡಾಯ
ಹೊಸ ನಿಯಮದ ಪ್ರಕಾರ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು (PDO), ಕಾರ್ಯದರ್ಶಿಗಳು, ಲೆಕ್ಕ ಸಹಾಯಕರು ಮತ್ತು ಹೊರಗುತ್ತಿಗೆ ಸಿಬ್ಬಂದಿ ಸೇರಿದಂತೆ ಎಲ್ಲರೂ ‘ಪಂಚತಂತ್ರ 2.0’ ತಂತ್ರಾಂಶದ ಮೂಲಕ ಕಡ್ಡಾಯವಾಗಿ ಬಯೋಮೆಟ್ರಿಕ್ ಹಾಜರಾತಿಯನ್ನು ದಾಖಲಿಸಬೇಕು. ಕೇವಲ ಈ ಹಾಜರಾತಿಯ ಆಧಾರದ ಮೇಲೆ ಮಾತ್ರವೇ ಸಿಬ್ಬಂದಿಯ ವೇತನ ಪಾವತಿಯಾಗಲಿದ್ದು, ಈ ಬಗ್ಗೆ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕಠಿಣ ಸೂಚನೆ ನೀಡಲಾಗಿದೆ.
ಇಷ್ಟೇ ಅಲ್ಲದೆ, ಸಾರ್ವಜನಿಕರ ಅಹವಾಲುಗಳನ್ನು ಆಲಿಸಲು ಪಿಡಿಓಗಳು ಪ್ರತಿದಿನ ಕಚೇರಿಯಲ್ಲಿ ನಿಗದಿತ ಸಮಯದಲ್ಲಿ ಹಾಜರಿರುವುದು ಕಡ್ಡಾಯವಾಗಿದೆ. ಒಂದು ವೇಳೆ ಅಧಿಕಾರಿಗಳು ಕ್ಷೇತ್ರ ಕಾರ್ಯ ಅಥವಾ ಸಭೆಗಳಿಗಾಗಿ ಕಚೇರಿಯಿಂದ ಹೊರಗೆ ಹೋಗಬೇಕಾದ ಪರಿಸ್ಥಿತಿ ಬಂದರೆ, ಆ ಪ್ರವಾಸದ ಸಂಪೂರ್ಣ ವಿವರವನ್ನು ಕಚೇರಿಯ ನೋಟಿಸ್ ಬೋರ್ಡ್ನಲ್ಲಿ ಮೊದಲೇ ಪ್ರಕಟಿಸಬೇಕು. ಜೊತೆಗೆ, ಕೆಲಸದ ನಿಮಿತ್ತ ಹೊರಹೋದಾಗ ಮೂವ್ಮೆಂಟ್ ರಿಜಿಸ್ಟರ್ನಲ್ಲಿ ತಪ್ಪದೇ ಮಾಹಿತಿ ದಾಖಲಿಸಬೇಕು. ಭವಿಷ್ಯದಲ್ಲಿ ಅಧಿಕಾರಿಗಳ ಚಲನವಲನದ ಮೇಲೆ ನಿಗಾ ಇಡಲು ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಅಳವಡಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ.
ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯು ವಿವಿಧ ಪಂಚಾಯತಿಗಳಿಗೆ ಭೇಟಿ ನೀಡಿದಾಗ, ಅಧಿಕಾರಿಗಳು ಕರ್ತವ್ಯದ ಸಮಯದಲ್ಲಿ ಕಚೇರಿಯಲ್ಲಿ ಇರುತ್ತಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿತ್ತು. ಇದರಿಂದ ಗ್ರಾಮೀಣ ಭಾಗದ ಜನರ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ, ಜನರ ಕೆಲಸಗಳು ವಿಳಂಬವಾಗುವುದನ್ನು ತಪ್ಪಿಸಲು ಮತ್ತು ಆಡಳಿತದಲ್ಲಿ ಪಾರದರ್ಶಕತೆ ತರಲು ಸರ್ಕಾರ ಈ ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ. ಇನ್ಮುಂದೆ ಕೆಲಸದ ಅವಧಿಯಲ್ಲಿ ಕಚೇರಿಯಲ್ಲಿ ಇಲ್ಲದ ಅಧಿಕಾರಿಗಳು ನೇರ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಇಲಾಖೆ ಎಚ್ಚರಿಸಿದೆ.
ಇದನ್ನೂ ಓದಿ: ಬಾಗಲಕೋಟೆ ಕಾಂಗ್ರೆಸ್ನಲ್ಲಿ ಬಂಡಾಯದ ಬಿಸಿ: ಬಿಜೆಪಿ ಬೆಂಬಲಿಸಿದ ಮೂವರು ಪ್ರಭಾವಿ ನಾಯಕರ ಅಮಾನತು
